ದಾವಣಗೆರೆ
ಭಾರೀ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ಸಿಗದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದ ಪಿ.ಬಿ. ರಸ್ತೆಯಲ್ಲಿರುವ ಡಿ.ಆರ್.ಆರ್. ಪ್ರೌಢಶಾಲೆಯಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯದಲ್ಲಿ ಮೊದಲು ಅಂಚೆ ಮತಗಳ ಎಣಿಕೆ ನಡೆಯಿತು.
ಬಳಿಕ ಇವಿಎಂಗಳಲ್ಲಿ ಅಡಕವಾಗಿದ್ದ ಮತ ಎಣಿಕೆ ನಡೆದು ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಪಾಲಿಕೆ ಚುನಾವಣೆಯ ನಿಚ್ಚಳ ಫಲಿತಾಂಶ ಪ್ರಕಟವಾಯಿತು. ಮತ ಎಣಿಕೆ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರುಗಳು ಚುರುಕಿನಿಂದ ಓಡಾಡುತ್ತಾ ಮತ ಎಣಿಕೆ ಕಾರ್ಯವನ್ನು ವೀಕ್ಷಿಸಿದರು.
ಮಹಾನಗರ ಪಾಲಿಕೆಯ 45 ವಾರ್ಡ್‍ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 22 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಬಿಜೆಪಿ 17 ಸ್ಥಾನಗಳಲ್ಲಿ, ಜೆಡಿಎಸ್ 1 ಸ್ಥಾನದಲ್ಲಿ ಹಾಗೂ ಐವರು ಪಕ್ಷೇತರರು ಜಯಗಳಿಸಿದ್ದಾರೆ.ಒಟ್ಟು 45 ಸದಸ್ಯರ ಬಲ ಹೊಂದಿರುವ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ರಚಿಸಲು 23 ಮ್ಯಾಜಿಕ್ ನಂಬರ್ ಆಗಿದೆ. ಆದರೆ, ಕಳೆದ ಬಾರಿ 36 ಸ್ಥಾನ ಪಡೆದು ಆಡಳಿತ ನಡೆಸಿದ್ದ ಕಾಂಗ್ರೆಸ್ ಈ ಬಾರಿ 22 ಸ್ಥಾನಕ್ಕೆ ಕುಸಿದಿದ್ದರೂ ಅಧಿಕಾರ ರಚಿಸುವ ಅವಕಾಶ ಗಿಟ್ಟಿಸಿ ಕೊಂಡಿದ್ದರೆ, 2013ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ, ಬಿಎಸ್‍ಆರ್ ಕಾಂಗ್ರೆಸ್ ಪಕ್ಷಗಳಾಗಿ ಮೂರು ಹೋಳಾಗಿದ್ದರ ಪರಿಣಾಮ, ಒಂದು ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 17 ಸ್ಥಾನ ಪಡೆದಿದೆ.
ಇನ್ನೂ ಜೆಡಿಎಸ್ ಒಂದು ಸ್ಥಾನ ಪಡೆದು ಪಾಲಿಕೆಯಲ್ಲಿ ಖಾತೆ ತೆರೆದಿದ್ದರೆ, ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್-ಬಿಜೆಪಿಯಿಂದ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಐವರು ಗೆಲುವಿನ ನಗೆ ಬೀರಿದ್ದಾರೆ. ಅತಂತ್ರವಾಗಿರುವ ಪಾಲಿಕೆಯಲ್ಲಿ ಅಧಿಕಾರ ರಚನೆಗೆ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳೇ ನಿರ್ಣಾಯಕರಾಗಿದ್ದಾರೆ.
ಹೀಗಿದೆ ಲೆಕ್ಕಾಚಾರ:
22 ಸ್ಥಾನದಲ್ಲಿ ಜಯಗಳಿಸಿರುವ ಕಾಂಗ್ರೆಸ್ 45ನೇ ವಾರ್ಡ್‍ನಿಂದ ಜಯಸಾಧಿಸಿರುವ ಪಕ್ಷೇತರ ಉದಯಕುಮಾರ್ ಹಾಗೂ 2ನೇ ವಾರ್ಡ್‍ನಿಂದ ಗೆದ್ದಿರುವ ಜೆಡಿಎಸ್‍ನ ನೂರ್ ಜಹಾನ್ ಬಿ ಅವರುಗಳನ್ನು ಪಕ್ಷಕ್ಕೆ ಸೆಳೆದು ಪಾಲಿಕೆಯಲ್ಲಿ ಅಧಿಕಾರ ಸ್ಥಾಪಿಸಲು ಪ್ರಯತ್ನಿಸುತ್ತಿದ್ದರೆ, 17 ಸ್ಥಾನದಲ್ಲಿ ಗೆದ್ದಿರುವ ಬಿಜೆಪಿ ನಾಯಕರು ಪಕ್ಷದಿಂದ ಬಂಡಾಯವೆದ್ದು, ಸ್ಪರ್ಧಿಸಿ ಗೆದ್ದು ಬಂದಿರುವ ನಾಲ್ವರನ್ನು ಮತ್ತೆ ಪಕ್ಷಕ್ಕೆ ಸೇರಿಸಿ ಕೊಂಡು ಅಧಿಕಾರ ರಚನೆ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ಮತ ಪಡೆದು ಅಧಿಕಾರ ರಚಿಸಲು ಪ್ರಯತ್ನಿಸಿದರೂ ಬಿಜೆಪಿ ಬಲ 23 ಆಗಲಿದೆ. ಇದಕ್ಕೆ ಪ್ರತಿತಂತ್ರ ಹೂಡಿರುವ ಕಾಂಗ್ರೆಸ್ ಅಧಿಕಾರ ರಚನೆಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕರುಗಳಾದ ಡಾ.ಶಾಮನೂರು ಶಿವಶಂಕರಪ್ಪ, ಅಬ್ದುಲ್ ಜಬ್ಬಾರ್ ಅವರುಗಳು ಮತ ಪಡೆಯಲು ನಿರ್ಧರಿಸಿದ್ದು, ಆಗ ಕಾಂಗ್ರೆಸ್ ಬಲ 26 ಆಗಲಿದೆ.
ಮತ ಎಣಿಕೆ ಕಾರ್ಯಕ್ಕೆ ಒಟ್ಟು 126 ಸಿಬ್ಬಂದಿಗಳು ನಿಯೋಜಿಸಲಾಗಿತ್ತು. ಪ್ರತಿ ವಾರ್ಡ್‍ಗೂ ತಲಾ ಒಂದುಸ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. 45 ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯನಡೆಯಿತು. ಪ್ರತಿ ಚುನಾವಣಾಧಿಕಾರಿಗಳಿಗೆ ಐದೈದು ಟೆಬಲ್ ನೀಡಲಾಗಿತ್ತು. 63 ಮೇಲ್ವಿಚಾರಕರು ಹಾಗೂ 63 ಸಹಾಯಕರನ್ನು ನೇಮಿಸಲಾಗಿತ್ತು. ಅಲ್ಲದೇ, ಮತ ಎಣಿಕೆ ಕೇಂದ್ರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಲ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








