ಬೆಂಗಳೂರು
ವ್ಹೀಲ್ ಚೇರ್ ಒದಗಿಸಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಅಂಗವಿಕಲ ವೈದ್ಯ ಪ್ರಯಾಣಿಕರೊಬ್ಬರಿಗೆ 20 ಲಕ್ಷ ರೂ. ಪರಿಹಾರ ನೀಡುವಂತೆ ಏರ್ ಇಂಡಿಯಾ ಹೈಕೋರ್ಟ್ ಆದೇಶಿಸಿದೆ.
ಏರ್ ಇಂಡಿಯಾವು ಲಂಡನ್ನ ಹಿತ್ರೂ ವಿಮಾನ ನಿಲ್ದಾಣದಲ್ಲಿ ವ್ಹೀಲ್ ಚೇರ್ ನೀಡಲು ವಿಳಂಬ ಮಾಡಿದ್ದರಿಂದ ಅಂಗವಿಕಲ ವೈದ್ಯ ಪ್ರಯಾಣಿಕರು ಮಾನಸಿಕ ಆಘಾತ ಹಾಗೂ ದೈಹಿಕ ಯಾತನೆ ಅನುಭವಿಸಬೇಕಾಯಿತು ಎಂದು ತಿಳಿಸಿರುವ ರಾಜ್ಯ ಉಚ್ಚ ನ್ಯಾಯಾಲಯ ಇದಕ್ಕಾಗಿ ಅಂಗವಿಕಲ ವೈದ್ಯರಿಗೆ 20 ಲಕ್ಷ ರೂ. ಪರಿಹಾರ ಒದಗಿಸುವಂತೆ ನ್ಯಾಯಮೂರ್ತಿ ಬಿ. ವೀರಪ್ಪ ಸೂಚಿಸಿದ್ದಾರೆ.
ಡಾ. ಎಸ್.ಜೆ. ರಾಜಲಕ್ಷ್ಮಿ ಮತ್ತು ಅವರ 63 ವರ್ಷದ ತಾಯಿ ಡಾ. ಎಸ್. ಶೋಭ ಅವರಿಗೆ ತಲಾ 10 ಲಕ್ಷ ರೂ. ಗಳನ್ನು ಪಾವತಿಸುವಂತೆ ವಿಮಾನ ಸಂಸ್ಥೆಗೆ ನಿರ್ದೇಶನ ನೀಡಿರುವ ರಾಜ್ಯ ಹೈಕೋರ್ಟ್, ಭಾರತ ಸಂವಿಧಾನದ 14 ಮತ್ತು 21ನೇ ವಿಧಿಗಳ ಉಲ್ಲಂಘನೆಯನ್ನು ಈ ಪ್ರಕರಣದಲ್ಲಿ ಪರಿಗಣಿಸಿ ನಿಬಂಧನೆಗಳ ಉಲ್ಲಂಘನೆ ಮತ್ತು ವಿಮಾನ ಕಾಯ್ದೆ, ನಿಯಮಗಳು ಹಾಗೂ ವಿಕಲಾಂಗ ವ್ಯಕ್ತಿಗಳ ಸೆಕ್ಷನ್ 44 (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಕಾಯ್ದೆ 1995 ರಡಿ ನ್ಯಾಯಾಲಯ, ಅರ್ಜಿದಾರರಿಗೆ 20 ಲಕ್ಷ ಪರಿಹಾರ ನೀಡಲು ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಇದರೊಂದಿಗೆ ಸಂತ್ರಸ್ತರು ನೀಡಿದ ದೂರಿನೊಂದಿಗೆ ಭಾರತೀಯ ಅಪರಾಧಿಕ ದಂಡ ಪ್ರಕ್ರಿಯೆ ಸಂಹಿತೆ ಸೆಕ್ಷನ್ 154ರ ನಿಬಂಧನೆಯನ್ವಯ ಪ್ರಕರಣ ದಾಖಲಿಸದ ಗಿರಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವಂತೆ, ಬೆಂಗಳೂರು ದಕ್ಷಿಣ ಉಪಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಏನಿದು ಪ್ರಕರಣ
ಸುಮಿತ್ರ ಎಜಿ ಡ್ರೈವ್ ಮತ್ತು ಟ್ರಾವೆಲ್ಸ್ 2016 ರಲ್ಲಿ 16 ದಿನಗಳ ಕಾಲ ಕಷ್ಟಮೈಸ್ ಪ್ರವಾಸವನ್ನು ಏರ್ಪಡಿಸಿತ್ತು. ಅರ್ಜಿದಾರರು ಬೆಂಗಳೂರಿನಿಂದ ಲಂಡನ್ ಮತ್ತು ಲಂಡನ್ನಿಂದ ಬೆಂಗಳೂರಿಗೆ ಪ್ರಯಾಣಿಕರು ಪ್ರಯಾಣಿಸಲು 5 ಲಕ್ಷದ 40 ಸಾವಿರ ರೂ. ಗಳನ್ನು ನೀಡಿ ಪ್ರವಾಸವನ್ನು ಬುಕ್ಕಿಂಗ್ ಮಾಡಿದ್ದರು.ಈ ವೇಳೆ ಅವರು, ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ ಲಂಡನ್ಗೆ ತೆರಳಿದಾಗಿ ವಿಮಾನ ನಿಲ್ದಾಣದಲ್ಲಿ ಅವರಿಗೆ ವ್ಹೀಲ್ ಚೇರ್ ಅನ್ನು ಏರ್ ಇಂಡಿಯಾ ಸಕಾಲಕ್ಕೆ ಒದಗಿಸದೇ ವಿಳಂಬ ಮಾಡಿತ್ತು ಇದರ ವಿರುದ್ಧ ಸಂತ್ರಸ್ತ ವೈದ್ಯರು, ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ