ಜನವರಿ 12 : ‘ರಾಷ್ಟ್ರೀಯ ಯುವ ದಿನಾಚರಣೆ’  

Related image

      ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದ ಸವಿನೆನಪಿಗಾಗಿ ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ.

      ಯುವಕನೊಬ್ಬ ಕೊಲ್ಕತಾದ ಬೀದಿಯಲ್ಲಿ ನಡೆದುಹೋಗುತ್ತಿದ್ದ. ಇದ್ದಕ್ಕಿದ್ದಂತೆ ಜೋರಾದ ಶಬ್ಬ ಕೇಳಿಸಿತು. ಕುದುರೆಗಾಡಿಯೊಂದು ವೇಗವಾಗಿ ಧಾವಿಸುತ್ತಿದ್ದುದನ್ನು ನೋಡಿದನು. ಕುದುರೆ ಎಷ್ಟು ವೇಗವಾಗಿ ಓಡಲು ಸಾಧ್ಯವೊ ಅಷ್ಟೂ ವೇಗವಾಗಿ ಓಡುತ್ತಿತ್ತು. ಕುದುರೆ ಬೆದರಿದಂತಿತ್ತು. ಗಾಡಿಯಲ್ಲಿ ಕುಳಿತಿದ್ದ ಮಹಿಳೆಯೂ ಬಹಳ ಹೆದರಿದ್ದಳು. ಆಕೆ ಅಪಾಯದಲ್ಲಿದ್ದಳು, ಏಕೆಂದರೆ ಗಾಡಿ ಯಾವಾಗ ಬೇಕಾದರೂ ಉರುಳಿ ಬೀಳಬಹುದಾಗಿತ್ತು. ಯಾರೂ ಅವಳಿಗೆ ಸಹಾಯ ಮಾಡುವಂತಿರಲಿಲ್ಲ. ಇದನ್ನು ಆ ಯುವಕ ನೋಡುತ್ತಿದ್ದ. ಆತ ಬಹು ಧೈರ್ಯಶಾಲಿ. ಕುದುರೆ ಹತ್ತಿರ ಬರುತ್ತಿದ್ದಂತೆ ಓಡಿ, ತನ್ನ ಪ್ರಾಣಾಪಾಯವನ್ನೂ ಲೆಕ್ಕಿಸದೆ, ಅದರ ಲಗಾಮನ್ನು ಹಿಡಿದು ಕುದುರೆ ನಿಲ್ಲುವಂತೆ ಎಳೆದ. ಆತ ಯಾರು? ಆತನೆ ನರೇಂದ್ರ, ಮುಂದೆ ಸ್ವಾಮಿ ವಿವೇಕಾನಂದರೆಂದು ಪ್ರಸಿದ್ಧರಾದವರು.

Image result for vivekananda

      ಸ್ವಾಮಿ ವಿವೇಕಾನಂದರು ಜನ್ಮ ತಾಳಿದ್ದು 1863, ಜನವರಿ 12ನೇ ತಾರೀಖು. ಅವರ ತಂದೆ ವಿಶ್ವನಾಥದತ್ತರು, ತಾಯಿ ಭುವನೇಶ್ವರಿ ದೇವಿ. ಬಾಲ್ಯದಲ್ಲಿ ಸ್ವಾಮಿ ವಿವೇಕಾನಂದರಿಗೆ ನರೇಂದ್ರ ಎಂಬ ಹೆಸರಿತ್ತು. ವಿದ್ಯಾರ್ಥಿ ದೆಸೆಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾದ ನರೇಂದ್ರ, ಕಡೆಗೆ ಅವರ ಶಿಷ್ಯರಾಗಿ ಸ್ವಾಮಿ ವಿವೇಕಾನಂದರೆಂದು ಜಗದ್ವಿಖ್ಯಾತರಾದರು. ಅವರ ಉಜ್ವಲ ರಾಷ್ಟ್ರಪ್ರೇಮ ಹಾಗೂ ಜ್ವಲಂತ ಮಾನವ ಪ್ರೇಮ ಆದರ್ಶವಾದುದು. ಶ್ರೀ ರಾಮಕೃಷ್ಣ ಮಹಾಸಂಸ್ಥೆಯ ನಿರ್ಮಾಣಕ್ಕಾಗಿ, ಸನಾತನ ಧರ್ಮದ ಪ್ರಸಾರಕ್ಕಾಗಿ, ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಅವರು ಸ್ಪೂರ್ತಿಯ ನೆಲೆಯಾಗಿದ್ದಾರೆ.

      ನರೇಂದ್ರನ ಬಾಲ್ಯ ವೈವಿಧ್ಯಮಯವಾಗಿತ್ತು. ನರೇಂದ್ರ ತುಂಟತನಕ್ಕೆ, ಚತುರತೆಗೆ, ಬುದ್ಧಿವಂತಿಕೆಗೆ ಹೆಸರಾಗಿದ್ದ. ಭಿಕ್ಷುಕರು ಮನೆಗೆ ಬಂದರೆ ತನ್ನ ಬಟ್ಟೆಯನ್ನೇ ಕೊಟ್ಟುಬಿಡುತ್ತಿದ್ದ. ರಾಮಾಯಣ, ಮಹಾಭಾರತ ಮೊದಲಾದ ಕತೆಗಳನ್ನು ತಾಯಿಯಿಂದ ಕೇಳಿ ತಿಳಿದುಕೊಂಡಿದ್ದ. ಶಾಸ್ತ್ರಿಯ ಸಂಗೀತ ಹಾಗೂ ಮೃದಂಗ ನುಡಿಸುವುದರಲ್ಲಿ ಉತ್ತಮ ಕಲಾವಿದನಾಗಿದ್ದ. ಎಂಟ್ರೆನ್ಸ ಪರೀಕೆಯಲ್ಲಿ ಉತೀರ್ಣನಾಗಿ 1879ರಲ್ಲಿ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿ ಅಲ್ಲಿನ ಪ್ರಾಚಾರ್ಯ ವಿಲಿಯಂ ಹೇಸ್ಟಿಯವರ ಮೆಚ್ಚುಗೆಗೆ ಪಾತ್ರನಾದ ವಿದ್ಯಾರ್ಥಿಯಾಗಿದ್ದನು.

Image result for vivekananda

      1886ನೇ ಇಸವಿ ಮಾರ್ಚ15ರಂದು ಶ್ರೀ ರಾಮಕೃಷ್ಣ ಪರಮಹಂಸರು ವಿಧಿವಶರಾದರು. ನರೇಂದ್ರ ಸನ್ಯಾಸಿ ವಿವೇಕಾನಂದರೆನಿಸಿದರು. ಭಾರತೀಯ ಸಮಾಜದ ಬದುಕನ್ನು ಅರ್ಥಪೂರ್ಣವಾಗಿ ತಿದ್ದಲು ದೃಢಸಂಕಲ್ಪ ಮಾಡಿದರು. ವಿವೇಕಾನಂದರು ಮೊದಲು ಭಾರತದಲ್ಲೆಲ್ಲಾ ಸಂಚರಿಸಿ ಆಯಾ ಪ್ರದೇಶದ ರಾಜಮಹಾರಾಜರು, ವಿದ್ವಾಂಶರುಗಳನ್ನು ಭೇಟಿ ಮಾಡಿ ಶ್ರೀ ರಾಮಕೃಷ್ಣ ಪರಮಹಂಸರ ವಾಣಿಯನ್ನು ಪ್ರಚಾರ ಮಾಡಿದರು. ಯುವ ಜನರಲ್ಲಿ ಜಾಗೃತಿ ಮೂಡಿಸಿದರು. ವಿವೇಕಾನಂದರಿಗೆ ತಾನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಗಿ ಬರಬೇಕು, ಅಲ್ಲಿನ ಜನರಿಗೆ ಭಾರತದ ಜ್ಞಾನವನ್ನು ಉಣಬಡಿಸಬೇಕು, ಭಾರತೀಯ ಸಂಸ್ಕøತಿ ಮತ್ತು ಆಧ್ಯಾತ್ಮಿಕ ಸಂಪತ್ತುಗಳನ್ನು ಪರಿಚಯಿಸಿ ಭಾರತಕ್ಕೆ ಯೋಗ್ಯ ಸ್ಥಾನ ಕಲಿಸಬೇಕು ಎಂಬ ಅಪೇಕ್ಷೆಯಿತ್ತು. ಅದೇ ಸಮಯಕ್ಕೆ ಅಮೇರಿಕಾದ ಚಿಕಾಗೋ ನಗರದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುವ ಏರ್ಪಾಟಾಗಿತ್ತು. ವಿವೇಕಾನಂದರು ಅಲ್ಲಿಗೆ ಹೋಗಲು ನಿರ್ಧರಿಸಿ 1893ನೇ ಇಸವಿ ಮೇ 31ರಂದು ಅಮೇರಿಕಾಕ್ಕೆ ಪ್ರಯಾಣ ಮಾಡಿದರು. ಹಾರ್ವರ್ಡ ವಿಶ್ವವಿದ್ಯಾನಿಲಯದಲ್ಲಿ ಗ್ರೀಕ್ ಪಂಡಿತರಾಗಿದ್ದ ಪ್ರೊ. ರೈಟ್ ಮತ್ತು ಶ್ರೀಮತಿ ಹೇಲ್ ಅವರುಗಳು ಇವರಿಗೆ ನೆರವಾದರು.

Related image

     1893 ಸೆಪ್ಟೆಂಬರ್ 11ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು “ಅಮೇರಿಕಾದ ಸೋದರ ಸೋದರಿಯರೆ” ಎಂದು ಆತ್ಮೀಯತೆಯಿಂದ ಎಲ್ಲಾರನ್ನು ಸಂಭೋದಿಸಿದರು. ಈ ವಾಕ್ಯವನ್ನು ಕೇಳಿದೊಡನೆಯೇ ಸಭೆ ತನ್ನ ಅಪಾರ ಮೆಚ್ಚುಗೆಯನ್ನು ಪ್ರಚಂಡ ಕರತಾಡನ ಮಾಡುವ ಮೂಲಕ ಸೂಚಿಸಿತು. ಪುಟ್ಟ ಭಾಷಣ ಮಾಡಿ ಎಲ್ಲರ ಮನಸೂರೆಗೊಂಡು ಹಿಂದೂ ಧರ್ಮದ ಹಿರಿಮೆಯನ್ನು ಇಡೀ ಜಿಗತ್ತಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಅವರ ವಿಶೇಷ ಭಾಷಣಗಳಿಗೆ ಅನೇಕ ಸಂಘ ಸಂಸ್ಥೆಗಳು ಏರ್ಪಾಡು ಮಾಡಿದವು. ಅವರ ಭಾಷಣಗಳು ತುಂಬಾ ಅರ್ಥಪೂರ್ಣವಾಗಿಯೂ, ಮೌಖಿಕವಾಗಿಯೂ, ವಿಚಾರ ಪ್ರಚೋದಕವಾಗಿಯೂ ಇರುತ್ತಿದ್ದವು. ಮುಂದೆ ಇಂಗ್ಲೆಂಡ್ ಸೇರಿದಂತೆ ಯುರೋಪಿನ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದ ವೇದಾಂತದ ಹಿರಿಮೆಯನ್ನು ಪರಿಚಯ ಮಾಡಿಸಿದರು.

      ಇಂತಹ ಧೀಮಂತ ಸನ್ಯಾಸಿ, ಭಾರತಾಂಬೆಯ ವರಪುತ್ರ, ಸಮಾಜ ಸುಧಾರಕ, ಮಹಾಪುರುಷ, ಯೋಗಿ ತಮ್ಮ 39ನೇ ವರ್ಷದ ಕಿರುವಯಸ್ಸಿನಲ್ಲಿಯೇ ಅಂದರೆ 1902ನೇ ಇಸವಿ ಜುಲೈ 4ರಂದು ವಿಧಿವಶರಾದರು. ಅವರ ಸಂದೇಶಗಳಲ್ಲಿ ಜೀವನದ ಅಭ್ಯುದಯಕ್ಕೆ ಎಲ್ಲವೂ ದೊರೆಯುತ್ತದೆ. ಅವರ ಚಿಂತನೆ ಹಾಗೂ ಸಂದೇಶಗಳು ಯುವಕರಿಗೆ ಪ್ರೇರಣೆ ನೀಡಿ ಅವುಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ದಿವ್ಯ ಮಂತ್ರಗಳಾಗಿರುವುದರಿಂದ ಪ್ರತಿವರ್ಷ ಅವರ ಜನ್ಮ ದಿನವನ್ನು “ಯುವ ದಿನ”ವನ್ನಾಗಿ ಅರ್ಥವತ್ತಾಗಿ ಆಚರಿಲಾಗುತ್ತಿದೆ. 1985ನೇ ವರ್ಷವನ್ನು ವಿಶ್ವಸಂಸ್ಥೆ ಯುವ ವರ್ಷವನ್ನಾಗಿ ಆಚರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

– ಶ್ರೀ ನಾಗರಾಜ ನಾಯ್ಕ ಎಂ

ಹೊನ್ನಾಳಿ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap