ಬೆಂಗಳೂರು
ಆಂತರಿಕ ಭದ್ರತಾದಳ, ಭಯೋತ್ಪಾದಕ ನಿಗ್ರಹ ದಳ,ಆಂಟಿ ನಾರ್ಕೊಟಿಕ್ ದಳ,ಮಹಿಳಾ ಸುರಕ್ಷತಾ ದಳ,ಸಂಘಟಿತ ಅಪರಾಧ ದಳ ಸೇರಿ ೬ ವಿವಿಧ ದಳಗಳನ್ನು ರಚಿಸಿ ಕೇಂದ್ರ ಅಪರಾಧ ದಳ (ಸಿಸಿಬಿ)ಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ.
ನಗರದಲ್ಲಿನ ಪ್ರಸಕ್ತ ಪರಿಸ್ಥಿತಿಗನುಗುಣವಾಗಿ ಹೊಸ ಜವಾಬ್ದಾರಿಯೊಂದಿಗೆ ಮಹಿಳೆಯರ ಸುರಕ್ಷತೆ, ವಿದ್ಯಾರ್ಥಿ ಯುವ ಜನತೆಗೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಮಾದಕ ವಸ್ತು ಜಾಲವನ್ನು ನಿಯಂತ್ರಿಸಿ ಅರ್ಥಿಕ ಅಪರಾಧಗಳನ್ನು ಹತ್ತಿಕ್ಕಿ ಭಯೋತ್ಪಾದಕ ಚಟುವಟಕೆಗಳು ತಲೆ ಎತ್ತದಂತೆ ನೋಡಿಕೊಳ್ಳುವ ಸಲುವಾಗಿ 6 ದಳಗಳನ್ನು ರಚಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸಹಾಯಕ ಪೊಲೀಸ್ ಆಯುಕ್ತರುಗಳು ಹೊಸದಾಗಿ ರಚನೆಯಾಗಿರುವ 6 ದಳಗಳಿಗೆ ಮುಖ್ಯಸ್ಥರಾಗಿದ್ದು ಇಬ್ಬರು ಡಿಸಿಪಿಗಳು ದಳಗಳ ನೇತೃತ್ವ ವಹಿಸಿ ಕಾರ್ಯಾವೈಖರಿಯ ಪರಾಮರ್ಶೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ಭಯೋತ್ಪಾದನಾ ನಿಗ್ರಹ ದಳ
ನಗರದಲ್ಲಿ ಸಂಚು ರೂಪಿಸಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿರುವ ಉಗ್ರಗಾಮಿ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟು, ಮಟ್ಟ ಹಾಕಲು ಭಯೋತ್ಪದನಾ ನಿಗ್ರಹ ದಳ (ಎಟಿಸಿ) ವನ್ನು ಸಜ್ಜುಗೊಳಿಸಲಾಗಿದೆ.ಎಟಿಸಿಯು ನಗರದಲ್ಲಿನ ಉಗ್ರಗಾಮಿ ಚಟುವಟಿಕೆಗಳ ಮಾಹಿತಿ ಸಂಗ್ರಹಣೆ ಮಾಡಿ, ಉಗ್ರಗಾಮಿ ಸಂಬಂಧಿತ ದುಷ್ಕೃತ್ಯಗಳ ತನಿಖೆ ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.
ಆಂಟಿ ನಾರ್ಕೊಟಿಕ್ ದಳ
ಗಾಂಜಾ, ಕೊಕೇನ್, ಎಂಡಿಎಂಎ ಇನ್ನಿತರ ಮಾದಕ ವಸ್ತುಗಳ ಜಾಲ, ಮಾರಾಟ ಹಾಗೂ ಸಾಗಾಣೆಯ ಮೇಲೆ ಆಂಟಿ ನಾರ್ಕೊಟಿಕ್ ದಳ ಹದ್ದಿನ ಕಣ್ಣಿಡಲಿದೆ. ದಳದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದಲ್ಲೆಡೆ ಕಾರ್ಯಾಚರಣೆ ನಡೆಸುತ್ತ ಮಾದಕ ವಸ್ತುಗಳ ಜಾಲವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದರು.
ಮಹಿಳಾ ಸುರಕ್ಷತಾ ದಳ
ಮಾನವ ಕಳ್ಳ ಸಾಗಾಣೆ, ವೇಶ್ಯಾವಾಟಿಕೆ ನಿಗ್ರಹ, ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ, ಕಿರುಕುಳ ನಿಯಂತ್ರಣ ಮಾಡಲು ಮಹಿಳಾ ಸುರಕ್ಷತಾ ದಳ ಕಾರ್ಯನಿರ್ವಹಿಸಲಿದ್ದು, ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಈ ದಳ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳವನ್ನು ತಡೆಯಲು ಮಹಿಳಾ ಸುರಕ್ಷತಾ ದಳದ ಅಧಿಕಾರಿಗಳು ಸನ್ನದ್ಧರಾಗಿದ್ದು, ವೇಶ್ಯಾವಾಟಿಕೆಯನ್ನು ನಿಯಂತ್ರಣಗೊಳಿಸಿ ಮಹಿಳೆಯರಿಗೆ ಸುರಕ್ಷತೆ ಮೂಡಿಸಲು ದಳ ಶ್ರಮಿಸಲಿದೆ ಎಂದು ಹೇಳಿದರು.
ಸಂಘಟಿತ ಅಪರಾಧ ದಳ
ನಗನದಲ್ಲಿ ರೌಡಿ ಗೂಂಡಾ ಚಟುವಟಿಕೆ ಮೇಲೆ ಸಂಘಟಿತ ಅಪರಾಧ ದಳ ನಿಗಾವಹಿಸಲಿದ್ದು, ನಗರದ ಯಾವುದೇ ಭಾಗದಲ್ಲಿ ರೌಡಿ ಚಟುವಟಿಕೆಗಳು ನಡೆಯುವುದಾಗಲಿ, ಹಫ್ತಾ ವಸೂಲಿ, ಬೆದರಿಕೆ, ಸುಲಿಗೆ ಮಾಡುವ ರೌಡಿಗಳ ಮೇಲೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿದೆ. ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಗಳನ್ನು ಗೂಂಡಾಕಾಯ್ದೆ ದಾಖಲಿಸಿ ಜೈಲಿಗೆ ಕಳುಹಿಸಲಿದ್ದು, ರೌಡಿಗಳ ಬಗ್ಗೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.
ಆರ್ಥಿಕ ಅಪರಾಧ ದಳ
ನಗರದಲ್ಲಿ ಅಧಿಕ ಬಡ್ಡಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುವುದು, ಚೀಟಿ, ಬಡ್ಡಿ ವ್ಯವಹಾರ ನಡೆಸುವುದು, ಇನ್ನಿತರ ಆರ್ಥಿಕ ಅಪರಾಧಗಳು, ಫಾಂಝಿಸ್ಕೀಮ್ಗಳ ವಂಚನೆಯ ಜವಾಬ್ದಾರಿಯನ್ನು ಆರ್ಥಿಕ ಅಪರಾಧ ದಳಕ್ಕೆ ನೀಡಲಾಗಿದೆ. ಆರ್ಥಿಕ ಅಪರಾಧ ದಳವು ನಗರದಲ್ಲಿ ನಡೆಯುವ ಬಡ್ಡಿ, ಮೀಟರ್ ಬಡ್ಡಿ ವ್ಯವಹಾರ, ಅಧಿಕ ಬಡ್ಡಿ ಹೆಸರಿನಲ್ಲಿ ನಡೆಸುವ ವಂಚನೆ, ಇನ್ನಿತರ ಆರ್ಥಿಕ ಅವ್ಯವಹಾರಗಳ ಬಗ್ಗೆ ನಿಗಾವಹಿಸಿ ತಪ್ಪಿತಸ್ಥರನ್ನು ಬಂಧಿಸಲಿದೆ ಎಂದು ಹೇಳಿದರು.
ವಿಶೇಷ ವಿಚಾರಣಾ ದಳ
ನ್ಯಾಯಾಲಯಗಳಿಂದ ಹಿರಿಯ ಅಧಿಕಾರಿಗಳಿಗೆ ವಹಿಸಲಾಗುವ ಉನ್ನತಮಟ್ಟದ ತನಿಖೆ ವಿಚಾರಣೆಯ ಜವಾಬ್ದಾರಿಯನ್ನು ವಿಶೇಷ ವಿಚಾರಣಾ ದಳಕ್ಕೆ ನೀಡಲಾಗಿದ್ದು, ತನಿಖೆಯ ಪ್ರಗತಿ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸುವ ತನಿಖೆಗಳ ಪ್ರಗತಿ ಬಗ್ಗೆ ಮಾಹಿತಿ ನೀಡಲಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








