ಬೆಂಗಳೂರು
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಭಾರಿ ಪ್ರಮಾನದಲ್ಲಿ ಮಳೆ ಸುರಿಯುವುದರಿಂದ ಕೇರಳ, ಗುಜರಾತ್ ಸೇರಿದಂತೆ ಕರ್ನಾಟಕದ ಕೆಲ ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬುಧವಾರದಿಂದ ಗುಜರಾತ್,ಕೇರಳ, ತಮಿಳುನಾಡು ಸೇರಿದಂತೆ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಕಟ್ಟೆಚ್ಚರ ವಹಿಸಲಾಗಿದೆ.ಭಾರತೀಯ ಹವಾಮಾನ ಇಲಾಖೆ ಚಂಡಮಾರುತದಿಂದ ಭೂಕುಸಿತವಾಗುವ ಬಗ್ಗೆ ಯಾವುದೇ ನಿರ್ದಿಷ್ಟವಾದ ಸೂಚನೆ ನೀಡಿಲ್ಲ. ಕ್ಯಾರ್ ಚಂಡಮಾರುತದಿಂದಾಗಿ ಕಳೆದ ಕೆಲವು ದಿನಗಳಲ್ಲಿ ಗುಜರಾತ್‌ನ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿತ್ತು. ಅದು ಈಗ ದುರ್ಬಲಗೊಂಡು ಒಮಾನ್ ಕಡೆಗೆ ಸಾಗಿದೆ.
ಕೇರಳದ ಎರ್ನಾಕುಲಮ್, ತ್ರಿಶೂರ್, ಮಲಪ್ಪುರಂ ಹಾಗೂ ಕೋಳಿಕ್ಕೊಡ್‌ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲಿ ೬ ಸೆಂ.ಮೀನಿಂದ ೨೦ ಸೆಂ.ಮೀವರೆಗೆ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ೧೦ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಜರಾತ್‌ನಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ಮಹಾ ಚಂಡಮಾರುತ ಮುಂದಿನ ೨೪ ಗಂಟೆಗಳಲ್ಲಿ ವಾಯುವ್ಯ ದಿಕ್ಕಿನಲ್ಲಿ ಮತ್ತು ನವೆಂಬರ್ ೨ರಿಂದ೪ರ ವರೆಗೆ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಮಹಾ ಚಂಡಮಾರುತ ತೀವ್ರಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ ೬ರಿಂದ ಮಹಾ ಚಂಡಮಾರುತ ಪೂರ್ವ-ಈಶಾನ್ಯ ದಿಕ್ಕಿನಲ್ಲಿ ದಕ್ಷಿಣ ಗುಜರಾತ್ ಕರಾವಳಿಯ ಕಡೆಗೆ ಮರು ತಿರುವು ತೆಗೆದುಕೊಳ್ಳುತ್ತದೆ.ಸೌರಾಷ್ಟ್ರದ ಕರಾವಳಿ ಸೇರಿದಂತೆ ದಕ್ಷಿಣ ಗುಜರಾತ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದ ನಿರ್ದೇಶಕ ಜಯಂತ್ ಸರ್ಕಾರ್ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಒಣ ಹವೆ ಮುಂದುವರೆದಿದ್ದು, ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿದೆ. ಮತ್ತೆ ಚಂಡ ಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಬೆಂಗಳೂರಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








