ದಾವಣಗೆರೆ:
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರುಗಳ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಆರೋಪಿಸಿದ್ದಾರೆ.
ದಾಳಿಯ ಅಸಲಿತ್ತು ಏನು?:
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಸೀಟುಗಳನ್ನು ಕೋಟ್ಯಂತರ ರೂ.ಗಳಿಗೆ ಅಕ್ರಮವಾಗಿ ಮಾರಾಟ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಒಟ್ಟು 57 ಮೆಡಿಕಲ್ ಕಾಲೇಜುಗಳಲ್ಲೂ ಅಕ್ರಮ ಸೀಟು ಮಾರಾಟ ಮಾಡಿಕೊಳ್ಳುವ ವ್ಯವಸ್ಥಿತ ಜಾಲ ಇದೆ. ಹೀಗಿರುವಾಗ, ಡಾ.ಜಿ.ಪರಮೇಶ್ವರ್ ಹಾಗೂ ಆರ್.ಎಲ್.ಜಾಲಪ್ಪನವರ ಶಿಕ್ಷಣ ಸಂಸ್ಥೆಗಳ ಮೇಲೆಯೇ ದಾಳಿ ಮಾಡಿರುವುದರ ಹಿಂದಿನ ಅಸಲಿಯತ್ತು ಏನು ಎಂದು ಪ್ರಶ್ನಿಸಿದರು.
ಮೋದಿ-ಶಾ ಷಡ್ಯಂತ್ರ:
ಈ ಐಟಿ ದಾಳಿಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಷಡ್ಯಂತ್ರವಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾದ ಮೇಲೆ ಸ್ವಯತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ, ಚುನಾವಣಾ ಆಯೋಗ ಮೋದಿ ಮತ್ತು ಶಾ ಅಣತಿಯಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು.
ದುರುದ್ದೇಶದ ದಾಳಿ:
ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿ ಅನರ್ಹಗೊಂಡಿರುವ 17 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್ ನಾಯಕರನ್ನು ವಿಚಲಿತರನ್ನಾಗಿಸುವ ದುರುದ್ದೇಶದಿಂದ ಮೋದಿ ಹಾಗೂ ಅಮಿತ್ ಶಾ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಐಟಿಯಿಂದ ಈ ದಾಳಿ ಮಾಡಿಸಿದ್ದಾರೆಂದು ಆಪಾದಿಸಿದರು.
ಇಂತಹ ರಾಜಕೀಯ ಪ್ರೇರಿತ ದಾಳಿ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಯವರು ಮಾತ್ರ ಸತ್ಯಹರೀಶ್ಚಂದ್ರರು ಇನ್ನುಳಿದವರೆಲ್ಲರೂ ಕಳ್ಳರು ಎಂಬುದಾಗಿ ಬಿಂಬಿಸಲು ಹೊರಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಗರ ಮೇಲೂ ದಾಳಿ ಮಾಡಿ:
ಬರೀ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆಯು ಬಿಜೆಪಿಗೆ ಸೇರಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಚಿವರುಗಳಾದ ಸಿ.ಟಿ.ರವಿ, ಆರ್. ಅಶೋಕ್, ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರರ ಮೇಲೆ ಸ್ವಯಂ ಪ್ರೇರಿತವಾಗಿ ದಾಳಿ ನಡೆಸಬೇಕು. ದಾಳಿಯ ವೇಳೆ ಇವರುಗಳ ಮನೆಗಳಲ್ಲಿ ಅಕ್ರಮ ಸಂಪತ್ತು ಸಿಗದಿದ್ದರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಅಘೋಷಿತ ತುರ್ತು ಪರಿಸ್ಥಿತಿ:
ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ದೇಶದ್ರೋಹ ಪಟ್ಟ ಕಟ್ಟಲಾಗುತ್ತಿದ್ದು, ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ದೇಶ ಅಪಾಯಕಾರಿ ಸ್ಥಿತಿಯಲ್ಲಿದ್ದು, ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ ಎಂದು ಅವರು ದೂರಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ತಿಮ್ಮಣ್ಣ, ಹದಡಿ ವೆಂಕಟೇಶ್, ತಿರುಮಲೇಶ್, ಡಿ.ಶಿವಕುಮಾರ್, ಮಹೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








