ಪಾಲಿಕೆ ಕಾರ್ಯಾಚರಣೆ: 46 ಹಂದಿ ವಶಕ್ಕೆ

ತುಮಕೂರು
     ತುಮಕೂರು ಮಹಾನಗರ ಪಾಲಿಕೆ ವತಿಯಿಂದ ತುಮಕೂರು ನಗರದ ಕೆಲವು ಪ್ರದೇಶಗಳಲ್ಲಿ ದಿಢೀರನೇ ಕಾರ್ಯಾಚರಣೆ ನಡೆಸಿ, 46 ಬೀಡಾಡಿ ಹಂದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆ ಪಾಲಿಕೆ ನೇತೃತ್ವದಲ್ಲಿ ತಮಿಳುನಾಡಿನ 15-20 ಜನರ ನುರಿತ ತಂಡವೊಂದು ಕಾರ್ಯಾಚರಣೆ ನಡೆಸಿ ಬೀಡಾಡಿ ಹಂದಿಗಳನ್ನು ಹಿಡಿದು, ಒಯ್ದಿತು.
 
     ಈ ಸಂರ್ದಭದಲ್ಲಿ ಹಂದಿ ಸಾಕಾಣಿಕೆದಾರರಿಂದ ತೀವ್ರ ಪ್ರತಿರೋಧ ಬಂದಿತಾದರೂ, ಪೊಲೀಸರ ಬೆಂಗಾವಲು ಇದ್ದುದರಿಂದ ಹಂದಿಗಳನ್ನು ಹಿಡಿಯುವ ಕಾರ್ಯ ಅಡೆತಡೆ ಇಲ್ಲದೆ ನಡೆಯಿತು. ಸಾರ್ವಜನಿಕರೂ ಪಾಲಿಕೆ ಕಾರ್ಯಾಚರಣೆ ಪರವಾಗಿ ನಿಂತರು.ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್, ಆರೋಗ್ಯ ನಿರೀಕ್ಷಕರುಗಳಾದ ನಟೇಶ್, ಷಡಕ್ಷರಿ, ಕೃತಿಕ್, ಮನೋಹರ್ ಮತ್ತು ಇತರ ಸಿಬ್ಬಂದಿ ವರ್ಗದವರು ಈ ಸಂದ`ರ್Àದಲ್ಲಿ ಹಾಜರಿದ್ದರು. 
 
     ನಗರದ 31, 32, 35 ನೇ ವಾರ್ಡ್‍ಗಳ ವ್ಯಾಪ್ತಿಗೆ ಒಳಪಡುವ ಗೋಕುಲ ಬಡಾವಣೆ, ಖಾದರ್ ನಗರ, ಮಂಜುನಾಥ ನಗರ ಹಾಗೂ ಸುತ್ತಮುತ್ತ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಂದಿ ಸಾಕಾಣಿಕೆದಾರರ ಸುಮಾರು 20 ಜನರ ತಂಡ ಆಗಮಿಸಿ, ಹಂದಿಗಳನ್ನು ಹಿಡಿಯುವುದಕ್ಕೆ ಅಡ್ಡಿಪಡಿಸಿತು. ಆಗ ಪಾಲಿಕೆ ಅಧಿಕಾರಿಗಳು ಮತ್ತು ಹಂದಿ ಸಾಕಾಣಿಕೆದಾರರ ಮಧ್ಯ ತೀವ್ರವಾದ ಮಾತಿನ ಚಕಮಕಿ ನಡೆಯಿತು. ಸ್ಥಳೀಯ ನಾಗರಿಕರು ಹಂದಿ ಹಾವಳಿ ಬಗ್ಗೆ ಆಕ್ಷೇಪಿಸುತ್ತ, ಪಾಲಿಕೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಜೊತೆಯಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ, ವಾತಾವರಣವನ್ನು ತಿಳಿಗೊಳಿಸಿದರು. ಆಗ ಮತ್ತೆ ಕಾರ್ಯಾಚರಣೆ ಮುಂದುವರೆಯಿತು. ನಗರದ 26 ಮತ್ತು 27 ನೇ ವಾರ್ಡ್‍ಗಳ ವ್ಯಾಪ್ತಿಯ ಎಸ್.ಐ.ಟಿ. ಬಡಾವಣೆಯ ಬ್ಯಾಕ್‍ಗೇಟ್ ಸುತ್ತಮುತ್ತ ಹಂದಿಗಳನ್ನು ಹಿಡಿದು ಒಯ್ಯಲಾಯಿತು. 
ಪಾಲಿಕೆಗೆ ಹೊರೆಯಿಲ್ಲ
     “ಹಂದಿಗಳನ್ನು ಕೇವಲ ಹಿಡಿಯಲು ಯಾರೂ ಸಹ ಮುಂದೆ ಬರುವುದಿಲ್ಲ  ಒಂದು ವೇಳೆ ಬಂದರೂ ಒಂದು ಹಂದಿ ಹಿಡಿಯಲು ಅವರು ಕೇಳುವ ಮೊತ್ತ ತುಂಬ ದುಬಾರಿಯಾಗಿರುತ್ತದೆ. ಅದನ್ನು ಭರಿಸುವುದು ಸುಲಭ ಸಾಧ್ಯವಲ್ಲ. ಪಾಲಿಕೆಗೆ ಆರ್ಥಿಕ ಹೊರೆ ಬೀಳುತ್ತದೆ. ಅದರ ಬದಲಾಗಿ ಹಂದಿಯನ್ನು ಹಿಡಿಯುವವರೇ ಅದನ್ನು ಒಯ್ಯುವುದಾಗಿ ಹೇಳುವ ತಂಡವನ್ನೇ ಕರೆಸಬೇಕಾಗುತ್ತದೆ . ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಸಾಕಷ್ಟು ಅನುಭವ ಇದ್ದರೆ ಮಾತ್ರ ಹಂದಿಗಳನ್ನು ಹಿಡಿಯಲು ಸಾಧ್ಯ. ಇಂತಹ ತಂಡ ಬಂದರೆ, ಅವರು ಪಾಲಿಕೆಯಿಂದ ಹಣವನ್ನು ಅಪೇಕ್ಷಿಸುವುದಿಲ್ಲ ಬದಲಾಗಿ ಹಂದಿ ಹಿಡಿಯಲು ಸೂಕ್ತ ರಕ್ಷಣೆ ಹಾಗೂ ಹಿಡಿದ ಹಂದಿಗಳನ್ನು ತಾವೇ ಒಯ್ಯಲು ಅವಕಾಶ ಇರಬೇಕೆಂದು ಮಾತ್ರ ಕೇಳುತ್ತಾರೆ. ಹೀಗಾಗಿ ಇಂತಹ ತಂಡವನ್ನು ಕರೆಸಿ, ಪೊಲೀಸ್ ಬೆಂಗಾವಲಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ತಿಳಿಸಿದರು.
ಡಿ.ಸಿ. ಆದೇಶ
     “ನಗರದಲ್ಲಿ ಹಂದಿ ಹಾವಳಿ ನಿಯಂತ್ರಿಸುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಮಾಡಿದ್ದಾರೆ. ಜೊತೆಗೆ ಅಧಿಕಾರಿಗಳ ಪ್ರತಿಯೊಂದು ಸಭೆಯಲ್ಲೂ ಈ ಬಗ್ಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿಚಾರಿಸುತ್ತಿರುತ್ತಾರೆ. ಜನರು ಮತ್ತು ಜನಪ್ರತಿನಿಧಿಗಳ ಆಗ್ರಹ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗುತ್ತಿದೆ” ಎಂದು ಅವರು ಹೇಳಿದರು. 
ರಾತ್ರಿ ವೇಳೆ ಅವಕಾಶ
    “ನಗರದ ಹಂದಿ ಸಾಕಾಣಿಕೆದಾರರಿಗೆ ಈಗಾಗಲೇ ಪಶುಸಂಗೋಪನಾ ಇಲಾಖೆ ವತಿಯಿಂದ ವೈಜ್ಞಾನಿಕವಾಗಿ ಹಂದಿ ಸಾಕಾಣಿಕೆ ಮಾಡುವ ಬಗ್ಗೆ ತರಬೇತಿ ಕೊಡಿಸಲಾಗಿದೆ. ಹಂದಿಗಳನ್ನು ನಿರ್ದಿಷ್ಟವಾದ ಪ್ರದೇಶಗಳಲ್ಲಿ/ಗೂಡುಗಳಲ್ಲೇ ಸಾಕಾಣಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಹಂದಿಗಳನ್ನು ಬೀದಿಗೆ ಬಿಡಬಾರದು ಎಂದು ಸಹ ಸ್ಪಷ್ಟ ಅರಿವು ಮೂಡಿಸಲಾಗಿದೆ. ಆದರೂ ಸಹ ಹಂದಿಗಳನ್ನು ಅವರು ಬೀದಿಗೆ ಬಿಡುತ್ತಿದ್ದು, ಅದರಿಂದ ಸಮಸ್ಯೆಗಳು ಎದುರಾಗುತ್ತಿವೆ.
     ಒಂದು ವೇಳೆ ಅನಿವಾರ್ಯವಾಗಿದ್ದರೆ, ಹಂದಿಗಳನ್ನು ರಾತ್ರಿ ವೇಳೆ ಹೊರಕ್ಕೆ ಬಿಟ್ಟು ಮುಂಜಾನೆ 6 ಗಂಟೆ ಹೊತ್ತಿಗೆ ವಾಪಸ್ ಗೂಡುಗಳಿಗೆ ಒಯ್ಯುವಂತೆಯೂ ಒಂದು ಅವಕಾಶವನ್ನು ನಾವು ನೀಡಿದ್ದೇವೆ. ಆದರೂ ಸಹ ಅವರುಗಳು ನಮ್ಮ ಸಲಹೆಯನ್ನು ನಿರ್ಲಕ್ಷಿಸಿ, ದಿನಪೂರ್ತಿ ಹಂದಿಗಳನ್ನು ಬೀದಿಗೆ ಬಿಡುತ್ತಿದ್ದು, ಸಮಸ್ಯೆಗಳಿಗೆ ಕಾರಣವಾಗುತ್ತಿದೆ” ಎಂದು ಡಾ. ನಾಗೇಶ್ ಕುಮಾರ್ ತಿಳಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap