ತುಮಕೂರು
ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುವ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ”ಕ್ಕೆ ಹೇಮಾವತಿ ನಾಲೆಯ ಮೂಲಕ ಸತತವಾಗಿ ಹೇಮಾವತಿ ನೀರು ಹರಿದು ಬರುತ್ತಿದ್ದು, ಪ್ರಸ್ತುತ (ಅ.16) ಜಲಸಂಗ್ರಹಾಗಾರದ ಹಳೆಯ ಕೋಡಿ ಮಟ್ಟಕ್ಕೆ ನೀರು ಭರ್ತಿಯಾಗಿದೆ.
ಅಂಕಿ ಅಂಶಗಳ ಪ್ರಕಾರ ಸಾಮಾನ್ಯವಾಗಿ ಈ ಅಳತೆಗೆ 183 ಎಂ.ಸಿ.ಎ.ಟಿ.ಯಷ್ಟು ನೀರಿನ ಸಂಗ್ರಹ ಆಗುತ್ತದೆ. ಆದರೆ ಪ್ರಸ್ತುತ ಜಲಸಂಗ್ರಹಾಗಾರದಲ್ಲಿ ಹೂಳೆತ್ತಿರುವುದರಿಂದ ಹೆಚ್ಚುವರಿಯಾಗಿ 44 ಎಂ.ಸಿ.ಎ.ಟಿ.ಯಷ್ಟು ನೀರು ಸಂಗ್ರಹವಾಗಿದೆ. ಇವೆರಡೂ ಸೇರಿ ಈಗ ಒಟ್ಟು 227 ಎಂ.ಸಿ.ಎï.ಟಿ.ಯಷ್ಟು ನೀರು ಸಂಗ್ರಹವಾಗಿದೆ. ಸುಮಾರು ಶೇ.60 ರಷ್ಟು ನೀರು ಈಗ ಸಂಗ್ರಹವಾಗಿದೆಯೆಂದು ಅಂದಾಜಿಸಬಹುದು” ಎಂದು ತುಮಕೂರು ಮಹಾನಗರ ಪಾಲಿಕೆಯ ಮೂಲಗಳು ಹೇಳುತ್ತಿವೆ.
ಕಳೆದ 15 ದಿನಗಳಿಂದ ನಾಲೆಯ ಮೂಲಕ ಹೇಮಾವತಿ ನೀರು ಜಲಸಂಗ್ರಹಾಗಾರಕ್ಕೆ ಹರಿದು ಬರುತ್ತಿದೆ. ಈಗ 150 ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಬರುತ್ತಿದೆ. ಜಲಸಂಗ್ರಹಾಗಾರ `Àರ್ತಿ ಆಗುವವರೆಗೂ ನಾಲೆಯಿಂದ ನೀರು ಹರಿದುಬರಲಿದೆ. ಭರ್ತಿ ಆದ ಬಳಿಕ ಹೇಮಾವತಿ ನೀರು ಸ್ಥಗಿತವಾಗಲಿದೆ. ಡಿಸೆಂಬರ್ ತಿಂಗಳಿನಲ್ಲಿ ಮತ್ತೆ ನಾಲೆಯಿಂದ ಜಲಸಂಗ್ರಹಾಗಾರಕ್ಕೆ ನೀರು ಬರಲಿದೆ” ಎಂದು ಹೇಳಲಾಗುತ್ತಿದೆ.
ಅರ್ಧ ತುಂಬಿದ ಹೆಬ್ಬಾಕ ಕೆರೆ
ಬುಗುಡನಹಳ್ಳಿ ಜಲಸಂಗ್ರಹಾಗಾರದ ಜೊತೆ ಜೊತೆಗೇ ಪಕ್ಕದ ನರಸಾಪುರ ಕೆರೆ ಮತ್ತು ಸಮೀಪದ ಹೆಬ್ಬಾಕ ಕೆರೆಯನ್ನೂ ಹೇಮಾವತಿ ನೀರಿನಿಂದ ತುಂಬಿಸಿಕೊಳ್ಳಲಾಗುತ್ತಿದೆ. ನರಸಾಪುರ ಕೆರೆ ಅಕ್ವಿಡೆಕ್ಟ್ ಮೂಲಕ ಗುರುತ್ವಾಕರ್ಷಣ ಬಲದಲ್ಲೇ ಸಹಜವಾಗಿ ತುಂಬುತ್ತದೆ. ಆದರೆ ಹೆಬ್ಬಾಕ ಕೆರೆಗೆ ಮಾತ್ರ ನರಸಾಪುರ ಕೆರೆಯ ತುದಿಯಲ್ಲಿರುವ ಪಂಪ್ ಹೌಸ್ ಮೂಲಕ ನೀರನ್ನು ಪಂಪು ಮಾಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ 24/7 ರೀತಿ ನಿರಂತರವಾಗಿ ಪಂಪು ಮಾಡಲಾಗುತ್ತಿದ್ದು, ಇದರಿಂದಾಗಿ ಹೆಬ್ಭಾಕ ಕೆರೆಯು ಈಗ ಅರ್ಧ ಭಾಗದಷ್ಟು ಭರ್ತಿಯಾಗಿದೆ. ಇದೇ ರೀತಿ ಪಂಪ್ ಮಾಡುವುದು ಮುಂದುವರೆದರೆ, ಇನ್ನೊಂದು ತಿಂಗಳ ಅವಧಿಯಲ್ಲಿ ಹೆಬ್ಬಾಕ ಕೆರೆ ಭರ್ತಿ ಆಗುತ್ತದೆ ಎಂದು ಮೂಲಗಳು ತಿಳಿಸಿವೆ.