ಗೋಮಾಳ  ಅಕ್ರಮ ಪ್ರವೇಶಕ್ಕೆ ಒಂದು ವರ್ಷ ಜೈಲು ವಾಸ : ತಹಸೀಲ್ದಾರ್

ಮಿಡಿಗೇಶಿ :
      ಗೋಮಾಳ ಭೂಮಿಯಲ್ಲಿ ಪ್ರವೇಶಿಸಿ ಉಳುಮೆ ಮಾಡುವುದಾಗಲಿ, ಇಟ್ಟಿರುವ ಬೆಳೆಯ ಕಟಾವಿಗೆ  ಮುಂದಾಗುವುದಾಗಲಿ ಮಾಡಿದರೆ  ಕೆಎಲ್‍ಆರ್  ಆ್ಯಕ್ಟ್ 192 ರ ಪ್ರಕಾರ ಒಂದು ವರ್ಷ ಕಾರಾಗೃಹ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ತಾಲ್ಲೂಕು ದಂಡಾಧಿಕಾರಿ ನಂದೀಶ್ ತಿಳಿಸಿದರು. 
   
      ಅವರು ಬುಧವಾರ ಮಿಡಿಗೇಶಿ ಹೋಬಳಿ ಬೇಡತ್ತೂರು ಗ್ರಾಪಂ ವ್ಯಾಪ್ತಿಯ ನಾಗಲಾಪುರ ಗೋಮಾಳಕ್ಕೆ ಭೇಟಿ ನೀಡಿ ಮಾತನಾಡು ತ್ತಿದ್ದರು . ಈಗ ಇಟ್ಟಿರುವ ಫಸಲನ್ನು  ಗ್ರಾಮ ಪಂಚಾಯಿತಿ ವಶಕ್ಕೆ ನೀಡಲಾಗುವುದು.  ತಿಪ್ಪಮ್ಮ ಕೋಂ ತಿಪ್ಪಣ್ಣ ತಾ. 14-10-2015 ರಂದು ಸಾಗುವಳಿಗೆ ಅರ್ಜಿ ನೀಡಿದ್ದರು. ಆದರೆ ಆ ಅರ್ಜಿಯು ಅಂದೇ ವಜಾ ಆಗಿರುವ ಬಗ್ಗೆ  ಅಂದು ನೀಡಿರುವ ಹಿಂಬರಹದ ನಕಲು ಪ್ರತಿಯನ್ನು  ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರಿಗೆ ತೋರಿಸಿದರು. ಸ್ಥಳದಲ್ಲಿದ್ದ ಸರ್ವೆ ಇಲಾಖೆಯ ಲೋಕೇಶ್‍ಗೆ ಸದರಿ ಗೋಮಾಳದ ಬಗ್ಗೆ  ಶೀಘ್ರದಲ್ಲಿ ಸರ್ವೆ ಕಾರ್ಯ ನಡೆಸಿ ವರದಿ ನೀಡುವಂತೆಯೂ ಆದೇಶಿಸಿದರು.
     ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ, ಬೇಡತ್ತೂರು ಗ್ರಾಮ ಪಂಚಾಯಿತಿಗೆ ಸೇರಿದ  ನಾಗಲಾಪುರ ಗ್ರಾಮದ ಬಳಿಯಿರುವ ಗೋಮಾಳವನ್ನು ಸದರಿ ಗ್ರಾಮಸ್ಥರುಗಳಿಗೆ  ಬಿಟ್ಟುಕೊಡಬೇಕೆ ವಿನಃ, ಇಲ್ಲಿನ ಕೆಲವರಿಗೆ ಸಾಗುವಳಿಗೆ ನೀಡಬಾರದು.  ಈ ಹಿಂದಿನ ಲಂಚಬಾಕ ಅಧಿಕಾರಿಗಳ ತಪ್ಪಿನಿಂದ  ಸಾಗುವಳಿಗೆ ನೀಡಿದ್ದ ಪಕ್ಷದಲ್ಲಿ ಸದರಿ ಸಾಗುವಳಿ ನೀಡಿರುವ ಭೂಮಿಯನ್ನು ಸರ್ಕಾರವು ವಾಪಸ್ ಪಡೆಯಬೇಕು. ಗೋಮಾಳವನ್ನು  ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಅ.30 ರಂದು ಮಧುಗಿರಿ ತಾಲ್ಲೂಕು ದಂಡಾಧಿಕಾರಿಗಳಿಗೆ   ಮನವಿ ಪತ್ರವನ್ನು ನೀಡಿದ್ದರು. 
 
     ಈ ಹಿಂದೆ ಕಳೆದ 2014 ರಿಂದಲೂ ತಹಸೀಲ್ದಾರರಿಗೆ, ಉಪವಿಭಾಗಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಸದರಿ ಗೋಮಾಳದ ಬಗ್ಗೆ ಲಿಖಿತ ದೂರುಗಳನ್ನು ನೀಡುತ್ತಾ ಬಂದಿರುವುದಾಗಿ, ಈಗಲಾದರೂ ಸದರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಹಿಂದೇಟು ಹಾಕಿದಲ್ಲಿ ಎಸಿಬಿ, ಲೋಕಾಯುಕ್ತ ಇಲಾಖೆ ಹಾಗೂ ಭೂ ಸಂರಕ್ಷಣಾ ಇಲಾಖೆಗೆ ಇಡೀ ಗ್ರಾಮಸ್ಥರೆಲ್ಲರೂ ಸೇರಿ ದೂರನ್ನು ನೀಡುವುದಾಗಿಯೂ ಗ್ರಾಮಸ್ಥರು  ಒತ್ತಾಯಿಸಿದ್ದರು.
     ಸದರಿ ನಾಗಲಾಪುರ ಗ್ರಾಮಸ್ಥರ ಲಿಖಿತ ದೂರಿನನ್ವಯ ಮಧುಗಿರಿ ತಾಲ್ಲೂಕಿನ ದಂಡಾಧಿಕಾರಿ ನಂದೀಶ್, ಕಂದಾಯಾಧಿಕಾರಿ ವೇಣುಗೋಪಾಲ್, ಗ್ರಾಮಲೆಕ್ಕಿಗರು, ಅ.30 ರಂದೆ ಗೋಮಾಳಕ್ಕೆ ಧಾವಿಸಿದ್ದರು. ಸತತ ಮೂರು ಗಂಟೆಗಳ ಕಾಲ ಸ್ಥಳ ಪರಿಶೀಲನೆ ನಡೆಸಿ, ಅರಣ್ಯಲ್ಲಿನ ನೀಲಗಿರಿ ಮರಗಳನ್ನು ಕಡಿದು ನಾಶಪಡಿಸಿ ಸದರಿ ಗೋಮಾಳದಲ್ಲಿ  ಅತಿಕ್ರಮ ಪ್ರವೇಶಿಸಿ ಕಡಲೆಗಿಡ, ಬಾಳೆ, ಹೆಸರು, ತೊಗರಿ, ಜೋಳ, ಹುರುಳಿ, ಅಲಸಂದೆ ಇತ್ಯಾದಿ ಬೆಳೆಗಳನ್ನು ಬೆಳೆದಿರುವ ಕೆಲವೆ ಕೆಲವರನ್ನು ಸ್ಥಳಕ್ಕೆ ಕರೆಸಿದ ತಹಶೀಲ್ದಾರ್ ಇಂದಿನಿಂದ ಇನ್ನು ಮುಂದೆ ಸದರಿ ಗೋಮಾಳದಲ್ಲಿ  ಅತಿಕ್ರಮ ಪ್ರವೇಶಿಸಿ, ಇಟ್ಟಿರುವ ಫಸಲು ಪಡೆಯುವುದಾಗಲಿ, ಉಳುಮೆ ಮಾಡುವುದಾಗಲಿ ಮಾಡಿದರೆ, ಕೆಎಲ್‍ಆರ್ ಆ್ಯಕ್ಟ್ ಪ್ರಕಾರ ಒಂದು ವರ್ಷ ಕಾರಾಗೃಹ ಶಿಕ್ಷೆಗೆ  ಒಳಪಡಿಸಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಸಿದರು. 
    ಅರಣ್ಯ ಇಲಾಖೆಗೆ ಸೇರಿದ ಸಂಬಂಧಿಸಿದ ಒಟ್ಟಾರೆ ಐವತ್ತು ಎಕರೆಗೂ ಅತ್ಯಧಿಕ ಭೂಮಿಯ ಮಧ್ಯಭಾಗದಲ್ಲಿ ಮೂರು ಎಕರೆ ಭೂಮಿ ಸಾಗುವಳಿ ನಮಗೆ ಆಗಿದೆ ಎಂದು ಹೇಳಿಕೊಂಡು, ಬೆಳೆಯಿಟ್ಟು ಸರ್ಕಾರದಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆಬಾವಿ, ಉಚಿತವಾಗಿ ಪಂಪು ಮೋಟಾರ್‍ಗಳನ್ನು ಪಡೆದುಕೊಂಡಿರುವ ಜೊತೆಗೆ ಬ್ಯಾಂಕಿನಲ್ಲಿಯೂ ಸದರಿ ಭೂಮಿಯ ಪಹಣಿಯ ಮೇರೆಗೆ ಸಾಲವನ್ನು ನಾಗಲಾಪುರ ಗ್ರಾಮದ ಹೆಣ್ಣುಮಗಳು ಪಡೆದಿದ್ದಾರೆ.  
     ನೆರೆಯ ಆಂಧ್ರ್ರರಾಜ್ಯದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹರೇಸಂದ್ರ ಗ್ರಾಮದ ಈರಣ್ಣ ಎನ್ನವವರೊಂದಿಗೆ ಇವರ ವಿವಾಹವಾಗಿರುತ್ತದೆ. ಸದರಿ ಮಹಿಳೆಯೆ ಚೌಡಮ್ಮ ಕೋಂ ಈರಣ್ಣ ಎನ್ನುವವರು. ಇವರಿಗೆ ಸಾಗುವಳಿ ಪತ್ರ ನೀಡಿರುತ್ತಾರೆ ಎನ್ನಲಾಗಿದೆ. ಅಂದರೆ ಆಂಧ್ರ ರಾಜ್ಯದ ಮಹಿಳೆಯೊಬ್ಬರಿಗೆ ಕರ್ನಾಟಕ ರಾಜ್ಯದಲ್ಲಿ ಗೋಮಾಳದ ಭೂಮಿಯನ್ನು ಸಾಗುವಳಿಗಾಗಿ ಪತ್ರ ಕೊಡಲು ಅವಕಾಶವಿದೆಯೇ ಎಂಬ ಬಗ್ಗೆ ರೆವಿನ್ಯೂ ಇಲಾಖಾಧಿಕಾರಿಗಳೆ  ಉತ್ತರಿಸಬೇಕಾಗಿದೆ.
 
     ನಾಗಲಾಪುರ ಗ್ರಾಮಸ್ಥರಲ್ಲದೆ  ತಾಲ್ಲೂಕಿನ ಸಾರ್ವಜನಿಕರು, ಪ್ರಜ್ಞಾವಂತ ನಾಗರಿಕರು, ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ತಾಲ್ಲೂಕಿನಲ್ಲಿ ಅರಣ್ಯದ ಗಿಡಮರಗಳು, ಅರಣ್ಯ ಸಂಪತ್ತನ್ನು ಕಾಪಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುತ್ತಾರೆ ಎಂದೂ, ಅರಣ್ಯ ಲೂಟಿಕೋರರಿಗೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದೂ ತಹಸೀಲ್ದಾರ್‍ರವರಿಗೆ ಬಹಿರಂಗವಾಗಿಯೆ  ಹೇಳಿಕೆ ನೀಡಿರುತ್ತಾರೆ.  
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link