ತಾಲ್ಲೂಕಿನಾದ್ಯಂತ ಉತ್ತಮ ಮಳೆ..!

ಚಳ್ಳಕೆರೆ

     ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಬಿದ್ದ ಹದ ಮಳೆ, ತಾಲ್ಲೂಕಿನ ಹಲವಾರು ಕೆರೆಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೊಸ ನೀರು ಆವರಿಸಿಕೊಳ್ಳಲು ಸಾಧ್ಯವಾಗಿದೆ. ಈಗಾಗಲೇ ಸುಮಾರು 630ಕ್ಕೂ ಹೆಚ್ಚು ಎಂ.ಎಂ ಮಳೆ ದಾಖಲಾಗಿದ್ದು, ಸೋಮವಾರದ ಮಳೆ ಎಲ್ಲೆಡೆ ಸಮೃದ್ಧವಾಗಿ ಬಂದಿದೆ ಎನ್ನಲಾಗಿದೆ.

      ಸೋಮವಾರ ರಾತ್ರಿ ನಾಯಕನಹಟ್ಟಿ 38.02, ತಳಕು 32.02, ಪರಶುರಾಮಪು 29.02, ದೇವರಮರಿಕುಂಟೆ 14.03, ಚಳ್ಳಕೆರೆ 10.02 ಒಟ್ಟು 124.01 ಎಂ.ಎಂ. ಮಳೆಯಾಗಿದ್ದು, ಪ್ರಸ್ತುತ ವರ್ಷದ ಈ ಮಳೆ ಹಿಂದಿನ ಎಲ್ಲಾ ಮಳೆಗಳ ದಾಖಲೆಯನ್ನು ಮೀರಿ ಬಂದಿದೆ ಎನ್ನಲಾಗಿದೆ. ತಾಲ್ಲೂಕಿನ ಐತಿಹಾಸಿಕ ಕೆರೆಯಾದ ರಾಣೆಕೆರೆಗೂ ಸಹ ನೀರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದು ಸುತ್ತಮುತ್ತಲ ಗ್ರಾಮದ ಜನರು ಕೆರೆ ನೀರು ಬರುವ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ಧಾರೆ. ಈಗಾಗಲೇ ಕೆರೆಯಲ್ಲಿ 8 ಅಡಿ ನೀರು ದಾಖಲಾಗಿದ್ದು, ಇನ್ನೂ 4 ಅಡಿ ನೀರು ಆಗಮಿಸಿದಲ್ಲಿ ಕೆರೆ ಕೋಡಿ ಬೀಳುವ ಸಂಭವವಿದೆ ಎನ್ನಲಾಗಿದೆ.

       ತಾಲ್ಲೂಕಿನ ನಾಯಕನಹಟ್ಟಿ ಮತ್ತು ತಳಕು ಹೋಬಳಿ ಮಟ್ಟದಲ್ಲಿ ಉತ್ತಮ ಮಳೆಯಾಗಿದ್ದು, ಆ ಭಾಗದ ಅನೇಕ ರಸ್ತೆಗಳು ನೀರಿನಿಂದ ಆವೃತ್ತವಾಗಿ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಕಾಲುವೇಹಳ್ಳಿಯಿಂದ ಯಾದಲಗಟ್ಟೆಗೆ ತೆರಳುವ ಮಣ್ಣಿನ ರಸ್ತೆಯಲ್ಲಿ ನೀರು ತುಂಬಿ ಜನ ಮತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ತಾಲ್ಲೂಕಿನ ಗೋಪನಹಳ್ಳಿ ಮತ್ತು ದೊಡ್ಡೇರಿ ಗ್ರಾಮದ ಹಳ್ಳದಲ್ಲಿ ನೀರು ಬೊರ್ಬರೆಯುತ್ತಿದ್ದು, ಮೀರಸಾಬಿಹಳ್ಳಿ ರಾಣಿಕೆರೆಯತ್ತ ನೀರು ಹರಿಯುತ್ತಿದೆ. ಒಟ್ಟಿನಲ್ಲಿ ಪ್ರಸ್ತುತ ವರ್ಷ ತಾಲ್ಲೂಕಿನಾದ್ಯಂತ ಸಮೃದ್ಧ ಮಳೆಯಾಗಿದ್ದು, ಜನತೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

      ತಾಲ್ಲೂಕಿನ ಹಲವಾರು ಚೆಕ್ ಡ್ಯಾಮ್‍ಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಿವೆ. ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ಬಂದ ಪರಿಣಾಮವಾಗಿ ಹಲವಾರು ಬೋರ್‍ವೆಲ್‍ಗಳಲ್ಲಿ ನೀರು ಕಾಣಿಸಿಕೊಂಡಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದ ಎಂಟು ಗೋಶಾಲೆಗಳಲ್ಲಿದ್ದ ಸಾವಿರಾರು ದನಕರುಗಳು ಮಳೆ ಬಂದಿದ್ದರಿಂದ ವಾಪಾಸ್ ತಮ್ಮ ಗ್ರಾಮಗಳತ್ತ ಹೊರಟು ಹೋಗಿವೆ.

      ನಿರಂತರ ಮಳೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಲವಾರು ಮಣ್ಣಿನ ರಸ್ತೆಗಳಲ್ಲಿ ಕಂದಕ ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಆಟೋರಿಕ್ಷಾ, ಮೋಟಾರ್ ಬೈಕ್‍ಗಳಲ್ಲಿ ತೆರಳುವ ಪ್ರಯಾಣಿಕರಿಗೆ ರಸ್ತೆ ಮೇಲೆ ನೀರು ಶೇಖರಣೆ ಯಾದ್ದರಿಂದ ನೀರನ್ನು ದಾಟಿ ಹೋಗಲು ಆತಂಕ ಪಡುತ್ತಿದ್ದಾರೆ. ಒಟ್ಟಿನಲ್ಲಿ ತಡವಾಗಿಯಾದರೂ ಅಡವಾಗಿ ಮಳೆ ಬಂದಿದೆ ಎಂಬುವುದು ಜನರಿಗೆ ಸಮದಾನ ತರುವ ವಿಷಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link