ಅದ್ದೂರಿಯಾಗಿ ನೆರವೇರಿದ ಚನ್ನಬಸವೇಶ್ವರಸ್ವಾಮಿಯ ರಥೋತ್ಸವ

ಗುಬ್ಬಿ:

    ಪಟ್ಟಣದ ಇತಿಹಾಸ ಪ್ರಸಿದ್ಧ ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

  ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಮಾರ್ಚ್ 05 ರಿಂದ ಆರಂಭವಾಗಿದ್ದು ಭಾನುವಾರ ಮಧ್ಯಾನ 1.45 ರ ಸಂದರ್ಭದಲ್ಲಿ ಬಿಸಿಲ ನಡುವೆಯೂ ಚನ್ನಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಚನ್ನಬಸವೇಶ್ವರ ಸ್ವಾಮಿಗೆ ಮುಂಜಾನೆಯಿಂದ ಪುರೋಹಿತರಿಂದ ವೇದಪಠಣ, ಮಂತ್ರಘೋಷ,ನೇವೇದ್ಯ, ಪ್ರಸಾದ ವಿನಿಯೋಗ, ನಂತರ ಸ್ವಾಮಿಯವರನ್ನು ಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿ, ನಾದಸ್ವರ, ಲಿಂಗದವೀರರು ಅವರ ಸಮೂಹದಲ್ಲಿ ಕರೆತಂದು ರಥದಲ್ಲಿ ಕೂರಿಸಲಾಯಿತು.

   ನಂತರ ರೂಢಿಯಂತೆ ಗರುಡನ ದರ್ಶನದ ನಂತರ ಸ್ವಾಮಿಯವರ ರಥೋತ್ಸವವನ್ನು ಸಾವಿರಾರು ಭಕ್ತರ ಸಹಕಾರದ ಮೂಲಕ ರಥವನ್ನು ಎಳೆಯಲಾಯಿತು. ಭಕ್ತರು ಕಷ್ಟಕಾರ್ಪಣ್ಯಗಳಿಂದ ಮುಕ್ತ ಮಾಡುವಂತೆ ಪ್ರಾರ್ಥನೆ ಮಾಡಿ ಭಕ್ತರು ತಮ್ಮ ಹರಕೆಯನ್ನು ಈಡೇರಿಸಲು ಧವನ ಬಾಳೆ ಹಣ್ಣು ರಥಕ್ಕೆ ಎಸೆಯುವ ಮೂಲಕ ತಮ್ಮ ಕಷ್ಟಕಾರ್ಪಣ್ಯಗಳಿಂದ ಮುಕ್ತ ಮಾಡುವಂತೆ ಸ್ವಾಮಿಯವರಲ್ಲಿ ಪ್ರಾರ್ಥಿಸಿದರು. ಯಾವುದೇ ರೀತಿಯ ಅವಘಡಗಳಿಗೆ ಆಸ್ಪದ ಕೊಡದೆ ತಾಲೂಕು ಆಡಳಿತವು ಸುಸೂತ್ರವಾಗಿ ನೆರವೇರಿಸಿದೆ. ಜಾತ್ರ ಮಹೋತ್ಸವಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಒಟ್ಟಾರೆಯಾಗಿ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಮಧ್ಯಾಹ್ನ 2 ಯಿಂದ ಭಾನುವಾರ ರಾತ್ರಿ 12:00ವರೆಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.