ಸ್ಮಾಟ್‍ಸಿಟಿ ಯೋಜನೆಯ ಕಾರ್ಯ ಯೋಜನೆಗಳು..!

ಹಸಿರೀಕರಣ ಯೋಜನೆ
    ತುಮಕೂರು ನಗರದಲ್ಲಿರುವ ಉದ್ಯಾನವನಗಳಲ್ಲಿ ಕೆಲವು ಉದ್ಯಾನವನಗಳನ್ನು ಆಯ್ದುಕೊಂಡು ಅಭಿವೃದ್ದಿ ಪಡಿಸಲು ರೂ.25.00 ಕೋಟಿಗಳ ಅನುದಾನವನ್ನು ಮೀಸಲಿರಿಸಿದ್ದು, ಶಿಲ್ಪಿಗಳ ವನ, ಥೀಮ್ ಪಾರ್ಕ್, ಜಿಮ್ ಪಾರ್ಕ್,  ವರ್ಣರಂಜಿತ, ಫಲಪುಷ್ಪ ಸಸಿಗಳನ್ನು ಒಳಗೊಂಡ ಸಸ್ಯವನವನ್ನು ನಿರ್ಮಿಸಲು  ಈಗಾಗಲೇ  ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. 
ಕ್ರೀಡಾ ಸಂಕೀರ್ಣ ಅಭಿವೃದ್ಧಿ
    ನಗರದಲ್ಲಿರುವ ಮಹಾತ್ಮಾಗಾಂಧಿ ಕ್ರೀಡಾಂಗಣವನ್ನು ಪುನರಾಭಿವೃದ್ಧಿಗೊಳಿಸಲು ವಿವಿಐಪಿ  ಗ್ಯಾಲರಿ,   ಸುಮಾರು  6000 ಜನ ಪ್ರೇಕ್ಷಕರಿಗಾಗಿ ಕುಳಿತುಕೊಳ್ಳುವ ಸೌಲಭ್ಯ, ಕ್ರೀಡಾಪಟುಗಳಿಗೆ ತಂಗಲು  ವಸತಿ ಸೌಲಭ್ಯ, ವಾಣಿಜ್ಯ ಮಳಿಗೆ ಮತ್ತು ಒಳಾಂಗಣ  ವ್ಯಾಯಾಮಕ್ಕಾಗಿ ರೂ.52.30 ಕೋಟಿಗಳ ಯೋಜನೆಗೆ ಅನುಮೋದನೆ ನೀಡಿದ್ದು,  ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇದರಲ್ಲಿ ಸಿಂಥಟಿಕ್ ಟ್ರಾಕ್‍ಅನ್ನು ಕೂಡ ಮಾಡಲಾಗುತ್ತದೆ.
ಮಾರಿಯಮ್ಮ ನಗರದ ಬಡವರಿಗೆ ಮೂಲಭೂತ ವಸತಿ ಸೌಲಭ್ಯ
     ಮಾರಿಯಮ್ಮನಗರ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಮೂಲಭೂತ ಸೌಲಭ್ಯವನ್ನು  ಒದಗಿಸುವ ನಿಟ್ಟಿನಲ್ಲಿ ರೂ. 12.33ಕೋಟಿಗಳ ವೆಚ್ಚದಲ್ಲಿ ಬಹುಮಹಡಿ  ವಸತಿ ಕಟ್ಟಡವನ್ನು ನಿರ್ಮಿಸುವ   ಯೋಜನೆಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದ್ದು,  ಕಾಮಗಾರಿಯು ಪ್ರಗತಿ  ಹಂತದಲ್ಲಿದೆ.
ಮಲ್ಟಿ ಯುಟಿಲಿಟಿ ಮಾಲ್
      ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ (ಪಿವಿಸಿ) ಮಲ್ಟಿ ಯುಟಿಲಿಟಿ ಮಾಲ್‍ನ್ನು ಬಹು ದಿನಗಳಿಂದ ಪಾಳುಬಿದ್ದಿರುವ ವಿನಾಯಕ ಮಾರುಕಟ್ಟೆ ಆವರಣದಲ್ಲಿ ನಿರ್ಮಾಣ ಮಾಡಲು   ಯೋಜಿಸಿದ್ದು, ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುತ್ತಿದೆ. ಯೋಜನೆಯ ಅಂದಾಜು ವೆಚ್ಚ ರೂ.60.0 ಕೋಟಿಗಳಾಗಿದ್ದು, ಶೀಘ್ರದಲ್ಲೇ ಖಾಸಗಿ ಪಾಲುದಾರರ ಬಂಡವಾಳ  ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸುವಿಕೆಗಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಮಲ್ಟಿಪ್ಲೆಕ್ಸ್ , ವಸತಿ ಸೌಲಭ್ಯ (ಲಾಡ್ಜ್) , ವಾಣಿಜ್ಯ  ಮತ್ತು ಸಣ್ಣ ವ್ಯಾಪಾರೀ ಸ್ಥಳಗಳು (ಕಮರ್ಶಿಯಲ್ ಮತ್ತು ರಿಟೈಲ್ ಸ್ಪೇಸಸ್), ಹೋಟೆಲ್ ಸೌಲಭ್ಯಗಳು ಇಲ್ಲಿ ದೊರೆಯುತ್ತವೆ. ಆದರೆ ವಿನಾಯಕ ಮಾರುಕಟ್ಟೆ ಎಪಿಎಂಸಿ ವಶದಲ್ಲಿದ್ದು, ಇದನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಬಿಟ್ಟುಕೊಡುವುದೇ ಎಂಬುದು ಪ್ರಶ್ನಾರ್ಥಕವಾಗಿದೆ.
ಎಲ್‍ಇಡಿ ಬೀದಿ ದೀಪಗಳ ಅಳವಡಿಕೆ
      ಪಿಪಿಪಿ  ಮಾದರಿಯಲ್ಲಿ  ತುಮಕೂರು ನಗರದಲ್ಲಿ ಅಸ್ಥಿತ್ವದಲ್ಲಿರುವ ಸಾಂಪ್ರಾದಾಯಿಕ   ಬೀದಿ ದೀಪಗಳನ್ನು ಬದಲಾಯಿಸಿ ಎಲ್‍ಇಡಿ ದೀಪಗಳನ್ನು ಅಳವಡಿಸುವುದರ ಜೊತೆಗೆ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ವ್ಯವಸ್ಥೆಯುಳ್ಳ (ಸಿಸಿಎಂಎಸ್) ಇಂಧನ  ದಕ್ಷತೆಯ  ಯೋಜನೆಯು ಟೆಂಡರ್ ಹಂತದಲ್ಲಿರುತ್ತದೆ.
ನಗರದ ಸೌಂದರ್ಯೀಕರಣ
     ತುಮಕೂರು ನಗರದ ಪ್ರಮುಖ  ರಸ್ತೆಗಳ  ಮಧ್ಯಭಾಗದಲ್ಲಿ  ಹಸಿರೀಕರಣಗೊಳಿಸುವುದರ ಜೊತೆಗೆ ಆಯ್ದ ಪ್ರಮುಖ ಸ್ಥಳಗಳ ಗೋಡೆಗಳ ಮೇಲೆ ಪೇಂಟಿಂಗ್‍ಗಳನ್ನು ಮಾಡುವ ಮೂಲಕ  ನಗರದ ಅಂದವನ್ನು ಹೆಚ್ಚಿಸುವ ಕಾರ್ಯಕ್ಕೆ ಬಟವಾಡಿಯಲ್ಲಿ ಚಾಲನೆ ನೀಡಲಾಗಿದ್ದು, ಅದರಂತೆ ನಗರದ ಇತರೆ ಕಡೆಗಳಲ್ಲೂ ಈ ಕೆಲಸ ಮಾಡಲಾಗುತ್ತದೆ. 
ಆಯುಷ್ ಆಸ್ಪತ್ರೆ
     ತುಮಕೂರು ಜಿಲ್ಲೆಯ ಜನತೆಯ ಆರೋಗ್ಯ ಸಂರಕ್ಷಣೆಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಆಯುರ್ವೇದ ಮತ್ತು ಯುನಾನಿ ಒಳಗೊಂಡಿರುವ ಒಂದೇ ಕಡೆ ಐದು ಚಿಕಿತ್ಸಾ ವಿಭಾಗ ಹೊಂದಿರುವ ಆಯುಷ್ ಆಸ್ಪತ್ರೆಯ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲು ಮುಂದಾಗಿದ್ದು, ರೂ 12 ಕೋಟಿ ರೂ ವೆಚ್ಚದಲ್ಲಿ 50 ಹಾಸಿಗೆಗಳ ಸಾಮಥ್ರ್ಯದ ಸಂಯುಕ್ತ ಆಯುಷ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು.
ಕನ್ಸರ್ವೆನ್ಸಿ ಸ್ಥಳದಲ್ಲಿ ಪಾರ್ಕಿಂಗ್ ಬಳಕೆ
      ತುಮಕೂರು ನಗರದ ಹಲವು ಕಡೆ ಬಯಲು ಪ್ರದೇಶದಲ್ಲಿ ಮಲ, ಮೂತ್ರ ವಿಸರ್ಜನೆಯಿಂದಾಗಿ ಗಬ್ಬು ವಾಸನೆ ಹೊಡೆಯುತ್ತಿದೆ. ಅಲ್ಲದೆ ಅಲ್ಲಿ ತ್ಯಾಜ್ಯ ತಂದು ಎಸೆಯಲಾಗುತ್ತಿದ್ದು, ಇಸದನ್ನು ಸ್ವಚ್ಛಗೊಳಿಸಿ ಹಾಳು ಬಿದ್ದ ಕನ್ಸರ್ವೆನ್ಸಿ ಸ್ಥಳದಲ್ಲಿ ದ್ವಿಚಕ್ರ ವಾಹನ ನಿಲುಗಡೆಯ ಸುಂದರ ತಾಣಗಳಾಗಿ ಮಾರ್ಪಾಟು ಮಾಡಲಾಗುತ್ತಿದೆ. ಒಟ್ಟು 2 ಕೋಟಿ ರೂ ವೆಚ್ಚದಲ್ಲಿ ಮಾಡಲಾಗುತ್ತಿದ್ದು, 3 ವಿಭಾಗಗಳಲ್ಲಿ 12 ಕನ್ಸರ್ವೆನ್ಸಿಗಳಿಗೆ ಕಾಯಕಲ್ಪ ಸಿಗುತ್ತಿದೆ.
     ಇದರಲ್ಲಿ ಮೊದಲನೇ ಹಂತದಲ್ಲಿ ಮೂರು ಕನ್ಸರ್ವೆನ್ಸಿಗಳು ಪೂರ್ಣಗೊಂಡಿದ್ದು, ಮೊದಲ ಕನ್ಸರ್ವೆನ್ಸಿ ಕನರಲ್ ಕಾರ್ಯಪ್ಪ ರಸ್ತೆಯಿಂದ ಫೆಡರಲ್ ಬ್ಯಾಂಕ್ ಪಕ್ಕದ ಕನ್ಸರ್ವೆನ್ಸಿಯವರೆಗೆ, 2ನೇ ಕನ್ಸರ್ವೆನ್ಸಿ ಜನರಲ್ ಕಾರ್ಯಪ್ಪ ರಸ್ತೆಯಿಂದ ಮೋರ್ ಪಕ್ಕದ ರಸ್ತೆಯವರೆಗೆ, 3ನೇ ಕನ್ಸರ್ವೆನ್ಸಿ ಜನರಲ್ ಕಾರ್ಯಪ್ಪ ರಸ್ತೆಯಿಂದ ವಿಜಯಬ್ಯಾಂಕ್ ಎದುರುಗಡೆ ರಸ್ತೆಯವರೆಗೆ ಪೂರ್ಣಗೊಂಡು ಸಾರ್ವಜನಿಕರಿಗೆ ಮುಕ್ತವಾಗಿದೆ.
ಮರಗಳ ಸ್ಥಳಾಕರ್ಷಣೆ ಹೆಚ್ಚಿಸಲು ಸೊಗಸಾದ ಬುಲೇವಾರ್ಡ್ ಉದ್ಯಾನವನ
     ತುಮಕೂರು ನಗರದಲ್ಲಿ ಸುಮಾರು ನೂರು ವರ್ಷಕ್ಕೂ ಹಳೆಯದಾದ ಆಲದ ಮರಗಳನ್ನು ಗುರುತಿಸಿ ಸುಂದರ ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯು ಜಾರಿಗೆ ತಂದಿದ್ದು, ಚಾಲನೆ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ಮರಗಳ ಕೆಳಗೆ ಸಂವಾದಾತ್ಮಕ ವಲಯವನ್ನಾಗಿ ಅಭಿವೃದ್ಧಿ ಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮರದ ನೆರಳು, ತಣ್ಣನೆ ವಾತಾವರಣವನ್ನು ಸಾರ್ವಜನಿಕ ಉಪಯೋಗಕ್ಕೆ ನೀಡುವ ಈ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಸಾರ್ವಜನಿಕರು ವಿರಮಿಸಿಕೊಳ್ಳಲು ವಿರಾಮ ಸ್ಥಳವಾಗಿ, ಮಕ್ಕಳ ಸಣ್ಣ ಪ್ರಮಾಣದ ಆಟದ ಮೈದಾನವಾಗಿ ರೂಪಿಸುವ ಯೋಜನೆ ಇದಾಗಿದೆ.
ಜಾಗೃತಿ ಕಾರ್ಯಕ್ರಮ
       ತುಮಕೂರು ನಗರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮವನ್ನು ಸ್ಮಾರ್ಟ್ ಸಿಟಿ ವತಿಯಿಂದ ಮನೆ ಮನೆ ಪ್ರಚಾರ, ಬೀದಿ ನಾಟಕ, ಶಾಲಾ ಮಕ್ಕಳ ಜಾಥಾ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಕಾರ್ಯಕ್ರಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಭಗೀರಥ ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ.
ನವೀನ ಮಾದರಿಯ ಬಸ್ ಶೆಲ್ಟರ್
     ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸುಸಜ್ಜಿತ ಪ್ರಯಾಣಿಕ ಸ್ನೇಹಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದ್ದು, ಹಸಿರು ಮನೆ ಯೋಜನೆಯಂತೆ ಪರಿಸರ ಸ್ನೇಹಿ ನಿಲ್ದಾಣಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆ, ತುಮಕೂರು ನಗರದ ಹಲವು ಕಡೆ ಬಣ್ಣ ಬಣ್ಣದ ಆಕರ್ಷಕ ಹಾಗೂ ಸುಖಾಸೀನ ವ್ಯವಸ್ಥೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಉಚಿತ ಇಂಟರ್‍ನೆಟ್ ಒದಗಿಸುವ ಮಹತ್ವದ ಕಾರ್ಯ ಪ್ರಾರಂಭಿಸಿದ್ದು, ತುಮಕೂರು ವಿಶ್ವ ವಿದ್ಯಾಲಯದ ಬಳಿ ಈಗಾಗಲೆ ನಿರ್ಮಾಣ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap