ಕೊರಟಗೆರೆ 

ಕಳೆದ ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಕೊರಟಗೆರೆ ಪಟ್ಟಣದ ಸುತ್ತಮುತ್ತ ಇರುವ ಕೆರೆಗಳು ತುಂಬಿ ಹರಿಯುತ್ತಿವೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಗೋಬಲಗುಟ್ಟೆ ಕೆರೆಯು ತುಂಬಿ ಕೋಡಿಯಲ್ಲಿ ನೀರು ಹೊರ ಹರಿಯುತ್ತಿವೆ. ಆದರೆ ಕೋಡಿಯ ಭದ್ರಯೆಗಾಗಿ ಕಟ್ಟಿರುವ ಕಲ್ಲಿನ ಗೋಡೆಯು ತಳದಲ್ಲಿ ಶಿಥಿಲವಾಗಿ ಕೆರೆಯ ನೀರು ಅಲ್ಲೂ ಜಿನುಗುತ್ತಿವೆ. ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕೋಡಿ ಹೊಡೆದು ಕೆರೆಯ ನೀರೆಲ್ಲವೂ ಪೋಲಾಗುವುದು ನಿಶ್ಚಿತವಾಗಿದೆ. ಕೆರೆ ಏರಿಯೆ ಅಪಾಯದ ಸ್ಥಿತಿ ಮುಟ್ಟಿದೆ. ರೈತರು ಮತ್ತು ಸುತ್ತಮುತ್ತಿನ ಮನೆಗಳ ಜನತೆ ಆತಂಕಕ್ಕೆ ಈಡಾಗಿದ್ದಾರೆ.
ಸ್ಥಗಿತಗೊಂಡ ಕಾಮಗಾರಿ;
ಅಪಾಯದ ಸ್ಥಿತಿಯಲ್ಲಿದ್ದ ಕೆರೆ ಏರಿ ಮತ್ತು ಕೋಡಿ ರಿಪೇರಿಗಾಗಿ ಕಳೆದ ವರ್ಷ ಈ ಭಾಗದ ರೈತರು ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಯಾಗಿದ್ದ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ರವರಲ್ಲಿ ಮನವಿ ಮಾಡಿದ್ದರು. ಆಗ ಅವರು ಕೆರೆ ಬಳಿ ಬಂದು ಪರಿಶೀಲಿಸಿದ್ದರು. ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆ ಸಂಜೀವಿನಿ ಯೋಜನೆಯಡಿ ಕೆರೆ ಏರಿ ದುರಸ್ಥಿತಿಗೆ 50 ಲಕ್ಷ ರೂ. ಮಂಜೂರು ಮಾಡಿಸಿದ್ದರು. ಟೆಂಡರ್ ಮೂಲಕ ಗುತ್ತಿಗೆ ದಾರರನ್ನು ನೇಮಿಸಿ, ಕೆರೆಏರಿ ದುರಸ್ಥಿ ಪ್ರಾರಂಭವಾಗಿತ್ತು. ಸ್ವಲ್ಪ ದಿನಗಳಲ್ಲಿ ಸಮಿಶ್ರ ಸರ್ಕಾರ ಪತನದ ನಂತರ ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಂತರ ಸಮಿಶ್ರ ಸರ್ಕಾರದಲ್ಲಿ ಆದೇಶವಾಗಿದ್ದ ಎಲ್ಲಾ ಕಾಮಗಾರಿಗಳನ್ನು ತಡೆ ಹಿಡಿದ ಹಿನ್ನೆಲೆಯಲ್ಲಿ ಗೋಬಲಗುಟ್ಟೆ ಕೆರೆ ಕಾಮಗಾರಿಯೂ ಸಹ ಸ್ಥಗಿತಗೊಂಡಿದೆ.
ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಆರ್ಭಟದ ಮಳೆಗೆ ಕೆರೆಕೋಡಿಗೆ ಅಳವಡಿಸಿದ್ದ ಕಲ್ಲಿನಗೋಡೆಯು ತಳಭಾಗದಲ್ಲಿ ಶಿಥಿಲವಾಗಿದೆ. ಕೆರೆ ಅಪಾಯದ ಪರಿಸ್ಥಿತಿಯ ಬಗ್ಗೆ ರೈತರು ಆಂತಕಕ್ಕೆ ಒಳಗಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ತುಮಕೂರು ಜಿಲ್ಲೆಯ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಇತ್ತ ಗಮನ ಹರಿಸಿ ಸ್ಥಗಿತ ಗೊಂಡಿರುವ ಕೆರೆ ಕಾಮಗಾರಿ ಪ್ರಾರಂಭಿಸಿ, ರೈತರ ಜೀವನಾಡಿಯಾದ ಕೆರೆಯ ರಕ್ಷಣೆ ಮಾಡಬೇಕೆಂದು ರೈತರು ಮನವಿ ಮಾಡಿದ್ದಾರೆ.








