ಅಜ್ಜಗೊಂಡನಹಳ್ಳಿ : ಖಾಸಗಿ ಕಂಪನಿಗೆ `ವೇಸ್ಟ್ ಟು ಎನರ್ಜಿ’ ಘಟಕ ಸ್ಥಾಪನೆಗೆ ಜಾಗ..! 

ತುಮಕೂರು
   “ವೇಸ್ಟ್ ಟು ಎನರ್ಜಿ” (ಕಸದಿಂದ ವಿದ್ಯುಚ್ಛಕ್ತಿ) ಘಟಕ ಸ್ಥಾಪನೆಗೆ ಖಾಸಗಿ ಕಂಪನಿಯೊಂದು ಸಲ್ಲಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿರುವ ತುಮಕೂರು ಮಹಾನಗರ ಪಾಲಿಕೆಯು, ಅಜ್ಜಗೊಂಡನಹಳ್ಳಿಯಲ್ಲಿರುವ “ಘನತ್ಯಾಜ್ಯ ವಿಲೇವಾರಿ ಘಟಕ”ದ ಆವರಣದೊಳಗೇ ಸದರಿ ಕಂಪನಿಗೆ 5 ಎಕರೆ ಜಾಗ ನೀಡಲು ಸಮ್ಮತಿಸಿದೆ.
     ತುಮಕೂರು ಮಹಾನಗರ ಪಾಲಿಕೆಯ ಸಾರ್ವಜನಿಕರ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷ ಸೈಯದ್ ನಯಾಜ್ (ಕಾಂಗ್ರೆಸ್- 8 ನೇ ವಾರ್ಡ್) ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಸ್ಥಾಯಿ ಸಮಿತಿ ಸಭೆಯಲ್ಲಿ ಇಂತಹುದೊಂದು ತೀರ್ಮಾನವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದ್ದು, ಈ ತೀರ್ಮಾನಕ್ಕೆ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಸಹಮತ ದೊರೆತಿದೆ.
     ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಮಂಡಿತವಾಗುವ ವಿಷಯ (ಸಂಖ್ಯೆ- 15)ದಲ್ಲಿ  ಈ ವಿಷಯವನ್ನು ಚರ್ಚೆಗೆ ಮಂಡಿಸಲಾಗಿತ್ತು. 
ಸಂಸ್ಥೆಯಿಂದ ಪ್ರಸ್ತಾವನೆ
     ಬೆಂಗಳೂರಿನ ಗ್ಲೋಬಲ್ ಗ್ರೀನ್ ಇಂಟರ್ ನ್ಯಾಷನಲ್ ಇನ್‍ವೆಸ್ಟ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು “ತುಮಕೂರು ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಬಳಸಿಕೊಂಡು ಪೈರಾಲಿಸಿಸ್ ತಂತ್ರಜ್ಞಾನದ ಮೂಲಕ ಪರಿಸರಕ್ಕೆ ಹಾನಿಯಾಗದಂತೆ, ವಿದ್ಯುಚ್ಛಕ್ತಿ, ಸಿಂಥೆಟಿಕ್ ಡೀಸೆಲ್ (ಯೂರೋ 6 ಗ್ರೇಡ್), ಸಾವಯವ ಗೊಬ್ಬರ ಮತ್ತು ಗ್ರೇ ವಾಟರ್ ಉತ್ಪಾದನೆ ಮಾಡುವುದಾಗಿಯೂ, ಒಂದು ಘಟಕದಲ್ಲಿ 50 ಟಿ.ಪಿ.ಡಿ. (ಟನ್ಸ್ ಪರ್ ಡೇ) ತ್ಯಾಜ್ಯವನ್ನು ಸಂಸ್ಕರಿಸಬಹುದಾಗಿದ್ದು, ಇದಕ್ಕಾಗಿ ಕನಿಷ್ಟ ಎರಡೂವರೆ ಎಕರೆಯಷ್ಟು ಸ್ಥಳಾವಕಾಶದ ಅಗತ್ಯವಿದೆ” ಎಂಬ ಪ್ರಸ್ತಾವನೆಯನ್ನು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರಿಗೆ ಸಲ್ಲಿಸಿತ್ತು.ಈ ಹಿನ್ನೆಲೆಯಲ್ಲಿ “ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ  ಪ್ರತಿನಿತ್ಯ ಸುಮಾರು 120-130 ಟನ್‍ಗಳಷ್ಟು ಘನತ್ಯಾಜ್ಯ ಉತ್ಪತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಂಪನಿಗೆ 5 ಎಕರೆಯಷ್ಟು ಜಾಗ ಬೇಕಾಗುತ್ತದೆ” ಎಂದು ಪಾಲಿಕೆಯ ಆಡಳಿತ ವರ್ಗವು ಸಭೆಗೆ ಟಿಪ್ಪಣಿ ಮಂಡಿಸಿತ್ತು. 
ಸಮಿತಿ ಅಧ್ಯಕ್ಷರ ವಾದ
    ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರೇ ಸ್ವತಃ ಈ ವಿಷಯವನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದರು. “ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು 120-130 ಟನ್‍ಗಳಷ್ಟು ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಇದನ್ನು ವಿಲೇವಾರಿ ಮಾಡುವ ಅಜ್ಜಗೊಂಡನಹಳ್ಳಿ ಘಟಕದ ನಿರ್ವಹಣೆಗಾಗಿ ಕಾರ್ಮಿಕರ ವೇತನ, ವಿದ್ಯುತ್ ಬಿಲ್ ಇತ್ಯಾದಿ ಸೇರಿ ಪಾಲಿಕೆಗೆ ಪ್ರತಿ ತಿಂಗಳೂ ಸುಮಾರು 11 ಲಕ್ಷ  ರೂ.ಗಳಷ್ಟು ವೆಚ್ಚವಾಗುತ್ತಿದೆ.
 
    ಆದರೂ ಸಹ ಪೂರ್ಣ ಪ್ರಮಾಣದಲ್ಲಿ ಘನತ್ಯಾಜ್ಯ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಆದರೆ ಗ್ಲೋಬಲ್ ಗ್ರೀನ್ ಇಂಟರ್ ನ್ಯಾಷನಲ್ ಇನ್‍ವೆಸ್ಟ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಪೈರಾಲಿಸಿಸ್ ತಂತ್ರಜ್ಞಾನವನ್ನು ಬಳಸಿಕೊಂಡು ವೇಸ್ಟ್ ಟು ಎನರ್ಜಿ ಘಟಕವನ್ನು ತಮ್ಮ ಸ್ವಂತ ವೆಚ್ಚದಿಂದಲೇ ಸ್ಥಾಪಿಸಲು ಹಾಗೂ ಅದನ್ನು ನಿರ್ವಹಿಸಲು ಮುಂದೆ ಬಂದಿದೆ. ಆದಕಾರಣ ಈ ಕಂಪನಿಗೆ ಅಜ್ಜಗೊಂಡನಹಳ್ಳಿ ಘಟಕದಲ್ಲಿ 5 ಎಕರೆ ಜಾಗ ನೀಡಿದಲ್ಲಿ, ಪಾಲಿಕೆಗೆ ವಾರ್ಷಿಕ 130 ಲಕ್ಷದಷ್ಟು ಉಳಿತಾಯವಾಗುತ್ತದೆ” ಎಂದು ಅವರು ವಿವರಿಸಿದರು.
ಯಶಸ್ಸಿನ ಉದಾಹರಣೆ ಇಲ್ಲ
     ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಪರಿಸರ ಇಂಜಿನಿಯರ್ ಮೋಹನ್ ಕುಮಾರ್, “ವೇಸ್ಟ್ ಟು ಎನರ್ಜಿ ಘಟಕವನ್ನು ಸ್ಥಾಪಿಸಿ ಯಶಸ್ಸು ಪಡೆದಿರುವ ಯಾವುದೇ ಉದಾಹರಣೆಗಳು ಸದ್ಯಕ್ಕೆ ನಮ್ಮ ಮುಂದೆ ಇಲ್ಲ” ಎಂದು ಸಭೆಯ ಗಮನ ಸೆಳೆದರು. ಮುಂದುವರೆದು “ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸದ ಕ್ಯಾಲೋರಿಫೀಕ್ ವ್ಯಾಲ್ಯೂ ಎಷ್ಟಿದೆ ಎಂಬ ಆಧಾರದ ಮೇಲೆ ಸದರಿ ತಂತ್ರಜ್ಞಾನವು ನಿರ್ಧಾರಿತವಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
     ಮತ್ತೆ ಚರ್ಚೆ ಮುಂದುವರೆಯಿತು. ಅಂತಿಮವಾಗಿ ಸದರಿ “ಗ್ಲೋಬಲ್ ಗ್ರೀನ್ ಇಂಟರ್ ನ್ಯಾಷನಲ್ ಇನ್‍ವೆಸ್ಟ್‍ಮೆಂಟ್ ಪ್ರೈವೇಟ್ ಲಿಮಿಟೆಡ್  ಕಂಪನಿಗೆ ಪೈರಾಲಿಸಿಸ್ ತಂತ್ರಜ್ಞಾನದ ಮೂಲಕ “ವೇಸ್ಟ್ ಟು ಎನರ್ಜಿ” ಘಟಕ ಸ್ಥಾಪಿಸಲು ಅಜ್ಜಗೊಂಡನಹಳ್ಳಿ ಘಟಕದ ಆವರಣದಲ್ಲಿ  5 ಎಕರೆ ಜಾಗ ನೀಡಲು” ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಈ ತೀರ್ಮಾನಕ್ಕೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link