ಹೈದರಾಬಾದ್
ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆಸಿಆರ್ ಅವರಿಗೆ ಸೇರಿದ ಫಾರಂ ಹೌಸ್ ನಲ್ಲಿ ವಿಶೇಷ ಪೊಲೀಸ್ ಪಡೆಗೆ ಸೇರಿದ ಮುಖ್ಯ ಪೇದೆ ಎ. ವೆಂಕಟೇಶ್ವರಲು ಬುಧವಾರ ಫಾರ್ಮ್ ಹೌಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಎರವಲ್ಲಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಕಾವಲುಗಾರರ ವಿಶ್ರಾಂತಿ ಗೃಹದಲ್ಲಿ 9 mm ಸರ್ವೀಸ್ ಕಾರ್ಬೈನ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ತಕ್ಷಣ ಸೇರಿಸಲಾಯಿತಾದರು ಅದರೊಳಗೆ ವೆಂಕಟೇಶ್ವರಲು ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ವೆಂಕಟೇಶ್ವರಲು ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಿದ್ದಿಪೇಟ್ ಎಸ್ ಪಿ ತಿಳಿಸಿದ್ದಾರೆ. ಮದ್ಯವ್ಯಸನಿಯಾಗಿದ್ದ ವೆಂಕಟೇಶ್ವರಲು ಈಚೆಗಷ್ಟೇ ಮದ್ಯ ತ್ಯಜಿಸುವ ಶಿಬಿರದಲ್ಲಿ ಚಿಕಿತ್ಸೆ ಪಡೆದಿದ್ದರು. ಸೆಪ್ಟೆಂಬರ್ ಇಪ್ಪತ್ತೊಂಬತ್ತನೇ ತಾರೀಕು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ ಎರಡು ದಿನಗಳಿಂದ ಅನಧಿಕೃತ ರಜಾದಲ್ಲಿ ಇದ್ದ ಆತನನ್ನು ಪತ್ನಿಯ ಮನವಿ ಮೇರೆಗೆ ಕರ್ತವ್ಯಕ್ಕೆ ಮತ್ತೆ ಸೇರಿಸಿಕೊಳ್ಳಲಾಗಿತ್ತು ಎಂದು ಎಸ್ ಪಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ