ಅಶೋಕ ರಸ್ತೆಯ ಅಧ್ವಾನಕ್ಕೆ ಜನತೆಯ ಅಸಮಾಧಾನ
ತುಮಕೂರು
ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಾಮಗಾರಿಗಳು ಹಾಗೂ ಕಾರ್ಯವೈಖರಿ ಬಗ್ಗೆ ತುಮಕೂರಿನ ಜನ ರೋಸಿಹೋಗಿದ್ದಾರೆ. ಗೊತ್ತುಗುರಿ ಇಲ್ಲದಂತೆ ನಡೆಯುತ್ತಿರುವ ಕಾಮಗಾರಿಗಳ ಅವ್ಯವಸ್ಥೆಯಿಂದ ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸ ನಡೆಯುವಾಗ ಕೆಲ ಅನಾನುಕೂಲವಾಗುವುದು ಸಹಜ. ಆದರೂ ಸಾಧ್ಯವಾದಷ್ಟು ಜನರಿಗೆ ತೊಂದರೆ ಆಗದಂತೆ, ಸಂಚಾರಕ್ಕೆ ತೊಡಕಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಆದರೆ ಈ ಬಗ್ಗೆ ಗುತ್ತಿಗೆದಾರರಾಗಲಿ, ಸಂಬಂಧಿಸಿದ ಉಸ್ತವಾರಿ ಅಧಿಕಾರಿಗಳಾಗಲೀ ಗಮನಹರಿಸದೆ ನಿರ್ಲಕ್ಷ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೇಸರವೆಂದರೆ, ಯಾವ ಕಾಮಗಾರಿಗಳೂ ಸಮರ್ಪಕವಾಗಿ ಸಕಾಲದಲ್ಲಿ ಮುಗಿಯುತ್ತಿಲ್ಲ, ಮುಗಿಸಬೇಕೆಂಬ ಕಾಳಜಿಯೂ ಸಂಬಂಧಿಸಿದವರಿಗೆ ಇದ್ದಂತಿಲ್ಲ. ವಿಳಂಬಕ್ಕೆ ಕಾರಣವೇನು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಕ್ರಮವೇನು ಎಂದು ಜನರಿಗೆ ಹೇಳುವವರು ಯಾರೂ ಇಲ್ಲ ಎನ್ನುವಂತಾಗಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧಿಕಾರಿಗಳು ಬಹುತೇಕ ಸಾರ್ವಜನಿಕರಿಂದ ದೂರ ಉಳಿದುಬಿಟ್ಟಿದ್ದಾರೆ. ಜನರಿಗೆ ಆಗುತ್ತಿರುವ ಅನಾನುಕೂಲಗಳನ್ನು ಸರಿಪಡಿಸುವ, ಸೂಕ್ತ ಸಮಜಾಯಿಷಿ ನೀಡುವ ಗೋಜಿಗೆ ಹೋಗುತ್ತಿಲ್ಲ. ಈ ಸ್ಥಿತಿಯಲ್ಲಿ ತುಮಕೂರಿನ ಶಾಸಕರು, ಸಂಸದರೂ ಕಠಿಣ ಸೂಚನೆ ನೀಡದೆ ಮೃದುಧೋರಣೆ ತಾಳಿರುವುದೂ ಈ ಅವ್ಯವಸ್ಥೆಗೆ ಕಾರಣವೇನೊ ಎಂದು ಅಶೋಕ ರಸ್ತೆಯ ಅಂಗಡಿಯ ವರ್ತಕರೊಬ್ಬರು ಹೇಳುತ್ತಾರೆ.
ಸದಾ ವಾಹನಗಳಿಂದ ತುಂಬಿತುಳುಕುವ ಅಶೋಕ ರಸ್ತೆಯನ್ನು ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್‍ನವರು ಹಲವು ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಿದ್ದರು. ಈಗ ಅದು ಯಾವ ಹಂತದಲ್ಲಿದೆ, ಪೂರ್ಣಗೊಳ್ಳುವುದು ಯಾವಾಗ ಎಂದು ಸಂಸ್ಥೆಯ ಅಧಿಕಾರಿಗಳಿಗೇ ಗೊತ್ತಿಲ್ಲವೇನೋ ಎನ್ನುವ ಮಟ್ಟಿಗೆ ಅಲ್ಲಿ ಯಾವುದೂ ನಿಯಮಿತವಾಗಿ ನಡೆಯುತ್ತಿಲ್ಲ.
ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ನಿಲ್ದಾಣಗಳಿರುವ ಅಶೋಕ ರಸ್ತೆಯಲ್ಲಿ ನಿತ್ಯ ಸಾವಿರಾರು ಬಸ್‍ಗಳು ಬಂದು ಹೋಗುತ್ತವೆ, ಲೆಕ್ಕವಿಲ್ಲದಷ್ಟು ಖಾಸಗಿ ವಾಹನಗಳು ಅಶೋಕ ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ಇಲ್ಲಿ ವಾಹನ ಚಾಲನೆ ಹಾಗೂ ಪಾದಚಾರಿಗಳು ರಸ್ತೆ ದಾಟುವುದು ಯಮಯಾತನೆ. ಸಾಲದಕ್ಕೆ ಸ್ಮಾರ್ಟ್ ಸಿಟಿಯವರು ಈ ರಸ್ತೆಯ ಜೆಡಿಎಸ್ ಕಚೇರಿ ಮುಂದೆ ಹಾಗೂ ನ್ಯಾಯಾಲಯ ಕಚೇರಿ ಹಿಂಭಾಗ ಆಳುದ್ದದ ಕಾಲುವೆ ತೆಗೆಯುತ್ತಾ ಬೆಟ್ಟದ ಗಾತ್ರದ ಮಣ್ಣಿನ ರಾಶಿಯನ್ನು ರಸ್ತೆ ನಡುವೆ ಸುರಿದು ವಾಹನಗಳ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ. ಇಲ್ಲಿ ಸಂಚಾರ ನಿಯಂತ್ರಿಸಲು ಪೊಲೀಸರು ದಿನವಿಡಿ ಹೆಣಗಾಡುತ್ತಿದ್ದಾರೆ.
ರಾಶಿ ಮಣ್ಣನ್ನು ನಡುರಸ್ತೆಗೆ ಸುರಿದರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಅರಿವು ಗುತ್ತಿಗೆದಾರರಿಗಾಗಲೀ, ಅಧಿಕಾರಿಗಳಿಗಾಗಲೀ ಇಲ್ಲವೆ? ತೆಗೆದಿರುವ ಹಳ್ಳವನ್ನು ಸಕಾಲದಲ್ಲಿ ಮುಚ್ಚುತ್ತಾರೆ ಎಂಬ ನಂಬಿಕೆ ಇಲ್ಲ, ಮುಚ್ಚಲು ಇನ್ನೆಷ್ಟು ದಿನ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅಲ್ಲಿಯವರೆಗೂ ಸಾರ್ವಜನಿಕರು ತೊಂದರೆ ಅನುಭವಿಸಬೇಕೆ? ಹಳ್ಳ ತೆಗೆದ ಮಣ್ಣನ್ನು ಬೇರೆಡೆ ಸಂಗ್ರಹಿಸಬೇಕಾಗಿತ್ತು, ಜನರಿಗೆ ತೊಂದರೆ ಕೊಡುವುದೇ ಸ್ಮಾರ್ಟ್ ಸಿಟಿಯವರ ಕೆಲಸವಾಗಿದೆ ಎಂದು ಸ್ಥಳದಲ್ಲಿದ್ದ ಸದಾಶಿವನಗರ ವಾಸಿ ಮಧುಸೂದನ್ ಬೇಸರ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾಮಗಾರಿಗೆ ನಮ್ಮ ಅಭ್ಯಂತರವಿಲ್ಲ, ಆದರೆ ಸ್ಮಾರ್ಟ್ ಸಿಟಿಯವರು ಆರಂಭಿಸಿರುವ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ತೀರಾ ನಿಧಾನಗತಿಯಲ್ಲಿ ನಡೆಯುತ್ತಿವೆ. ಇವೆಲ್ಲಾ ಕೆಲವು ದಿನಗಳಲ್ಲಿ ಮುಗಿಯುವಂತಿಲ್ಲ, ವರ್ಷಗಟ್ಟಲೆ ಬೇಕಾಗಬಹುದು ಎಂದು ಸಿಪಿಐನ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಅಸಹನೆಗೊಂಡರು.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಜನರ ಅನುಕೂಲಕ್ಕೆ ನಡೆಯುತ್ತಿರುವಂತೆ ಕಾಣುತ್ತಿಲ್ಲ, ಗುತ್ತಿಗೆದಾರರ ಅನುಕೂಲಕ್ಕೆಂದೇ ಮಾಡಿಕೊಂಡಂತಿದೆ, ಕಾಮಗಾರಿ ವಿಳಂಬ ಮಾಡಿ ಸಾಮಗ್ರಿಗಳ ಬೆಲೆ ಏರಿಕೆಯಾಗಿವೆ ಎಂದು ಗುತ್ತಿಗೆ ಮೊತ್ತ ಹೆಚ್ಚಿಸಿಕೊಂಡು ಸಾರ್ವಜನಿಕ ಹಣವನ್ನು ಪೋಲು ಮಾಡುವ ಪ್ರಯತ್ನ ನಡೆಯುತ್ತಿವೆ ಎಂಬ ಅನುಮಾನವಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಈಬಗ್ಗೆ ಎಚ್ಚರವಹಿಸಿ ಕಾಮಗಾರಿಗಳು ಸಕಾಲದಲ್ಲಿ ಮುಗಿಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಶೋಕ ರಸ್ತೆಯಲ್ಲಿ ಫುಟ್‍ಪಾತ್ ಇದೆಯಾದರೂ ಅಲ್ಲಿ ಪಾದಚಾರಿಗಳು ನಡೆದು ಹೋಗಲಾಗುತ್ತಿಲ್ಲ. ಫುಟ್‍ಪಾತ್ ಉದ್ದಕ್ಕೂ ಅಂಗಡಿಗಳನ್ನು ಇಡಲು ಅವಕಾಶ ನೀಡಿ ಪಾದಚಾರಿಗಳಿಗೆ ತೊಂದರೆ ಮಾಡಲಾಗಿದೆ. ಕೆಲವು ಕಡೆ ಅಂಗಡಿಯವರು ತಮ್ಮ ಸಾಮಗ್ರಿಗಳನ್ನು ಫುಟ್‍ಪಾತ್‍ವರೆಗೂ ಇಟ್ಟುಕೊಂಡು ಜನ ಓಡಾಡದಂತೆ ಮಾಡಿದ್ದಾರೆ. ಒಂದೇ ಸಮ ಬರುವ ವಾಹನಗಳ ನಡುವೆ ಜನ ರಸ್ತೆಗಿಳಿದು ನಡೆದುಹೋಗಬೇಕಾಗಿದೆ. ನಗರಪಾಲಿಕೆಯವರು ಫುಟ್‍ಪಾತ್ ತೆರವು ಮಾಡಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿನೋಬ ನಗರದ ರಾಮಚಂದ್ರಯ್ಯ ಹೇಳಿದರು.
ಅಶೋಕ ರಸ್ತೆಯ ಪಕ್ಕದಲ್ಲಿರುವ ಪಾದಚಾರಿ ಮಾರ್ಗಗಳನ್ನು ನೋಡಿದಾಗ ಇದೇನು ರಸ್ತೆಯೋ ಪಾದಚಾರಿ ಮಾರ್ಗವೋ ಎಂಬ ಅನುಮಾನಮೂಡುತ್ತದೆ. ಪಾದಚಾರಿ ಮಾರ್ಗಗಳನ್ನು ದ್ವಿಚಕ್ರ ವಾಹನಗಳು ಆಕ್ರಮಿಸಿಕೊಂಡು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಎದುರಿಗಿನ ಫುಟ್‍ಪಾತ್‍ನಲ್ಲಿ ದ್ವಿಚಕ್ರ ವಾಹನ, ಆಟೋಗಳನ್ನು ನಿಲ್ಲಿಸಿ ಜನರಿಗೆ ತೊಂದರೆ ಮಾಡಲಾಗುತ್ತದೆ. ಖಾಸಗಿ ಬಸ್ಟಾಂಡ್ ಮುಂದಿನ ಕಾಂಪ್ಲೆಕ್ಸ್ ಬಳಿಯ ಪಾದಚಾರಿ ಮಾರ್ಗದಲ್ಲಂತೂ ಸಾಲಾಗಿ ಬಾಡಿಗೆ ಆಟೋಗಳು ನಿಂತಿರುತ್ತವೆ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಬೇಕು ಎಂದು ಸಾಹಿತಿ, ಊರುಕೆರೆ ನಿವಾಸಿ ಪ್ರಕಾಶ್ ಕೆ. ನಾಡಿಗ್ ಮನವಿ ಮಾಡಿದರು.
ಅಶೋಕ ರಸ್ತೆಯಲ್ಲಿ ಸ್ಮಾರ್ಟ್ ಸಿಟಿಯವರು ಡಕ್ಟ್ ನಿರ್ಮಾಣಕ್ಕೆ ತೆಗೆದ ಹಳ್ಳವನ್ನು ಪೂರ್ಣವಾಗಿ ಮುಚ್ಚಿಲ್ಲ. ಜೊತೆಗೆ ಈ ರಸ್ತೆ ಅಲ್ಲಲ್ಲಿ ಗುಂಡಿಬಿದ್ದು ಹಾಳಾಗಿದೆ. ಸ್ಮಾರ್ಟ್ ಸಿಟಿಯವರು ಎಂದೋ ಮಾಡಬಹುದಾದ ಸ್ಮಾರ್ಟ್ ರಸ್ತೆಗಾಗಿ ಕಾಯದೆ ನಗರ ಪಾಲಿಕೆಯವರು ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಜನರ ಒತ್ತಾಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ