ಬೆಂಗಳೂರು
‘ನಿಖಿಲ್ ಎಲ್ಲಿದ್ದೀಯಪ್ಪಾ’ ಅನ್ನೋ ವಾಕ್ಯವನ್ನು ಕೇಳದವರೇ ಇಲ್ಲ ಎನ್ನಬಹುದು. ವಾಟ್ಸ್ಆಪ್, ಫೇಸ್ ಬುಕ್ ಎಲ್ಲಿ ನೋಡಿದರೂ ಇದರ ಟೀಕೆ, ಟಿಪ್ಪಣಿ, ಅಣಕ. ಹೀಗಾಗಿ ಎಲ್ಲರ ಬಾಯಲ್ಲಿ ಹರಿದಾಡುತ್ತಿರುವ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಶೀರ್ಷಿಕೆಯ ಚಿತ್ರ ನಿರ್ಮಿಸಲು ಅನೇಕ ನಿರ್ಮಾಪಕರು ತುದಿಗಾಲಲ್ಲ್ಲಿನಿಂತಿದ್ದಾರೆ. ಟೈಟಲ್ ಗಾಗಿ ವಾಣಿಜ್ಯ ಮಂಡಳಿಯಲ್ಲಿ ಭಾರಿ ಪೈಪೋಟಿ ಕೂಡ ನಡೆಯುತ್ತಿದೆಯಂತೆ
ಆದರೆ ‘ಈ ಟೈಟಲ್ ಅನ್ನು ಯಾರಿಗೂ ನೀಡಕೂಡದು, ಅದು ನನ್ನಹಕ್ಕು’ ಎಂದು ಈಗಾಗಲೇ ಒಬ್ಬರು ಕ್ಲೈಮ್ ಮಾಡಿಕೊಂಡಿದ್ದಾರಂತೆ. ಅವರು ಬೇರಾರೂ ಅಲ್ಲ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸುಪುತ್ರ ನಿಖಿಲ್ ಕುಮಾರಸ್ವಾಮಿ. ಹಾಗಂತ ಅವರೇ ಮಂಡ್ಯದಲ್ಲಿ ಹೇಳಿಕೊಂಡಿದ್ದಾರೆ. ಮಂಡ್ಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಿಖಿಲ್, “ಕೆಲವರು ನನ್ನನ್ನು ಹಳಿಯಲು ‘ನಿಖಿಲ್ ಎಲ್ಲಿದ್ದಿಯಪ್ಪಾ ಎಂಬ ಡೈಲಾಗ್ ಬಳಸಿಕೊಂಡರು.
ದೇಶ ಮಾತ್ರವಲ್ಲ ಅಮೇರಿಕಾದಲ್ಲೂ ಈ ಡೈಲಾಗ್ ಚರ್ಚೆಯಾಯ್ತು. ಫಿಲಂ ಚೇಂಬರ್ ನಲ್ಲಂತೂ ಈ ಟೈಟಲ್ ಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಈ ಟೈಟಲ್ ಯಾರಿಗೂ ಕೊಡಬೇಡಿ ಎಂದು ಖುದ್ದು ಮನವಿ ಮಾಡಿದ್ದೇನೆ. ಏಕೆಂದರೆ ನಿಖಿಲ್ ಎಲ್ಲಿದ್ದಿಯಪ್ಪಾ ಎಂಬ ಹೆಸರಿನಲ್ಲಿ ನಾನೇ ಸಿನೆಮಾ ತೆಗೆಯಲಿದ್ದೇನೆ. ನಾನೇ ಹೀರೋ” ಎಂದು ಘೋಷಿಸಿಕೊಂಡಿದ್ದಾರೆ.