ತುಮಕೂರು
“ತುಮಕೂರು ಮಹಾನಗರ ಪಾಲಿಕೆಯು ರಾಜ್ಯ ಸರ್ಕಾರದ 125 ಕೋಟಿ ರೂ. ಅನುದಾನಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಕ್ರಿಯಾಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದನೆ ನೀಡದೆ, ಆಕ್ಷೇಪಿಸಿದ್ದಾರೆಯೇ?”ಹೀಗೊಂದು ಪ್ರಶ್ನೆಯುಳ್ಳ ವದಂತಿ ಇದೀಗ ತುಮಕುರು ಮಹಾನಗರ ಪಾಲಿಕೆಯ ತುಂಬ ಹರಿದಾಡುತ್ತಿದೆ.
ರಾಜ್ಯ ಸರ್ಕಾರ ಪಾಲಿಕೆಗೆ 125 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಅದಕ್ಕೆ ಕೆಲವು ಮಾರ್ಗಸೂಚಿಗಳನ್ನೂ ನೀಡಿದೆ. ಆ ಪ್ರಕಾರ ಕ್ರಿಯಾಯೋಜನೆ ಸಿದ್ಧಪಡಿಸಲು ಸಹ ಸೂಚಿಸಿದೆ. ಆದರೆ ಪಾಲಿಕೆಯು ಸಕಾಲಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸದ ಕಾರಣ, ಸರ್ಕಾರದಿಂದ ಈ ಬಗ್ಗೆ ಪತ್ರ ಬಂದಿತ್ತು. ಇನ್ನೂ ಏಕೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಲ್ಲವೆಂದು ಸರ್ಕಾರ ಪ್ರಶ್ನಿಸಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಪಾಲಿಕೆಯ ಇಂಜಿನಿಯರಿಂಗ್ ಶಾಖೆಯು ತರಾತುರಿಯಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಅದನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮುಂದೆ ಅನುಮೋದನೆಗಾಗಿ ಮಂಡಿಸಿತ್ತು.
ಈ ವಿಚಾರವನ್ನು ಪರಿಶೀಲಿಸಿದ ಸಚಿವ ಮಾಧುಸ್ವಾಮಿ, ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ್ದಾರೆ. “ಈಗ ಪ್ರಸ್ತಾಪಿಸಿರುವ ರಸ್ತೆ ಕಾಮಗಾರಿಗಳಿಗೆ ಈ ಹಿಂದೆ ಯಾವುದೇ ಅನುದಾನವನ್ನು ಬಳಸಿಲ್ಲವೇ? ಹಿಂದೆ ಆಗಿರುವ ರಸ್ತೆಯನ್ನೇ ಈಗಲೂ ಸೂಚಿಸಲಾಗಿದೆಯೇ? ಈ ಬಗ್ಗೆ ಖಾತ್ರಿ ಏನು? ಲಿಖಿತವಾಗಿ ಸ್ಪಷ್ಟಪಡಿಸಿ” ಎಂದು ಸೂಚನೆ ನೀಡಿದ್ದಾರೆಂಬುದು ಈ ವದಂತಿಯ ಸಾರಾಂಶ.ಇದೇ ಕಾರಣದಿಂದ ಸಚಿವರು ಕ್ರಿಯಾಯೋಜನೆಗೆ ಅನುಮೋದನೆ ನೀಡಿಲ್ಲ. ಹೀಗಾಗಿ ಪಾಲಿಕೆಯ ಅಧಿಕಾರಿಗಳು ಬರಿಗೈಲಿ ವಾಪಸ್ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ.
