ತುಂಡಾದ ಚರಂಡಿ ಸ್ಲಾಬ್ : ದುರಸ್ತಿಗೆ ಒತ್ತಾಯ!

ಹುಳಿಯಾರು :

     ಹುಳಿಯಾರು-ಅಣೆಕಟ್ಟೆ ರಸ್ತೆ ಮಾಡುವಾಗ ನಂದಿಹಳ್ಳಿ ಗ್ರಾಮದಲ್ಲಿ ಚರಂಡಿ ಮೇಲೆ ಹಾಕಿದ ಸ್ಲಾಬ್ ತುಂಡಾಗಿ ಓಡಾಟಕ್ಕೆ ತೊಂದರೆಯಾಗಿದ್ದು, ತಕ್ಷಣ ದುರಸ್ತಿ ಮಾಡುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

19 ಕೋಟಿ ರೂ. ವೆಚ್ಚದಲ್ಲಿ ಹುಳಿಯಾರು-ಅಣೆಕಟ್ಟೆ ರಸ್ತೆ ಕಾಮಗಾರಿಯು ಇತ್ತೀಚಿಗಷ್ಟೆ ಮುಗಿದಿದೆ. ಆದರೆ ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು, ಈಗಾಗಲೇ ಅನೇಕ ಕಡೆ ಡಾಂಬಾರ್ ಕಿತ್ತು ಮರು ಡಾಂಬರ್ ಹಾಕಲಾಗಿದೆ. ಅಲ್ಲದೆ ಚರಂಡಿ ಮೇಲೆ ಹಾಕಿರುವ ಸ್ಲಾಬ್ ಸಹ ಕಳಪೆಯಾಗಿದ್ದು, ನಂದಿಹಳ್ಳಿ ಊರೊಳಗೆ ಹಾಕಿರುವ ಎಲ್ಲಾ ಕಡೆ ತುಂಡಾಗಿದೆ ಎಂದು ಆರೋಪಿಸಿದ್ದಾರೆ.
ಚರಂಡಿ ನೀರೆಲ್ಲ ರಸ್ತೆಗೆ : ನಂದಿಹಳ್ಳಿ ಗ್ರಾಮದ ಅನೇಕ ಕಡೆ ಚರಂಡಿ ಸ್ಲಾಬ್ ತುಂಡಾಗಿ ಅದರಲ್ಲಿ ಕಲ್ಲು-ಮಣ್ಣು ಬಿದ್ದು ಮುಚ್ಚಿಕೊಂಡಿದೆ. ಪರಿಣಾಮ ಚರಂಡಿ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ನಿಲ್ಲುತ್ತಿದೆ. ಮಳೆ ಬಂದರಂತೂ ಚರಂಡಿ ನೀರೆಲ್ಲ ರಸ್ತೆಗೆ ನುಗ್ಗಿ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಎಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರೂ ದುರಸ್ತಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮುಳ್ಳು ಹಾಕಿ ತೇಪೆ :

     ಗ್ರಾಮದ ನಂದಿಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಸ್ಲಾಬ್ ತುಂಡಾಗಿರುವುದರಿಂದ ದೇವಸ್ಥಾನಕ್ಕೆ ಬರುವ ಮಕ್ಕಳು, ವೃದ್ಧ ಭಕ್ತರು ಬೀಳುವ ಆತಂಕ ಇದೆ. ಅಲ್ಲದೆ ಹಾಲಿನ ಡೇರಿ ಮುಂಭಾಗವೂ ಸಹ ತುಂಡಾಗಿ ರಾತ್ರಿ ಹಾಲು ಹಾಕಲು ಬಂದ ಹೈನುಗಾರರು ಬಿದ್ದ ಪರಿಣಾಮ ತುಂಡಾಗಿರುವ ಕಡೆ ಮುಳ್ಳು ಹಾಕಿ ಮುಚ್ಚಲಾಗಿದೆ.

ವಾಹನಗಳು ಓಡಾಡಿ ಮುರಿದಿವೆ :

ಹಾಲಿನ ಡೇರಿಗೆ ಬರುವ ಕ್ಯಾನ್ ತುಂಬಿದ ವಾಹನಗಳು ಸೇರಿದಂತೆ ಚರಂಡಿ ಸ್ಲಾಬ್ ಮೇಲೆ ಭಾರಿ ವಾಹನಗಳು ಓಡಾಡಿದ್ದರಿಂದ ಸ್ಲಾಬ್ ಮುರಿದಿವೆ. ಕಾಮಗಾರಿಯು ಇನ್ನೂ ಪ್ರಗತಿಯಲ್ಲಿರುವುದರಿಂದ ಗುತ್ತಿಗೆದಾರರಿಗೆ ಮತ್ತೆ ಸ್ಲಾಬ್ ಹಾಕಲು ಹೇಳುತ್ತೇನೆ. ಆದರೆ ಸ್ಲಾಬ್ ಮೇಲೆ ಭಾರಿ ವಾಹನಗಳು ಓಡಾಡದಂತೆ ಗ್ರಾಮಸ್ಥರು ಇನ್ನು ಮುಂದೆ ತಡೆಯಬೇಕಿದೆ.

-ಚಂದ್ರಶೇಖರ್, ಎಇಇ, ಪಿಡ್ಲ್ಯೂಡಿ, ಚಿಕ್ಕನಾಯಕನಹಳ್ಳಿ

Recent Articles

spot_img

Related Stories

Share via
Copy link