ದಾವಣಗೆರೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್, ಅನ್ನ ಭಾಗ್ಯ ಯೋಜನೆ ನಿಲ್ಲಿಸಿದರೆ ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಜಿಲ್ಲೆಯ ಹರಿಹರದ ಮಿನಿ ವಿಧಾನಸೌಧ ಬಳಿ ಜಿಲ್ಲಾಡಳಿತ ಹಾಗೂ ಹರಿಹರ ನಗರಸಭೆ ವತಿಯಿಂದ ಏರ್ಪಡಿಸಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ನಲ್ಲಿ ಹಾಕಿರುವ ಮಾಜಿ ಪ್ರಧಾನಿ ದಿ.ಇಂದ್ರಮ್ಮನವರ ಫೋಟೋ ನೋಡಿದರೆ, ಕೆಲವರಿಗೆ ಕೋಪ ಬರುತ್ತದೆ. ಹೀಗಾಗಿ ಕ್ಯಾಂಟೀನ್ ನಿಲ್ಲಿಸುವ ಪಿತೂರು ನಡೆಸಿದ್ದು, ಇಂದಿರಾ ಕ್ಯಾಂಟೀನ್ ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ವಿವಿಧ ಕೆಲಸ ಕಾರ್ಯಗಳಿಗೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಬರುವ ಜನತೆಗೆ ಕಡಿಮೆ ಬೆಲೆಯಲ್ಲಿ ತಿಂಡಿ, ಊಟ ಸಿಗಬೇಕೆಂಬ ಕಾರಣಕ್ಕೆ ತಾವು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನಗರ ಪ್ರದೇಶಗಳ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಬಳಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ಗಳಿಗೆ ಒಂದರಂತೆ ಒಟ್ಟು 198 ಹಾಗೂ ರಾಜ್ಯದ ಇತರೆ ಪ್ರದೇಶಗಳಲ್ಲಿ 250 ಇಂದಿರಾ ಕ್ಯಾಂಟೀನ್ ಆರಂಭವಾಗಿವೆ. ಇದಕ್ಕೆ ತಗಲುವ ವೆಚ್ಚ ವರ್ಷಕ್ಕೆ ಕೇವಲ 300 ಕೋಟಿ ರೂ. ಮಾತ್ರ. ಇಂತಹ ಜನಪರ ಯೋಜನೆಯನ್ನು ಮುಂದುವರೆಸಬೇಕಾಗಿರುವ ಇಂದಿನ ಮುಖ್ಯಮಂತ್ರಿಗಳು ಈ ಕ್ಯಾಂಟೀನ್ಗಳಿಗೆ ನಗರಸಭೆ, ಮಹಾನಗರ ಪಾಲಿಕೆ ಹಣ ಕೊಡಬೇಕೇ, ಸರ್ಕಾರ ಕೊಡಬೇಕೇ ಎಂಬುದನ್ನು ಲೆಕ್ಕಚಾರ ಹಾಕಿಕೊಂಡು ಕೂತಿದ್ದಾರೆ.
ಯಡಿಯೂರಪ್ಪನವರೇ ನೀವು ಸಹ ಬೂಕನಕೆರೆಯಿಂದ ಬಂದವರು. ಹೀಗಾಗಿ ಇಂದಿರಾ ಕ್ಯಾಂಟೀನ್ಗೆ ಸ್ಥಳೀಯ ಸಂಸ್ಥೆಗಳನ್ನು ಅವಲಂಬಿಸದೇ, ಸರ್ಕಾರದಿಂದಲೇ ಹಣ ಒದಗಿಸಿ ಅವುಗಳನ್ನು ಮುಂದವರೆಸಬೇಕು. ಅಕಸ್ಮಾತ್ ಈ ಯೋಜನೆಗಾಗಿ 300 ಕೋಟಿ ಖರ್ಚು ಮಾಡಲಾಗುವುದಿಲ್ಲವೇ? ಹಾಗಾದರೆ, ಅಧಿಕಾರ ಬಿಟ್ಟು ಕೆಳಗಿಳಿಯಿರಿ ನಾವು ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಬಡವರಿಗೆ ಕಾರ್ಯಕ್ರಮಗಳನ್ನು ಕೊಡದೇ ಟಾಟಾ, ಬಿರ್ಲಾ, ಅಂಬಾನಿ, ಅದಾನಿಗಳಿಗಾಗಿ ಕಾರ್ಯಕ್ರಮ ರೂಪಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ಯಾರೂ ಸಹ ಹಸಿವಿನಿಂದ ಮಲಗಬಾರದು, ಪ್ರತಿಯೊಬ್ಬ ವ್ಯಕ್ತಿಯೂ ದಿನದ 2 ಹೊತ್ತು ಊಟ ಮಾಡಬೇಕೆಂಬ ಉದ್ದೇಶದಿಂದ ತಾವು ಅಧಿಕಾರಕ್ಕೆ ಬಂದ ತಕ್ಷಣವೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ತಲಾ 7 ಕೆಜಿ ಅಕ್ಕಿ ಉಚಿತ ವಿತರಿಸುವ ಯೋಜನೆಯನ್ನು ಜಾರಿಗೆ ತಂದಿದ್ದು, ಸುಮಾರು 4 ಕೋಟಿ ಜನರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಒಂದು ವೇಳೆ 7 ಕೆಜಿ ಅಕ್ಕಿ ವಿತರಿಸುವುದನ್ನು ನಿಲ್ಲಿಸಿದ್ದೆಯಾದರೆ, ಬಡವರ ಹೊಟ್ಟೆಯ ಮೇಲೆ ಒಡೆದಂತಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ತಾವು ನೀಡುತ್ತಿದ್ದ ಉಚಿತ ಏಳು ಕೆಜಿ ಅಕ್ಕಿಯ ಬದಲು ಈಗ 5 ಕೆಜಿ ಅಕ್ಕಿ, 2 ಕೆಜಿ ರಾಗಿಯನ್ನು ಸರ್ಕಾರ ವಿತರಿಸುತ್ತಿದೆ. ರಾಗಿ ವಿತರಣೆಗೆ ತಮ್ಮ ವಿರೋಧವಿಲ್ಲ. ಆದರೆ, ಒತ್ತಾಯ ಪೂರ್ವಕವಾಗಿ ರಾಗಿ ಕೊಡುತ್ತಿರುವುದಕ್ಕೆ ತಮ್ಮ ತಕರಾರರು ಇದೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ರಾಗಿ ವಿತರಿಸಿದರೆ, ರಾಗಿಯನ್ನು ಉಪಯೋಗಿಸದೇ ಇರುವ ಉತ್ತರ ಕರ್ನಾಟ, ಕರಾವಳಿ ಭಾಗದ ಜನ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ತಲಾ ಏಳು ಕೆಜಿ ಉಚಿತ ಅಕ್ಕಿ ವಿತರಣೆಯನ್ನು ಮುಂದುವರೆಸಬೇಕೆಂದು ಆಗ್ರಹಿಸಿದರು.
ನನ್ನ ವಿರುದ್ಧ ಕೆಲವರು ಸಿದ್ದರಾಮಯ್ಯನವರು ಕೇವಲ ಅಹಿಂದ ಸಮುದಾಯಗಳಿಗೆ ಮಾತ್ರ ಉಪ ಯೋಗ ಮಾಡಿದ್ದಾರೆಂಬುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾಕೆ ಅನ್ನ ಭಾಗ್ಯ ಯೋಜನೆಯಡಿ ಎಲ್ಲ ಸಮಾಜದವರು ಅಕ್ಕಿ ಪಡೆಯುತ್ತಿಲ್ಲವೇ? ಕ್ಷೀರಭಾಗ್ಯ ಯೋಜನೆಯಡಿ ಎಲ್ಲರೂ ಹಾಲು ಕುಡಿಯುತ್ತಿಲ್ಲವೇ? ಇಂದಿರಾ ಕ್ಯಾಂಟೀನ್ಗೆ ಬಂದು ಅಹಿಂದ ವರ್ಗದವರೇ ತಿಂತಾರಾ? ರೈತರ ಸಾಲ ಮನ್ನಾ, ವಿದ್ಯಾಸಿರಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸೇರಿದಂತೆ ತಾವು ತಂದಿರುವ ಯೋಜನೆಗಳ ಸೌಲಭ್ಯವನ್ನು ಅಹಿಂದ ವರ್ಗದ ಜನತೆ ಅಷ್ಟೇ ಅನುಭವಿಸುತ್ತಿದ್ದಾರೆಯೇ? ಬೇರೆ ವರ್ಗದವರು ಯಾರೂ ಇವುಗಳ ಸೌಲಭ್ಯ ಪಡೆಯುತ್ತಿಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿದರು.
ಎಲ್ಲಾ ವರ್ಗದ ಜನತೆಗೆ ಇಷ್ಟೇಲ್ಲಾ ಯೋಜನೆಗಳನ್ನು ನೀಡಿದರೂ, ಅಪಪ್ರಚಾರ ಮಾಡುವವರ ಮಾತು ಕೇಳಿ, ನಮ್ಮನ್ನು ಕೈಬಿಟ್ರಲ್ಲಾ ಹೇಂಗೆ? ಎಂದು ಸಾರ್ವಜನಿಕರ ಮುಂದೆ ಪ್ರಶ್ನೆ ಇಟ್ಟರು.ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ನೂರು ಸುಳ್ಳು ಹೇಳಿಕೊಂಡು ತಿರುಗುವವರೆಗೆ ಮಾನ್ಯತೆ ಇದೆ. ಆದರೆ, ಕೆಲಸ ಮಾಡಿದವರಿಗೆ ಮಣೆ ಹಾಕುವುದಿಲ್ಲ ಎಂಬುದನ್ನು ಕಳೆದ ಚುನಾವಣೆಯಲ್ಲಿ ತೋರಿಸಿಬಿಟ್ಟಿರಿ, ದೇಶದ ಬೇರೆ ರಾಜ್ಯಗಳ ಯಾವ ಮುಖ್ಯಮಂತ್ರಿಗಳು ಮಾಡದಷ್ಟು ಕೆಲಸವನ್ನು ನಮ್ಮ ಸಿದ್ದರಾಮಯ್ಯನವರು ರಾಜ್ಯದ ಬಡವರಿಗಾಗಿ ಮಾಡಿದ್ದಾರೆ.
ನಿಮ್ಮ ಬಗ್ಗೆ ಕಾಳಜಿ ಮಾಡುವವರನ್ನು ನೀವು ಕಾಳಜಿ ಮಾಡಿದರೆ, ಜನಪರ ಸರ್ಕಾರ ಅಧಿಕಾರಕ್ಕೆ ಬರುತ್ತದೆ.ಇಲ್ಲದಿದ್ದರೆ, ಈಗಿನ ಯಡಿಯೂರಪ್ಪ ಸರ್ಕಾರ ಬಡವರ ಪರವಾಗಿರುವ ಒಂದೊಂದೇ ಯೋಜನೆಗಳನ್ನು ಬಂದ್ ಮಾಡಿಕೊಂಡು ಹೋಗುವ ಸರ್ಕಾರ ಸಿಗಲಿದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕು. ಇನ್ನೊಮ್ಮೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಹಸಿವು ಮುಕ್ತ ಕರ್ನಾಟಕ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ, ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಕಡಿಮೆ ವೆಚ್ಚದಲ್ಲಿ ಊಟ, ತಿಂಡಿ ಸಿಗಬೇಕೆಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಆರಂಭಿಸಿರುವುದೇ ಬಡವರ ಬಗ್ಗೆ ಅವರಿಗಿರುವ ಕಳಕಳಿಯನ್ನು ತೋರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರುಗಳಾದ ಪ್ರಕಾಶ್ ರಾಠೋಡ್, ಅಶೋಕ್ ಪಟ್ಟಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಎಸ್ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಮುಖಂಡರಾದ ಎಂ.ಪಿ.ವೀಣಾ ಮಹಾಂತೇಶ್, ಪಿ.ರಾಜಕುಮಾರ, ಅಯೂಬ್ ಪೈಲ್ವಾನ್, ರೇವಣಸಿದ್ದಪ್ಪ, ನಾಗೇಂದ್ರಪ್ಪ, ಎಲ್.ಬಿ.ಹನುಮಂತಪ್ಪ, ಅಹ್ಮದ್ ಅಲಿ ಮತ್ತಿತರರು ಹಾಜರಿದ್ದರು. ವಾಣಿ, ಭಾರತಿ ಪ್ರಾರ್ಥಿಸಿದರು. ಗಿರಿಜಾಂಭಾ, ಶ್ರೀನಿಧಿ ನಾಡಗೀತೆ ಹಾಡಿದರು. ನಗರಸಭಾ ಸದಸ್ಯ ಶಂಕರ್ ಕಟಾವಕರ್ ಸ್ವಾಗತಿಸಿದರು. ಪೌರಾಯುಕ್ತೆ ಎಸ್.ಲಕ್ಷ್ಮೀ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ