ತುಮಕೂರು
ಕೇಂದ್ರ ಸರ್ಕಾರದ ಯೋಜನೆಯಾದ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಅವ್ಯವಹಾರಗಳು ನಡದಂತೆ ಕಂಡು ಬರುತ್ತಿದ್ದು, ಇದು ಸ್ಮಾರ್ಟ್ ಸಿಟಿ ಅಲ್ಲ, ಭ್ರಷ್ಟಾಚಾರದ ಕೂಪವಾಗಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಆಕ್ರೋಶ ವ್ಯಕ್ತ ಪಡಿಸಿದರು.
ಅಮಾನಿಕೆರೆ ಏರಿಯ ಮೇಲೆ ಮಾಡುತ್ತಿರುವ ಅಭಿವೃದ್ಧಿ ಕೆಲಸ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಇಂದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇವಲ ಹಣ ಖರ್ಚು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಇದು ನಿಜಕ್ಕೂ ಅಭಿವೃದ್ಧಿ ಕೆಲಸನಾ ಅಥವಾ ಹಣ ಖರ್ಚು ಮಾಡುವ ಕೆಲಸನಾ ಎಂದು ತಿಳಿಯುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ಸ್ಮಾರ್ಟ್ ಸಿಟಿಯ ಮುಖ್ಯಸ್ಥರನ್ನು ಕರೆಯಿಸಿ ಚರ್ಚೆ ಮಾಡುತ್ತೇವೆ, ಈ ಕಾಮಗಾರಿಗಳನ್ನು ನೋಡುತ್ತಿದ್ದರೆ ಬೇಸರವಾಗುತ್ತಿದೆ ಎಂದರು.
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳನ್ನು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಹಾಗೂ ದಿಶಾ ಸಮಿತಿಯ ಸದಸ್ಯರು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ವೀಕ್ಷಿಸಿದರು. ಈ ಸಂಬಂಧ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಸಂಸದರು ಪ್ರಶ್ನಿಸಿದಾಗ ಯಾವುದಕ್ಕೂ ಸರಿಯಾದ ಮಾಹಿತಿ ನೀಡದೇ ತಬ್ಬಿಬ್ಬಾದ ಘಟನೆ ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಡೆಯಿತು.
ಅಮಾನಿಕೆರೆಯ ಅಭಿವೃದ್ಧಿ ವಿಚಾರವಾಗಿ ಈ ಹಿಂದೆ ಟೂಡಾ ಮಾಡಿದ್ದ ಕೆಲಸವನ್ನು ಹಾಗೂ ಇನ್ನೂ ಅಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ವರದಿ ತಯಾರಿಸಲಾಗಿದೆಯೇ ಆಗಿದ್ದರೆ ತೋರಿಸಿ ಎಂದು ಕೇಳಿದಾಗ ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳು ಮೌಖಿಕವಾಗಿ ಉತ್ತರ ನೀಡಲು ಮುಂದಾದರು. ಅದಕ್ಕೆ ಸಂಸದರು ಮೌಖಿಕ ಉತ್ತರ ನೀಡುವ ಅವಶ್ಯಕತೆ ಇಲ್ಲ. ನನಗೆ ಸ್ಮಾರ್ಟ್ ದಾಖಲೆಗಳು ತೋರಿಸಿ ಎಂದರು.
ಈಗಾಗಲೇ ಡಿಜಿಟಲ್ ಇಂಡಿಯಾ ಯೋಜನೆ ಮೂಲಕ ಜಿಎಎಸ್ ಮ್ಯಾಪ್‍ನ ಮೂಲಕ ಅಮಾನಿಕೆರೆಯ ಅಭಿವೃದ್ಧಿಯ ಕಾರ್ಯ ಯೋಜನೆ ತೋರಿಸಿ ಎಂದಾಗ ಅದನ್ನು ಇನ್ನು ಮಾಡಿಲ್ಲ ಎಂಬ ಬೇಜವಬ್ದಾರಿ ಉತ್ತರ ಕೇಳಿ ಬರುತ್ತಿದ್ದಂತೆ ಸಂಸದರು ಸಿಡಿಮಿಡಿಗೊಂಡರು.ಅಮಾನಿಕೆರೆ ಆವರಣದಲ್ಲಿ ನಿರ್ಮಾಣ ಮಾಡಲಾದ ಸ್ಮಾರ್ಟ್ ಲಾಂಜ್ ವೀಕ್ಷಣೆ ಮಾಡಿದ ಸಂಸದರು, ಸ್ಮಾರ್ಟ್ ಲಾಂಜ್ ಕಟ್ಟಡದ ಮುಂಭಾಗದಲ್ಲಿನ ಅನೈರ್ಮಲ್ಯಕ್ಕೆ ಕೋಪಗೊಂಡರು.
ಈ ಕಾಮಗಾರಿ ಎಷ್ಟು ವೆಚ್ಚದಲ್ಲಿ ಮಾಡಿರುವಂತದ್ದು, ಇದರಿಂದ ಯಾವ ರೀತಿಯ ಅನುಕೂಲವಾಗುತ್ತಿದೆ ಎಂಬುದನ್ನು ತೋರಿಸಿ ಎಂದಾಗ ಅದರ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳು ವಿಫಲರಾದರು. ಕೇವಲ ಐಟಿ ಸಂಬಂಧಿತ ಎಂಜಿನಿಯರ್ ಸ್ಮಾರ್ಟ್ ಲಾಂಜ್‍ನಲ್ಲಿ ಅಳವಡಿಸಲಾದ ಉಪಕರಣಗಳ ಬಗ್ಗೆ, ಅದರ ಬಳಕೆಯ ಬಗ್ಗೆ ಮಾಹಿತಿ ತಿಳಿಸಿದರು.
ಈ ವೇಳೆ ದಿಶಾ ಸಮಿತಿ ಸದಸ್ಯರು ಸ್ಮಾರ್ಟ್ ಲಾಂಜ್‍ಗೆ ಆಗಮಿಸುವವರ ಮಾಹಿತಿ ಆಧಾರ್ ಸಮೇತ ಕೇಳಿದಾಗ ಆ ಮಾಹಿತಿ ಇಲ್ಲ. ಕೇವಲ ಇಲ್ಲಿ ನೊಂದಣಿ ಮಾಡಿಸಿದವರ ಮಾಹಿತಿ ಮಾತ್ರ ಇದೆ ಎಂದು ರಿಜಿಸ್ಟಾರ್ ಪುಸ್ತಕವನ್ನು ತೋರಿಸಿದರು. ಇದನ್ನು ಒಪ್ಪದ ಸದಸ್ಯರು ಡಿಜಿಟಲ್ ಮೂಲಕ ಮಾಡಿದಂತಹ ಆಧಾರ್ ಸಹಿತ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಸ್ಮಾರ್ಟ್ ಸಿಟಿಯ ಎಂಜಿನಿಯರ್‍ಗಳ ಬಳಿ ಮಾಹಿತಿ ಕೇಳುತ್ತಿರುವಾಗ ಮಧ್ಯದಲ್ಲಿ ಮಾತನಾಡುತ್ತಿದ್ದ ಪಿಎಂಸಿಯ ಎಂಜಿನಿಯರೊಬ್ಬರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಈ ಹಿಂದೆ ಟೂಡಾ ವತಿಯಿಂದ ಅಮಾನಿಕೆರೆ ಅಭಿವೃದ್ಧಿ ಮಾಡಲಾಗಿದ್ದು, ಅಲ್ಲಿದ್ದಂತ ಕೆಲವು ಸಮಸ್ಯೆಗಳ ಬಗ್ಗೆ ಟೂಡಾ ಅಧಿಕಾರಿಗಳಿಗೆ ಕೇಳುವಾಗ ಪಿಎಂಸಿ ಎಂಜಿಯರ್ ಒಬ್ಬರು ಯಾವುದೇ ದಾಖಲೆಗಳಿಲ್ಲದೆ ಮೌಖಿಕವಾಗಿ ಉತ್ತರ ನೀಡಲು ಮುಂದಾದರು. ಇದರ ನಡುವೆ ಸ್ಮಾರ್ಟ್ ಸಿಟಿಯ ಕಾರ್ಯಪಾಲಕ ಅಭಿಯಂತರರು ಕೂಡ ಅವರ ಮೇಲೆ ಆಕ್ರೋಶಗೊಂಡರು.
ಗಾಜಿನ ಮನೆ ಮುಖ್ಯದ್ವಾರದಲ್ಲಿ ನಿರ್ಮಾಣ ಮಾಡಲಾದ ವಾಕಿಂಗ್‍ಪಾಥ್ ಬಳಿ ಸುಮಾರು ಹತ್ತಕ್ಕೂ ಹೆಚ್ಚು ಮೀಟರ್‍ನಲ್ಲಿ ಚರಂಡಿಯನ್ನು ನಿರ್ಮಾಣ ಮಾಡಲಾಗಿರುವುದರ ಬಗ್ಗೆ ಟೂಡಾ ಆಯುಕ್ತ ಯೋಗಾನಂದ್ ಅವರನ್ನು ಪ್ರಶ್ನಿಸಿದರು. ಮಳೆ ನೀರು ಚರಂಡಿ ಮೂಲಕ ಹರಿಯ ಬೇಕೋ ಅಥವಾ ವಾಕಿಂಗ್ ಪಾಥ್ ಮೇಲೆ ಹರಿಯಬೇಕು. ಕಾಮಗಾರಿ ಮಾಡುವಾಗ ಈ ಬಗ್ಗೆ ಅಧ್ಯಯನ ಮಾಡುವುದಿಲ್ಲವೇ? ಯಾರು ಈ ಕಾಮಗಾರಿ ಮಾಡಿರುವುದರ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡಬೇಕು ಎಂದು ಟೂಡಾ ಆಯುಕ್ತರಿಗೆ ಸಂಸದರು ಸೂಚನೆ ನೀಡಿದರು.
ನಂತರ ಕೆರೆಯ ಏರಿ ಮೇಲೆ ಮಾಡಲಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು, ದಿಶಾ ಸಮಿತಿ ಸದಸ್ಯರು, ಈ ಹಿಂದೆ ಟೂಡಾದಿಂದ ಕೆರೆಯ ಅಭಿವೃದ್ಧಿ ಮಾಡಿದಾಗಲೇ ಕೆರೆಯ ಏರಿ ಭದ್ರವಾಗಿತ್ತು. ಇದೀಗ ಮತ್ತೆ ಅದನ್ನು ಅಭಿವೃದ್ಧಿ ಪಡಿಸುವ ಅನಿವಾರ್ಯ ವಾದರೂ ಏನಿತ್ತು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಮಾರ್ಟ್ ಸಿಟಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಸವರಾಜು ಅವರು, ಕೆರೆಯ ಏರಿ ಮೇಲೆ ಸೈಕಲ್ ಟ್ರ್ಯಾಕ್ ಮಾಡಲಾಗುತ್ತಿದೆ. ಅದಕ್ಕಾಗಿ ಅಗಲೀಕರಣ ಮಾಡಲಾಗಿದೆ ಎಂದು ಉತ್ತರಿಸಿದರು. ಅದಕ್ಕೆ ಮರು ಪ್ರಶ್ನೆ ಮಾಡಿದ ಸದಸ್ಯರು ಇದ್ದಂತಹ ಟ್ರ್ಯಾಕ್‍ಅನ್ನು ಯಾರು ಬಳಕೆ ಮಾಡಿಕೊಳ್ಳುತ್ತಿಲ್ಲ ಅಂತಹ ವೇಳೆಯಲ್ಲಿ ಮತ್ತೊಂದು ಟ್ರ್ಯಾಕ್ ನಿರ್ಮಾಣ ಮಾಡುವ ಅವಶ್ಯಕತೆ ಇತ್ತಾ ಎಂದರು.
ಇದಕ್ಕೆ ಉತ್ತರ ಕೊಡಲು ಸ್ಮಾರ್ಟ್ ಸಿಟಿ ಎಂಜಿಯರ್‍ಗಳ ಬಳಿ ಸೂಕ್ತ ದಾಖಲೆಗಳಾಗಲಿ, ಸರಿಯಾದ ಮಾಹಿತಿಯಾಗಲಿ ಇರುವುದಿಲ್ಲ. ಅಲ್ಲದೆ ತುಮಕೂರಿನಲ್ಲಿ ಮಾಡಲಾಗುತ್ತಿರುವ ಕಾಮಗಾರಿಗಳನ್ನು ತುಮಕೂರು ಜಿಲ್ಲೆಯವರು ಬಿಟ್ಟು ಇತರೆ ಜಿಲ್ಲೆಯವರು ಕಾಮಗಾರಿ ಮಾಡುತ್ತಿದ್ದಾರೆ. ಯಾಕೆ ತುಮಕೂರಿನಲ್ಲಿ ಕಾಮಗಾರಿ ಮಾಡಬಲ್ಲ ಸಶಕ್ತ ಇರಲಿಲ್ಲವೇ ಎಂಬ ಪ್ರಶ್ನೆ ಬಂದಾಗ ಇಡೀ ಟೆಂಡರ್‍ಗಳನ್ನು ಬೆಂಗಳೂರಿನಲ್ಲಿ ಕುಳಿತು ಅಲ್ಲೆ ಮಾಡುತ್ತಿರಬೇಕಾದರೆ ಅವರಿಗೆ ಬೇಕಾದವರಿಗೆ ಟೆಂಡರ್ ನೀಡಲಾಗುತ್ತಿದೆ. ಆನೆ ನಡೆದಿದ್ದೇ ದಾರಿ ಎಂಬಂತೆ ಬೆಂಗಳೂರಿನಲ್ಲಿ ಏನು ಮಾಡಲಾಗುತ್ತಿದೆಯೇ ಅದೇ ಸ್ಮಾರ್ಟ್ ಸಿಟಿ ಕಾಮಗಾರಿಯಾಗುತ್ತಿದೆ. ಇಲ್ಲಿ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲವೇ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಒಟ್ಟಾರೆಯಾಗಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳಲ್ಲಿ ಮೋಸದ ಕೃತ್ಯಗಳಾಗುತ್ತಿದ್ದು, ಕಾಮಗಾರಿಗಳ ಬಗ್ಗೆ ಯಾವುದೇ ರೀತಿಯ ದಾಖಲೆಗಳನ್ನು ಒದಗಿಸುವಲ್ಲಿ ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳು ವಿಫಲರಾದರು. ಅಷ್ಟೇ ಅಲ್ಲದೆ, ತುಮಕೂರು ನಗರದಲ್ಲಿ ಎಷ್ಟು ಕೆರೆಗಳಿಗೆ ಎಂಬ ಪ್ರಶ್ನೆಗೆ ಆರೇಳು ಎಂಬ ಉತ್ತರ ಬರುತ್ತಿದ್ದಂರೆ ತುಮಕೂರು ನಗರದ ರೂಪು ರೇಷೆಗಳ ಬಗ್ಗೆ ತಿಳಿಯದೇ ಅದ್ಹೇಗೆ ಕಾಮಗಾರಿ ಮಾಡಿಸುತ್ತೀರಾ ಎಂದು ಆಕ್ರೋಶ ವ್ಯಕ್ತ ಪಡಸಿದರು. ಅಲ್ಲದೆ ಹತ್ತು ದಿನಗಳೊಳಗಡೆ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದಕ್ಕೂ ಮುಂಚೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮರಗಳ ಗಣತಿಗೆ ಮಾಡಲಾದ ಮೊಬೈಲ್ ತಂತ್ರಾಂಶಕ್ಕೆ ಚಾಲನೆ ನೀಡಿ, ತುಮಕೂರು ನಗರದಲ್ಲಿನ ಪ್ರತಿಯೊಂದು ಜಾತಿಯ ಮರಗಳು, ಎಷ್ಟು ಮರಗಳು ಇವೆ ಎಂಬ ಪ್ರತಿಯೊಂದು ಮಾಹಿತಿಯನ್ನು ಇದರಲ್ಲಿ ಸೇರಿಸಬೇಕು ಎಂದು ತಿಳಿಸಿದರು. ಇದಾದ ಬಳಿಕೆ ಸಂಸದರು ಕೆರೆಗಳ ಗಣತಿ ಕಾರ್ಯಕ್ಕೆ ಚಾಲನೆ ನೀಡಿದರಲ್ಲದೆ, ತುಮಕೂರು ನಗರದಲ್ಲಿರುವ ಕೆರೆಗಳ ಬಗ್ಗೆ ಮಾಹಿತಿ ಇಲ್ಲದ ಸ್ಮಾರ್ಟ್ ಸಿಟಿ ಎಂಜಿನಿಯರ್‍ಗೆ ಕೆರೆಯ ಸುತ್ತಳತೆಯೊಂದಿಗೆ ಕೆರೆಗಳ ಮಾಹಿತಿ ನೀಡಿದರು.
ಎಸಿ. ಶಿವಕುಮಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಂದ್ರಶೇಖರ್, ಸ್ಮಾರ್ಟ್‍ಸಿಟಿ ಕಾರ್ಯಪಾಲಕ ಇಂಜಿನಿಯರ್ ಬಸವರಾಜ ಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಶ್ಮಿ, ದಿಶಾ ಸಮಿತಿಯ ಸದಸ್ಯರು ಹಾಗೂ ತುಮಕೂರು ಅಭಿವೃದ್ಧಿ ಫೋರಂನ ಸದಸ್ಯ ಕುಂದರನಹಳ್ಳಿ ರಮೇಶ್, ದಿಶಾ ಸಮಿತಿಯ ಸದಸ್ಯರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ ಹಾಗೂ ಸಂಬಂಧಿಸಿದ ಮತ್ತಿತರೆ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ