ಹುಳಿಯಾರು:
ಪತ್ರಿಕಾ ವರದಿಯ ಫಲಶೃತಿಯಿಂದ ಖಾಸಗಿ ಜಮೀನಿಗೆ ಚರಂಡಿ ನೀರು ಬಿಡುವ ಸಲುವಾಗಿ ಜನವಸತಿ ಪ್ರದೇಶದಲ್ಲಿ ಗುಂಡಿ ತೆಗೆದು ಚರಂಡಿ ನೀರು ಸಂಗ್ರಹಿಸಿದ್ದ ಗುತ್ತಿಗೆದಾರರು ತಮ್ಮ ತಪ್ಪಿನ ಅರಿವಾಗಿ ಗುಂಡಿ ಮುಚ್ಚಿಸಿ ಚರಂಡಿ ನೀರು ಹರಿಯಲು ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ.
ಹುಳಿಯಾರು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 234 ರ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿಯ ಬದಿ ನಿರ್ಮಿಸಲಾಗಿರುವ ಚರಂಡಿ ಸಾಕಷ್ಟು ಕಡೆ ಅಪೂರ್ಣವಾಗಿದೆ. ಹಾಗಾಗಿ ಬಾಲಾಜಿ ಟಾಕೀಸ್ ಕಡೆಯಿಂದಲೂ ಹಾಗೂ ಎಪಿಎಂಸಿ ಕಡೆಯಿಂದಲೂ ಇಲ್ಲಿಗೆ ನೀರು ಹರಿದು ಬರುವಂತೆ ಮಾಡಿರುವುದರಿಂದ ದೊಡ್ಡ ಹೊಂಡವೇ ನಿರ್ಮಾಣವಾಗಿದೆ.
ಕಳೆದ ಹದಿನೈದಿಪ್ಪತ್ತು ದಿನಗಳಿಂದ ಬರುತ್ತಿರುವ ಮಳೆಗೆ ಸಂಪೂರ್ಣವಾಗಿ ನೀರು ನಿಂತಿದ್ದು ಕಳೆದ ತಿಂಗಳ ಹಿಂದಷ್ಟೆ ವ್ಯಕ್ತಿಯೊಬ್ಬ ಇದರಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಕೂಡ ಜರುಗಿದೆ. ಹೀಗಿದ್ದಾಗಿಯೂ ಹೊಂಡದಲ್ಲಿರುವ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಹೆದ್ದಾರಿ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದರು.
ಎಪಿಎಂಸಿ ಭಾಗದಿಂದ ಪಟ್ಟಣದ ಹೊರ ಭಾಗಕ್ಕೆ ಹರಿದು ಹೋಗಬೇಕಿದ್ದ ಚರಂಡಿ ನೀರು ಮುಂದಕ್ಕೆ ಸಾಗುವ ಬದಲಿಗೆ ರಾಮಗೋಪಾಲ್ ಸರ್ಕಲ್ ಕಡೆ ಹರಿದು ಹೋಗುವಂತೆ ಚರಂಡಿ ನಿರ್ಮಿಸಿದ್ದು ಇದರಿಂದ ಕೊಳಚೆ ನೀರು ಪಟ್ಟಣದ ಒಳಭಾಗದಲ್ಲಿ ಶೇಖರಣೆಯಾಗುವುದಿದ್ದು ಸಾಕಷ್ಟು ಸಮಸ್ಯೆಗೆ ಕಾರಣವಾಗಲಿದೆ ಎಂಬುದು ಇಲ್ಲಿನ ಜನರ ಆರೋಪವಾಗಿತ್ತು.
ಅಲ್ಲದೆ ಇಲ್ಲಿ ಸಂಗ್ರಹವಾಗಲಿರುವ ನೀರನ್ನು ಅಡ್ಡವಾಗಿ ಪೈಪುಗಳನ್ನು ಹಾಕುವ ಮೂಲಕ ಪಕ್ಕದಲ್ಲಿರುವ ಖಾಸಗಿ ಜಮೀನನಲ್ಲಿ ಬಿಡಲು ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ ಸದರಿ ನಿವೇಶನದ ಮಾಲಿಕ ಸಿದ್ಧಲಿಂಗಸ್ವಾಮಿ ನ್ಯಾಯಾಲಯದ ಮೆಟ್ಟಿಲೇರಿ ಚರಂಡಿ ನೀರು ತಮ್ಮ ಜಮೀನು ಕಡೆಗೆ ಬಿಡದಂತೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ.
ಪಟ್ಟಣದ ನೀರನೆಲ್ಲಾ ಖಾಸಗಿ ಜಮೀನಿಗೆ ಬಿಡುವ ಉದ್ದೇಶ ಹೊಂದಿದ್ದ ಗುತ್ತಿಗೆದಾರರು ಮುಂದೇನು ಮಾಡಬೇಕೆಂದು ತಿಳಿಯದೆ ಕೆಲಸ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಪತ್ರಿಕೆ ವಿಸ್ಕøತವಾದ ವರದಿ ಪ್ರಕಟಿಸಿದ್ದು. ಪತ್ರಿಕಾ ವರದಿಗೆ ಹೈವೆ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಸ್ಪಂಧಿಸಿದ್ದು ತಕ್ಷಣ ಗುಂಡಿ ಮುಚ್ಚಿ ಪೈಪ್ ಅಳವಡಿಸಿ ತಾತ್ಕಾಲಿಕವಾಗಿ ಸರ್ಕಾರಿ ಸ್ಥಳಕ್ಕೆ ನೀರು ಹೋಗುವಂತೆಯೂ ಮಾಡುವಂತೆ ಸೂಚಿಸಿದ್ದಾರೆ.
ಪರಿಣಾಮ ವರದಿ ಪ್ರಕಟವಾದ ದಿನವೇ ಗುತ್ತಿಗೆದಾರರು ಓಡೋಡಿ ಬಂದು ಆಳೆತ್ತರದ ಗುಂಡಿಯನ್ನು ಮುಚ್ಚಿ ಪೈಪ್ ಲೈನ್ ಮೂಲಕ ಚರಂಡಿ ನೀರನ್ನು ಹೊರ ಸಾಗಿಸಲು ಮುಂದಾಗಿದ್ದಾರೆ. ಇದರಿಂದ ಜನವಸತಿ ಪ್ರದೇಶದಲ್ಲಿ ಆಳೆತ್ತರದ ಗುಂಡಿಯಲ್ಲಿ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವುದು ಹಾಗೂ ಪ್ರಾಣಾಪಾಯ ಎದುರಾಗುವುದು ತಪ್ಪಿದಂತ್ತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ