ತುಮಕೂರು
ಹಲವು ದಶಕಗಳಿಂದ ಕೆಎಸ್ಸಾರ್ಟಿಸಿ ಬಸ್ಗಳಿಗೆ ತಾಣವಾಗಿದ್ದ ತುಮಕೂರಿನ ಈಗಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಇನ್ನೊಂದು ವಾರದಲ್ಲಿ ಕಣ್ಮರೆಯಾಗಲಿದೆ. ಆ ಜಾಗದಲ್ಲಿ ಆರು ಅಂತಸ್ತಿನ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ಸುಸಜ್ಜಿತ ಬಸ್ ನಿಲ್ದಾಣವಾಗಿ ರೂಪುಗೊಳ್ಳಲಿದೆ.
ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಕೆಎಸ್ಸಾರ್ಟಿಸಿ ಸಹಭಾಗಿತ್ವದಲ್ಲಿ ಇಲ್ಲಿನ 4.39 ಎಕರೆ ಪ್ರದೇಶದಲ್ಲಿ 174 ಕೋಟಿ ರೂ.ಗಳ ವೆಚ್ಚದಲ್ಲಿ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣವಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯ 100 ಕೋಟಿ ರೂ. ಹಾಗೂ ಕೆಎಸ್ಆರ್ಟಿಸಿಯ 74 ಕೋಟಿ ರೂ.ಗಳ ವೆಚ್ಚದಲ್ಲಿ ಆರು ಅಂತಸ್ತಿನ ಸೌಲಭ್ಯಪೂರಿತ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ.
ತುಮಕೂರು : 174 ಕೋಟಿ ರೂ ವೆಚ್ಚದ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣ ಕಾರ್ಯ ಶೀಘ್ರ ಆರಂಭ
ಮೂರು ವರ್ಷದ ಕಾಲಾವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ಹಾಲಿ ಬಸ್ ನಿಲ್ದಾಣವನ್ನು ಪಕ್ಕದ ಬಸವೇಶ್ವರ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಡಿಪೊ ಜಾಗಕ್ಕೆ ಸ್ಥಳಾಂತರಿಸಲಾಗುತ್ತದೆ.ಬಸ್ ನಿಲ್ದಾಣ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿದೆ. ಬಸ್ ನಿಲ್ದಾಣದಲ್ಲಿದ್ದ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಸೇರಿದಂತೆ ಪ್ರಮುಖ ಆಡಳಿತ ಕಚೇರಿಗಳನ್ನು ಅಂತರಸನಹಳ್ಳಿಯ ಡಿಪೊ-2ಕ್ಕೆ ಸ್ಥಳಾಂತರ ಮಾಡಲಾಗಿದೆ.
ಇನ್ನುಳಿದಂತೆ ಬಸ್ ಸೇವೆಯನ್ನು ಡಿಪೊ-1ಕ್ಕೆ ಸ್ಥಳಾಂತರಿಸಲು ಅಗತ್ಯ ಸಿದ್ಧತೆಗಳು ನಡೆದಿವೆ. ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಬಸ್ ನಿಲ್ದಾಣದ ಸೇವೆ ಡಿಪೊದಲ್ಲಿ ಆರಂಭವಾಗಬೇಕಾಗಿತ್ತು. ಆದರೆ, ಅಶೋಕ ರಸ್ತೆ, ಜೆ.ಸಿ.ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಆರಂಭವಾಗಿರುವುದರಿಂದ ಅವು ಮುಗಿಯಲು ವಿಳಂಬವಾಯಿತು.ಶೀಘ್ರ ಪೂರ್ಣಗೊಳಿಸಿ, ಈ ತಿಂಗಳ ಅಂತ್ಯದ ವೇಳೆಗೆ ಬಸ್ ನಿಲ್ದಾಣವನ್ನು ಡಿಪೊಗೆ ಸ್ಥಳಾಂತರ ಮಾಡಲು ಭರದ ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಶೋಕ ರಸ್ತೆ, ಗುಬ್ಬಿ ವೀರಣ್ಣ ರಂಗಮಂದಿರ ರಸ್ತೆ, ಜೆ.ಸಿ.ರಸ್ತೆ, ಬಸವೇಶ್ವರ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಈ ರಸ್ತೆಗಳ ಫುಟ್ಪಾತ್ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.
ಡಿಪೊ ಜಾಗ ಬಸ್ ನಿಲ್ದಾಣವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು, ಸಂಸ್ಥೆಯ ಆಡಳಿತ ವ್ಯವಸ್ಥೆ ನಿರ್ವಹಿಸುವ ಕಚೇರಿಗಳ ಸಿದ್ಧತಾ ಕಾರ್ಯ ನಡೆದಿದೆ. ನಗರ ಸಾರಿಗೆ ಸೇರಿದಂತೆ ವಿವಿಧ ಮಾರ್ಗಗಳ ಬಸ್ಗಳ ನಿಲುಗಡೆಗೆ ಪ್ರತ್ಯೇಕ ಪ್ಲಾಟ್ಫಾರಂ ನಿರ್ಮಾಣ ಮಾಡಲಾಗುತ್ತಿದೆ. ಮಾರ್ಗಸೂಚಿ ಫಲಕಗಳು, ಪ್ರಯಾಣಿಕರಿಗೆ ಶೌಚಾಲಯ, ಕುಡಿಯುವ ನೀರು, ಆಸನ, ಬೆಳಕು, ದ್ವಿಚಕ್ರ ವಾಹನಗಳ ಪಾಕಿಂಗ್ ವ್ಯವಸ್ಥೆ ಮಾಡುವ ಕೆಲಸ ನಡೆಯುತ್ತಿದೆ.
ಬಸ್ಗಳು ಸರಾಗವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಬರಲು ಬಸವೇಶ್ವರ ರಸ್ತೆಯ ಪ್ರವೇಶ ದ್ವಾರವನ್ನು ಅಗಲ ಮಾಡಿ, ಗುಬ್ಬಿ ವೀರಣ್ಣ ರಂಗಮಂದಿರ ರಸ್ತೆಗೆ ಎರಡು ಪ್ರವೇಶ ದ್ವಾರಗಳನ್ನು ತೆರೆಯಲಾಗುತ್ತದೆ. ಇಲ್ಲಿನ ಕೆಲಸಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಡಿಪೊದ ವರ್ಕ್ ಸೂಪರಿಂಟೆಂಡೆಂಟ್ ಪ್ರತ್ಯಕ್ಷ ರಾವ್ ಹೇಳಿದರು.
ಬಸ್ ನಿಲ್ದಾಣ ಇಲ್ಲಿಗೆ ಸ್ಥಳಾಂತರಗೊಂಡ ನಂತರ ಹಾಲಿ ನಿಲ್ದಾಣದ ಎಲ್ಲಾ ಕಟ್ಟಡಗಳನ್ನು ನೆಲಸಮಗೊಳಿ ಹೊಸ ನಿರ್ಮಾಣ ಆರಂಭಿಸಲಾಗುತ್ತದೆ. ಆರು ಅಂತಸ್ತಿನ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ನಲ್ಲಿ ಎರಡು ನೆಲ ಅಂತಸ್ತುಗಳಲ್ಲಿ ವಾಹನಗಳ ಪಾಕಿಂಗ್ಗೆ ಅವಕಾಶ ಮಾಡಿಕೊಡಲಾಗುತ್ತದೆ. ಅದರ ಮೇಲಿನ ನಾಲ್ಕು ಅಂತಸ್ತುಗಳಲ್ಲಿ ಮೊದಲ ಅಂತಸ್ತಿನಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ, ಎರಡನೇ ಅಂತಸ್ತಿನಲ್ಲಿ ಗ್ರಾಮೀಣ ಸಾರಿಗೆ ಹಾಗೂ ಇತರೆ ನಗರ, ಪಟ್ಟಣಗಳಿಗೆ ಸಂಪರ್ಕ ಸೇವೆ ನೀಡುವ ಬಸ್ಗಳಿಗೆ ಸ್ಥಳಾವಕಾಶ ಮಾಡುವ ಯೋಜನೆ ಇದೆ. ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ವಾಣಿಜ್ಯ ಮಳಿಗೆ, ಕೆಸ್ಸಾರ್ಟಿಸಿ ಆಡಳಿತ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ.
ತುಮಕೂರು ನಗರ ವಿಶಾಲವಾಗಿ ಬೆಳೆಯುತ್ತಿದೆ. ಜನ ಸಂಖ್ಯೆ ಹೆಚ್ಚಾಗುತ್ತಿದೆ. ಹೊರ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ತುಮಕೂರು ಬಸ್ ನಿಲ್ದಾಣದ ಮೂಲಕ ಹಾದು ಹೋಗುವ ಬಸ್ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆ ಬಸ್ಗಳ ಜೊತೆಗೆ ಇಲ್ಲಿಂದ ಹೊರಡುವ ಬಸ್ಗಳು, ನಗರ ಸಾರಿಗೆ ಬಸ್ಗಳ ಸಂಖ್ಯೆ ವರ್ಷವರ್ಷಕ್ಕೆ ಏರಿಕೆಯಾಗುವುದು. ತುಮಕೂರು ನಗರ ವಿಸ್ತಾರಗೊಂಡಂತೆ ನಗರ ಸಾರಿಗೆ ಬಸ್ ಸೇವೆಯನ್ನೂ ವಿಸ್ತರಿಸಬೇಕಾಗುತ್ತದೆ. ಈ ಸ್ಥಿತಿಯಲ್ಲಿ ಹಾಲಿ ಇರುವ ಕೆಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸದ್ಯದ ಬಸ್ಗಳ ನಿಲುಗಡೆಗೇ ಸ್ಥಳಾವಕಾಶವಿಲ್ಲದಂತಾಗಿದೆ, ಭವಿಷ್ಯದಲ್ಲಿ ಇನ್ನೂ ಸಮಸ್ಯೆಯಾಗುತ್ತದೆ.
ಕಿಷ್ಕಿಂದೆಯಂತಾಗಿರುವ ಬಸ್ ನಿಲ್ದಾಣದಲ್ಲಿ ನಿತ್ಯ ಸಾವಿರಾರು ಬಸ್ಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಿಕೊಡಲು ಫಜೀತಿಯಾಗುತ್ತಿದೆ. ಪ್ರಯಾಣಿಕರಿಗೂ ಸಮಸ್ಯೆ. ಹೀಗಾಗಿ, ನಗರ ಸಾರಿಗೆ ಬಸ್ಗಳಿಗೆ ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಿಸಿ, ಇಲ್ಲಿಂದ ಸ್ಥಳಾಂತರಿಸಬೇಕು ಎಂಬ ಬೇಡಿಕೆಯೂ ಇತ್ತು. ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣಗೊಂಡ ನಂತರ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸಿದಂತಾಗುತ್ತದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
