ತುಮಕೂರು
ತುಮಕೂರು ನಗರದ ಎಸ್.ಐ.ಟಿ. ಮತ್ತು ಸೋಮೇಶ್ವರ ಪುರಂ ಮಧ್ಯ ಭಾಗದಲ್ಲಿರುವ ದೋಬಿಘಾಟ್ ಬಳಿ ಸೋಮವಾರ ಬೆಳಗ್ಗೆ ಬೇರೆಲ್ಲಿಂದಲೋ ಕಸವನ್ನು ತಂದು ಎಸೆಯುತ್ತಿದ್ದುದನ್ನು ತುಮಕೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಪತ್ತೆ ಮಾಡಿದ್ದು, ಸದರಿಯವರಿಗೆ 5000 ರೂ. ದಂಡವನ್ನು ವಿಧಿಸಿದ ಪ್ರಸಂಗ ನಡೆದಿದೆ.
ಈ ಮೊದಲು ಇಲ್ಲಿ ಕಸದ ರಾಶಿ ಬೀಳುತ್ತಿದ್ದು, ಪಾಲಿಕೆಯ ಸಿಬ್ಬಂದಿ ಇದನ್ನು ತಡೆದು ಈ ಭಾಗವನ್ನು ಸ್ವಚ್ಛವಾಗಿಡುವಲ್ಲಿ ಯಶಸ್ವಿ ಯಾಗಿದ್ದರು . ಆದರೂ ಇಲ್ಲಿ ಯಾವುದೋ ಹೊತ್ತಿನಲ್ಲಿ ಕಸ ಬಂದು ಬೀಳುತ್ತಿತ್ತು. ಇದನ್ನು ಪತ್ತೆ ಮಾಡಲೇಬೇಕೆಂದು ಪಾಲಿಕೆ ಸಿಬ್ಬಂದಿ ಕಣ್ಣಿಟ್ಟರು. ಸೋಮವಾರ ಬೆಳಗ್ಗೆ ಮುನ್ನ ಎಂಬ ವ್ಯಕ್ತಿ ಬಂದು ಕಸವನ್ನು ಹಾಕುವಾಗ ಪಾಲಿಕೆ ಸಿಬ್ಬಂದಿ ಅವರನ್ನು ತಡೆದು, ಸ್ಥಳದಲ್ಲೇ 5000 ರೂ. ದಂಡ ವಿಧಿಸಿದರು. ವಿಚಾರಣೆ ಮಾಡಿದಾಗ ನಗರದ ವಿಜಯನಗರ ಬಡಾವಣೆಯಿಂದ ಕಸವನ್ನು ಇಲ್ಲಿಗೆ ತಂದು ಹಾಕುತ್ತಿದ್ದಾರೆಂಬುದು ಗೊತ್ತಾಗಿದೆ. ಪಾಲಿಕೆ ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದ್ದಾರೆ” ಎಂದು ಈ ಭಾಗದ ಬಿಜೆಪಿ ಕಾರ್ಪೋರೇಟರ್ ಎಚ್.ಮಲ್ಲಿಕಾರ್ಜುನಯ್ಯ ಅವರು ತಿಳಿಸಿದ್ದಾರೆ.
16600 ರೂ. ದಂಡ ಸಂಗ್ರಹ
ಇದಲ್ಲದೆ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಜೂನ್ 1 ರಿಂದ 3 ರವರೆಗೆ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವ ಒಟ್ಟು 16 ಪ್ರಕರಣಗಳನ್ನು ಪತ್ತೆ ಮಾಡಿದ್ದು, ಒಟ್ಟು 16600 ರೂ. ದಂಡ ಸಂಗ್ರಹಿಸಿದ್ದಾರೆ. ಅದರಲ್ಲಿ ಈ ಮೇಲಿನ ಪ್ರಸಂಗವೂ ಒಂದಾಗಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆಗಾಗಿ ಎನ್.ಆರ್. ಟ್ರೇಡರ್ಸ್‍ಗೆ 1000 ರೂ., ವಿ.ಎಂ.ಎನ್.ನಾಗೂರ್ ಷರೀಫ್ ಅವರಿಗೆ 1000 ರೂ., ಹೇಮಂತ್ ಅವರಿಗೆ 500 ರೂ., ಭರ್ಮನಾಯಕ್ ಎಂಬುವವರಿಗೆ 200 ರೂ., ರಾಘವೇಂದ್ರ -500 ರೂ., ಮೊಹಮದ್ ಹುಸೇನ್ ಎಂಬುವವರಿಗೆ 1000 ರೂ., ಗಿರಿಜಮ್ಮ ಎಂಬುವವರಿಗೆ 100 ರೂ., ಯೋಗೇಂದ್ರ ಮೂರ್ತಿ ಎಂಬುವವರಿಗೆ 1000 ರೂ., ಚೈತ್ರ ಎಂಬುವವರಿಗೆ 200 ರೂ., ಕಣ್ಣಮ್ಮ ಎಂಬುವವರಿಗೆ 100 ರೂ., ಅನುರಾಧ ಎಂಬುವವರಿಗೆ 1000 ರೂ., ರಂಗನಾಥ ಎಂಬುವವರಿಗೆ 2000 ರೂ., ಯಶೋಧ ಎಂಬುವವರಿಗೆ 500 ರೂ. ದಂಡವನ್ನು ವಿಧಿಸಲಾಗಿದೆ.
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆದಿರುವ ಕಾರಣಕ್ಕೆ ಮುನ್ನ ಎಂಬುವವರಿಗೆ 5000 ರೂ., ರಮೇಶ್ ಎಂಬುವವರಿಗೆ 500 ರೂ. ದಂಡವನ್ನು ಹಾಗೂ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ ಕಾರಣಕ್ಕೆ ಅಟ್ಟಿಕಾ ಗೋಲ್ಡ್ ಕಂಪನಿಗೆ 2000 ರೂ. ದಂಡವನ್ನು ವಿಧಿಸಲಾಗಿದೆ ಎಂದು ಪಾಲಿಕೆ ಮೂಲಗಳು ವಿವರಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
