ಸಮರ್ಪಕ ನಿರ್ವಹಣೆಯಿಲ್ಲದೆ ಅದ್ವಾನವಾದ ವಿವಿ ಪಾರ್ಕ್..!

ತುಮಕೂರು

ವಿಶೇಷ ವರದಿ:ರಾಕೇಶ್.ವಿ

       ತುಮಕೂರು ನಗರದ ವಿಶ್ವವಿದ್ಯಾಲಯದಲ್ಲಿ ಪಾರ್ಕ್ ಅಭಿವೃದ್ಧಿ ಎಂಬ ಹೆಸರಿನಲ್ಲಿ ಮೊದಲ ಯೋಜನೆ ಪ್ರಾರಂಭಿಸಿದ ಸ್ಮಾರ್ಟ್ ಸಿಟಿಯು ಈ ಕಾಮಗಾರಿಗೆ ಬರೊಬ್ಬರಿ 58,86,417 ರೂಗಳನ್ನು ಖರ್ಚು ಮಾಡಲಾಗಿದೆ. ಆದರೆ ಯಾವ ಪುರುಷಾರ್ಥಕ್ಕೆ ಅಷ್ಟು ಹಣ ಖರ್ಚಾಯಿತು ಎಂಬುದು ತಿಳಿಯದಾಗಿದೆ.
      ಈ ಹಿಂದೆಯಿದ್ದಂತಹ ಖಾಲಿ ಸ್ಥಳದಲ್ಲಿ ಹೆಲಿಪ್ಯಾಡ್ ಇತ್ತು. ಜೊತೆಗೆ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಚಟುವಟಿಕೆಗಳನ್ನು ಅಲ್ಲಿ ನಡೆಸುತ್ತಿದ್ದರು.  ಆದರೆ ಅದನ್ನು ಸ್ಮಾರ್ಟ್ ಸಿಟಿ ಯಡಿಯಲ್ಲಿ ವಿವಿಯ ಮೈದಾನವನ್ನು ವಾಯುವಿಹಾರಕ್ಕೆ ಅನುಕೂಲವಾಗಲೆಂಬ ಉದ್ದೇಶಕ್ಕೆ ಅಭಿವೃದ್ಧಿ ಮಾಡುವುದಾಗಿ ಹೇಳಿ ಅದಕ್ಕೆ 61 ಲಕ್ಷ ವೆಚ್ಚ ಮಾಡಿ ಕಾಮಗಾರಿಯನ್ನು ಬೆಂಗಳೂರು ಮೂಲದ ಎ1 ಕನ್‍ಸ್ಟ್ರಕ್ಷನ್‍ರವರಿಗೆ ನೀಡಲಾಯಿತು. ಅವರು ನಿಗದಿತ ಸಮಯದೊಳಗೆ ಕಾಮಗಾರಿ ಮುಗಿssಸಿದರು. ಆದರೆ ಅದರ ಗುಣಮಟ್ಟ ಹೇಗಿದೆ ಎಂಬುದು ಯಾರೂ ತಿಳಿಯಲಿಲ್ಲ.
       ಸಾಮಾನ್ಯವಾಗಿ ಯಾವುದೇ ಕಾಮಗಾರಿ ಮಾಡಿದ ನಂತರ ಕನಿಷ್ಠ ಪಕ್ಷ 5 ವರ್ಷಗಳಾದರೂ ಬಾಳಿಕೆ ಬರುತ್ತದೆ. ಆದರೆ ಇಲ್ಲಿ ಇನ್ನೂ ನಿರ್ವಹಣೆಗೆ ನೀಡಲಾದ ಗಡುವು ಪೂರ್ಣವಾಗುವುದರೊಳಗೆ ಪಾಳುಬಿದ್ದ ಹಾಳು ಕೊಂಪೆಯಂತಾಗಿದೆ. 61 ಲಕ್ಷ ರೂ.  ಖರ್ಚು ಮಾಡಲಾಗಿದೆ ಎಂದಾಗ ಅದು ಸುಮಾರು ವರ್ಷಗಳ ಕಾಲ ಬಾಳಿಕೆ ಬರುವುದು ಬೇಡವೇ..? ಆದರೆ ಇಲ್ಲಿ ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಕಗ್ಗತ್ತಲು, ಅದರಲ್ಲಿ ವಿಷಜಂತುಗಳ ಆಗಮನ ಹೀಗೆ ವಿವಿಧ ಸಮಸ್ಯೆಗಳಿಂದ ವಾಯುವಿಹಾರಕ್ಕೆ ಬರುವವರು ಸ್ಮಾರ್ಟ್ ಸಿಟಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. 
      ವಿವಿಯಲ್ಲಿ ಮಾಡಲಾದ ಕಾಮಗಾರಿಯನ್ನು ಗಮನಿಸುವುದಾದರೆ ವಾಯುವಿಹಾರಕ್ಕೆಂದು ವಾಕಿಂಗ್ ಪಾತ್ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಎರಡು ಕಡೆಗಳಲ್ಲಿ ಕುಳಿತುಕೊಳ್ಳಲು ಆಸನದ ಸೌಲಭ್ಯ ಮಾಡಲಾಗಿದೆ. ಒಂದು ಕಡೆಯಲ್ಲಿ ಚೆಸ್ ಬೋರ್ಡ್ ಮಾದರಿಯಲ್ಲಿ ಕುಟಿರದ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ಭಾಗದಲ್ಲಿ ಯುವ ಪೀಳಿಗೆಯನ್ನು ಸೆಳೆಯಲು ಸೆಲ್ಫಿವಾಲ್ ಅನ್ನು ನಿರ್ಮಾಣ ಮಾಡಲಾಗಿದೆ. ಇನ್ನೊಂದು ಕಡೆಯಲ್ಲಿ ಗೋಡೆಯೊಂದನ್ನು ನಿರ್ಮಾಣ ಮಾಡಿ, ಅದರಲ್ಲಿ ಕರ್ನಾಟಕದ ಸಂಸ್ಕøತಿಯನ್ನು ಬಿಂಬಿಸುವ ಚಿತ್ರಕಲೆಯನ್ನು ರೂಪಿಸಿದ್ದಾರೆ. ಅಲ್ಲದೆ ವಾಕಿಂಗ್ ಪಾತ್ ಸುತ್ತಲೂ ಬಣ್ಣಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಇಂದಿನ ಸ್ಥಿತಿಯನ್ನು ಗಮನಿಸಿದರೆ ಅದೆಲ್ಲಾ ವ್ಯರ್ಥವಾಗಿ ಬಿದ್ದಿದೆ.
ಕಗ್ಗತ್ತಲಲ್ಲಿ ವಾಯು ವಿಹಾರ
      ಸ್ಮಾರ್ಟ್‍ಸಿಟಿ ಯೋಜನೆಯಡಿಬ ವಾಯುವಿಹಾರಕ್ಕಾಗಿ ವಾಕಿಂಗ್ ಪಾತ್ ನಿರ್ಮಾಣ ಮಾಡಿದ್ದು, ಅದರ ಸುತ್ತಲೂ ಬೆಳಕಿನ ಸೌಲಭ್ಯ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಇಲ್ಲಿ ಸೂಕ್ತ ವಿದ್ಯುತ್ ದೀಪಗಳ ಸೌಲಭ್ಯವೇ ಇಲ್ಲದೆ ಮುಂಜಾನೆ ಮತ್ತು ಸಂಜೆ ಕಗ್ಗತ್ತಲ್ಲಿ ವಾಯುವಿಹಾರ ಮಾಡುವಂತಾಗಿದೆ. ಪ್ರತಿನಿತ್ಯ ವಾಯುವಿಹಾರಕ್ಕೆ ನೂರಾರು ಜನರು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರೇ ಇರುತ್ತಾರೆ. ಕಗ್ಗತ್ತಲಲ್ಲಿ ವಾಯುವಿಹಾರ ಮಾಡುವುದು ಆತಂಕಕ್ಕೆ ಎಡೆ ಮಾಡುತ್ತಿದೆ.
ಹಾಳಾದ ಕಲ್ಲುಬೆಂಚುಗಳು
      `ವಾಯುವಿಹಾರ ಮಾಡಲು ಬರುವವರಿಗೆ ವಿಶ್ರಾಂತಿ ಪಡೆಯಲು ಎರಡು ಕಡೆಗಳಲ್ಲಿ  ಕಲ್ಲುಬೆಂಚುಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಗ್ರಾನೈಟ್ ಹಾಸುಗಳನ್ನು ಅಳವಡಿಸಲಾಗಿತ್ತು. ಆದರೆ ಈಗ ಈ ಕಲ್ಲು ಬೆಂಚುಗಳ ಒರಗಿಕೊಳ್ಳುವ ಜಾಗದಲ್ಲಿದ್ದ ಗ್ರಾನೈಟ್ ಕಲ್ಲುಗಳೇ ನಾಪತ್ತೆಯಾಗಿದ್ದು, ಹಿಂಭಾಗದ ಗಾರೆ ಕಾಣುತ್ತಿದೆ. ಕಿತ್ತುಬಂದ ಗ್ರಾನೈಟ್ ನೆಲಹಾಸುಗಳು ಬೆಂಚಿನ ಹಿಂಬದಿಯಲ್ಲಿ ಮುರಿದು ಬಿದ್ದಿವೆ.
ಮುರಿದು ಬಿದ್ದ ಅಲಂಕಾರಿಕ ದೀಪಗಳು
      ವಾಕಿಂಗ್‍ಪಾತ್‍ನ ಉದ್ದಕ್ಕೂ 40 ಸಣ್ಣ ಸಣ್ಣ ಅಲಂಕಾರಿಕ ವಿದ್ಯುತ್ ದೀಪಗಳಿದ್ದು, ಅವೆಲ್ಲವೂ ಈಗ ಹಾಳಾಗಿವೆ. ಕೆಲವು ಮುರಿದು ಬಿದ್ದಿವೆ. ಕಲ್ಲಿನ ಕಮಾನುಗಳಲ್ಲಿ ಅಳವಡಿಸಿರುವ ವಿದ್ಯುತ್‍ದೀಪಗಳೂ ಕಾಣೆಯಾಗಿದೆ. ಎಲ್ಲಾ ಕಮಾನುಗಳಿಗೆ ಒಂದರಂತೆ ದೀಪಗಳನ್ನು ಅಳವಡಿಸಲಾಗಿದ್ದು, ಇದೀಗ ಕೇವಲ ಮೂರೂ ದೀಪಗಳು ಮಾತ್ರ ಉಳಿದಿದ್ದು, ಅವು ಕೂಡ ಬೆಳಗುತ್ತಿಲ್ಲ. ಈ ವಿದ್ಯುತ್‍ದೀಪಗಳ ನಿಯಂತ್ರಣಕ್ಕೆ ಅಳವಡಿಸಿರುವ ವಿದ್ಯುತ್ ನಿಯಂತ್ರಣದ ಬಾಕ್ಸ್ ಕೂಡ ಮುರಿದು ಹಾಳಾಗಿದೆ. 
ಒಂದೇ ವರ್ಷದಲ್ಲಿ ದುಸ್ಥಿತಿಗೆ ಬಂದ ಪಾರ್ಕ್
     ಸ್ಮಾರ್ಟ್‍ಸಿಟಿ ಕಾಮಗಾರಿ ಮುಗಿದು ಒಂದು ವರ್ಷವಾಗಿದೆ. ಅಷ್ಟರೊಳಗೇ ಇಲ್ಲಿ ಈ ರೀತಿಯ ಅವ್ಯವಸ್ಥೆಗಳು ಕಾಣಿಸುತ್ತಿವೆ. ಹಾಗಾಗಿ ಇಲ್ಲಿ ವಾಯುವಿಹಾರಕ್ಕೆ ಬರುವ ನಾಗರಿಕರು ಸ್ಮಾರ್ಟ್‍ಸಿಟಿ ಕಾಮಗಾರಿಗಳು ಕಳಪೆಯಾಗಿ ನಡೆಯುತ್ತಿವೆ. ಈ ಬಗ್ಗೆ ಸೂಕ್ತ ಗಮನ ಹರಿಸುವವರಿಲ್ಲ. ನಿರ್ಮಾಣ ಮಾಡಿ ಬಿಟ್ಟು ಹೋದರೆ ಅದರ ನಿರ್ವಹಣೆ ಮಾಡುವುದು ಯಾರ ಜವಾಬ್ದಾರಿ. ಇಲ್ಲಿ ಏನಾದರೂ ಸಮಸ್ಯೆ ಉಂಟಾಗಿ, ಯಾರಿಗಾದರೂ ಸಮಸ್ಯೆ ಎದುರಾದರೆ ಯಾರ ಹೊಣೆ ಎಂದು ನಾಗರಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಅಸಹಾಯಕತೆ ಸ್ಥಿತಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು
      ಸ್ಮಾರ್ಟ್ ಸಿಟಿ ಕಂಪನಿಯ ಮಾಹಿತಿ ಪ್ರಕಾರ ಯಾವುದೇ ಕಾಮಗಾರಿ ಮುಗಿದ ನಂತರ ಅದರ ಸ್ಥಿತಿಗತಿಗಳನ್ನು ನೋಡಿ ಅದಕ್ಕೆ ಬಿಲ್ ಮಂಜೂರು ಮಾಡಲಾಗುತ್ತದೆ. ಆದರೆ ಟೆಂಡರ್ ಪಡೆಯುವಮುನ್ನ ಗುತ್ತಿಗೆದಾರರಿಂದ ಇಎಂಡಿ ಹಣವನ್ನು ಮುಂಗಡವಾಗಿ ಪಾವತಿಸಿಕೊಳ್ಳಲಾಗಿರುತ್ತದೆ.
 
      ನಂತರ ಎಫ್‍ಎಸ್‍ಡಿ ಹಣವನ್ನು ನಮ್ಮಲ್ಲಿಯೇ ಇಟ್ಟುಕೊಂಡಿರುತ್ತಾರೆ. ಆದರೆ ಇದೀಗ ಗುತ್ತಿಗೆದಾರನಿಗೆ ನೋಟೀಸ್ ಕೊಡಲಾಗಿದ್ದರೂ ಅದನ್ನು ಲೆಕ್ಕಿಸದೆ ತನ್ನ ಕೆಲಸ ತಾನು ಮುಂದುವರೆಸಿಕೊಂಡು ಹೋಗುತ್ತಿರುವಾಗ ಒಬ್ಬ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳಲಾಗದಷ್ಟು ಅಸಹಾಯಕತೆ ಪರಿಸ್ಥಿತಿಯನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು  ಎದುರಿಸುತ್ತಿದ್ದಾರೆ ಎಂಬುದು ತಿಳಿಯಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap