ತುಮಕೂರು : 175 ಕೋಟಿ ರೂ ವೆಚ್ಚದ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣ ಕಾರ್ಯ ಶೀಘ್ರ ಆರಂಭ

0
10822

ತುಮಕೂರು

     ನಗರದ ಈಗಿರುವ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದ ಕಟ್ಟಡಗಳು ಶೀಘ್ರ ನೆಲಸಮಗೊಂಡು ಆ ಜಾಗದಲ್ಲಿ 175 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗುತ್ತದೆ. ಸ್ಮಾರ್ಟ್ ಸಿಟಿ ತುಮಕೂರಿಗೆ ಸ್ಮಾರ್ಟ್ ಬಸ್‍ನಿಲ್ದಾಣ ಮಾಡುವ ಸಲುವಾಗಿ ಸ್ಮಾರ್ಟ್‍ಸಿಟಿ ಯೋಜನೆ ಹಾಗೂ ಕೆಎಸ್‍ಆರ್‍ಟಿಸಿ ಸಹಯೋಗದಲ್ಲಿ ಇಲ್ಲಿ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ.

    ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲೋಕಸಭಾ ಚುನಾವಣೆಯ ನೀತಿಸಂಹಿತೆ ಮುಗಿದ ನಂತರ ಕಾಮಗಾರಿ ಆರಂಭಗೊಳ್ಳಲಿದೆ. ಇಂಟಿಗ್ರೇಟೆಡ್ ಬಸ್ ಟರ್ಮಿನಲ್ ಕಾಮಗಾರಿಗಾಗಿ ಬಸ್ ನಿಲ್ದಾಣವನ್ನು ತೆರವು ಮಾಡಿ, ನಿಲ್ದಾಣದ ಪರ್ಯಾಯ ವ್ಯವಸ್ಥೆಗೆ ಕೆಎಸ್‍ಆರ್‍ಟಿಸಿ ಸಿದ್ಧವಾಗಿದೆ. ನಿರ್ಮಾಣ ಕಾರ್ಯ ಮುಗಿಯುವವರೆಗೂ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಖಾಸಗಿ ಬಸ್‍ನಿಲ್ದಾಣದ ಹಿಂಭಾಗದಲ್ಲಿರುವ ಕೆಎಸ್‍ಆರ್‍ಟಿಸಿ ಡಿಪೋ ಜಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎ ಎನ್ ಗಜೇಂದ್ರಕುಮಾರ್ ಹೇಳಿದರು.

     4.39 ಎಕರೆ ಪ್ರದೇಶದ ಬಸ್‍ನಿಲ್ದಾಣ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ 100 ಕೋಟಿ ರೂ ಹಾಗೂ ಕೆಎಸ್‍ಆರ್‍ಟಿಸಿಯ 75 ಕೋಟಿ ರೂ.ಗಳ ವೆಚ್ಚದಲ್ಲಿ ಆರು ಅಂತಸ್ತಿನ ಆಧುನಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಜೂನ್ ತಿಂಗಳಿನಲ್ಲಿ ಹಾಲಿ ಬಸ್‍ನಿಲ್ದಾಣದ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಆರಂಭವಾಗಲಿದೆ.

      ಮೊದಲ ಅಂತಸ್ತಿನಲ್ಲಿ ನಗರ ಸಾರಿಗೆ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಎರಡನೇ ಅಂತಸ್ತಿನಲ್ಲಿ ಗ್ರಾಮೀಣ ಸಾರಿಗೆ ಹಾಗೂ ಇತರೆ ನಗರ, ಪಟ್ಟಣಗಳಿಗೆ ಸಂಪರ್ಕ ಸೇವೆ ನೀಡುವ ಬಸ್‍ಗಳಿಗೆ ಸ್ಥಳಾವಕಾಶ ಮಾಡುವ ಯೋಜನೆ ಇದೆ. ಮೂರನೇ ಅಂತಸ್ತಿನಲ್ಲಿ ಕೆಎಸ್‍ಆರ್‍ಟಿಸಿಯ ಆಡಳಿತ ಕಛೇರಿಗಳಿಗೆ ಬಳಸಲಾಗುತ್ತದೆ.

       ಈಗಿರುವ ಬಸ್‍ನಿಲ್ದಾಣ ಕಿಷ್ಕಿಂಧೆ. ನಿತ್ಯ ಸಾವಿರಾರು ಬಸ್‍ಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಿಕೊಡಲು ಫಜೀತಿಯಾಗುತ್ತಿದೆ. ಪ್ರಯಾಣಿಕರಿಗೂ ಇಲ್ಲಿ ಗೊಂದಲ. ನಗರ ಸಾರಿಗೆ ಸೇರಿ ಎಲ್ಲಾ ಕಡೆಯ ಬಸ್‍ಗಳು ಬಂದು ಹೋಗಲು ನಿಲ್ದಾಣದ ಜಾಗ ಸಾಕಾಗುತ್ತಿಲ್ಲ. ತುಮಕೂರು ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಆನ ಸಂಖ್ಯೆ ಏರುತ್ತಿದೆ. ಎಲ್ಲಾ ಬಡಾವಣೆಗಳಿಗೂ ನಗರ ಸಾರಿಗೆ ಸೇವೆ ವಿಸ್ತರಿಸಬೇಕಾಗಿದೆ. ಜೊತೆಗೆ ಗ್ರಾಮೀಣ ಸಾರಿಗೆ ಬಸ್‍ಗಳು, ಹೊರ ಜಿಲ್ಲೆಗಳಿಂದ ಬಂದು ಹೋಗುವ ಬಸ್‍ಗಳ ಸಂಖ್ಯೆಯೂ ಹೆಚ್ಚುತ್ತಿದೆ. ರಾಜಧಾನಿ ಬೆಂಗಳೂರಿಗೆ ಹೋಗಿ ಬರುವ ಬಸ್‍ಗಳಿಗೇ ಪ್ರತ್ಯೇಕ ನಿಲ್ದಾಣ ಮಾಡಬೇಕು ಎನ್ನುವಷ್ಟು ಬೇಡಿಕೆಗೆ ಅನುಗುಣವಾಗಿ ಆ ಮಾರ್ಗದ ಬಸ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

       ಈ ಕಾರಣದಿಂದ ಬಸ್ ನಿಲ್ದಾಣವನ್ನು ವಿಶಾಲ ಜಾಗಕ್ಕೆ ಸ್ಥಳಾಂತರಿಸಬೇಕು ಎಂಬ ಪ್ರಸ್ತಾಪಗಳು ಬಂದವು. ಬಸ್ ನಿಲ್ದಾಣದ ಒತ್ತಡ ತಡೆಯಲು ಪ್ರತ್ಯೇಕ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡುವ ಪ್ರಯತ್ನ ನಡೆದವು. ಬಾಳನಕಟ್ಟೆಯಲ್ಲಿ ನಗರ ಪಾಲಿಕೆ ಜಾಗದಲ್ಲಿ ಸಿಟಿ ಬಸ್‍ಸ್ಟಾಂಡ್ ಆರಂಭಿಸಲು, ಆ ಜಾಗ ಕೋರಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ನಗರಪಾಲಿಕೆಗೆ ಮನವಿ ಮಾಡಿದ್ದರು. ಆದರೆ, ಅದಾವುದೂ ಸಾಧ್ಯವಾಗದೆ ಇರುವ ಜಾಗದಲ್ಲೇ ಆಧುನಿಕ ಬಸ್‍ನಿಲ್ದಾಣ ನಿಮಾಣ ಮಾಡಲು ಕೆಎಸ್‍ಆರ್‍ಟಿಸಿ ಸಿದ್ಧವಾಗಿದೆ.

       ಇಂಟಿಗ್ರೇಟೆಡ್ ಬಸ್ ಟರ್ಮಿನಲ್ ನಿರ್ಮಾಣವಾದರೆ ನಗರಕ್ಕೊಂದು ಸುಸಜ್ಜಿತ ಬಸ್ ನಿಲ್ದಾಣ ದೊರೆತಂತಾಗುತ್ತದೆ. ಹೆಚ್ಚುವರಿ ಬಸ್‍ಗಳಿಗೆ ಸ್ಥಳಾವಕಾಶ ಮಾಡುವ ಜೊತೆಗೆ ಪ್ರಯಾಣಿಕರಿಗೂ ಹೆಚ್ಚಿನ ಸೌಕರ್ಯ ಒದಗಿಸಿದಂತಾಗುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here