ತುಮಕೂರು
ಕಲ್ಬುಗಿ ಜಿಲ್ಲೆಯ ಮಾದಿಹಾಳ್ ತಾಂಡದ ಸಂತ ಶ್ರೀ ಸೇವಾಲಾಲ್ ಮಂದಿರವನ್ನು ಧ್ವಂಸ ಮಾಡಿರುವ ಕಲ್ಬುರ್ಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಕೃತ್ಯವನ್ನು ಕರ್ನಾಟಕ ಬಂಜಾರ ಜಾಗೃತಿ ದಳ ತುಮಕೂರು ಇವರು ಖಂಡಿಸಿದ್ದಾರೆ.
ಸಂತ ಸೇವಾಲಾಲ್ ಬಂಜಾರ ಸಮುದಾಯದ ಆರಾಧ್ಯ ದೈವ. ಸಾಮಾಜಿಕ ಜಾಗೃತಿಯ ಹರಿಕಾರ. ಬ್ರಿಟೀಷರು ಕ್ರಿಮಿನಲ್ ಟ್ರೈಬ್ ಹೆಸರಿನಲ್ಲಿ ಬಂಜಾರರನ್ನು ಹತ್ತಿಕ್ಕುತ್ತಿದ್ದಾಗ ಬ್ರಿಟೀಷರ ವಿರುದ್ಧ ಹೋರಾಡಿ ಸಮುದಾಯವನ್ನು ಸಂಘಟಿಸಿದ ವೀರ. ಪಶುಪಾಲನೆ, ಕೃಷಿ, ವ್ಯಾಪಾರ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡಿದ್ದ ಮಹಾನ್ ಜ್ಞಾನಿ ಸೇವಾಲಾಲ್. ಇವರ ಮಂದಿರವನ್ನು ಧ್ವಂಸ ಮಾಡುವ ಮೂಲಕ ಸರ್ಕಾರ ಬಂಜಾರರ ಭಾವನೆಗಳನ್ನು ಕೆರಳಿಸಿದೆ.
ಶನಿವಾರ ಇಂತಹ ಹೀನ ಕೃತ್ಯವನ್ನು ಖಂಡಿಸಿ, ಕರ್ನಾಟಕ ಬಂಜಾರ ಜಾಗೃತಿ ದಳ ಮತ್ತು ಶ್ರೀ ಸೇವಾಲಾಲ್ ಫೌಂಡೇಷನ್ ಜೊತೆಗೆ ಸಮಸ್ತ ತುಮಕೂರು ಜಿಲ್ಲೆಯ ಬಂಜಾರ ಸಮುದಾಯದ ಸಂಘಟನೆಗಳು, ಸಮಾಜದ ಗಣ್ಯರು, ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಮ್ಮ ವಿವಿಧ ಬೇಡಿಕೆಗಳಾದ ಧ್ವಂಸ ಮಾಡಿರುವ ಸಂತ ಶ್ರೀ ಸೇವಾಲಾಲ್ ಮಂದಿರವನ್ನು ಅದೇ ಸ್ಥಳದಲ್ಲಿ ಮರು ಸ್ಥಾಪಿಸಬೇಕು. ಕಲ್ಬುರ್ಗಿ ಜಿಲ್ಲೆಯ ಮಾದಿಹಾಳ್ ತಾಂಡದಲ್ಲಿ ಶ್ರೀ ಸೇವಾಲಾಲ್ ದೇವಸ್ಥಾನ ಧ್ವಂಸ ಮಾಡಲು ಆದೇಶ ನೀಡಿದವರ ವಿರುದ್ಧ ಪೋಲೀಸರು ಸ್ವಯಂ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು. ಲಂಬಾಣಿ ಸಮುದಾಯದ ಕೃಷಿ ಭೂಮಿ ಕಿತ್ತುಕೊಂಡ ಜಾಗದಲ್ಲಿ ಸ್ಥಾಪಿಸಲಾದ ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಸಂತ ಶ್ರೀ ಸೇವಾಲಾಲ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು.
ವಿಮಾನ ನಿಲ್ದಾಣ ನಿರ್ಮಿಸಲು ಬಂಜಾರರು ಜೀವನೋಪಾಯದ ನೂರಾರು ಎಕರೆ ಕೃಷಿ ಭೂಮಿ ಕಳೆದುಕೊಂಡಿದ್ದಾರೆ. ಹಾಗಾಗಿ ಭೂಮಿ ಕಳೆದುಕೊಂಡ ಲಂಬಾಣಿಗರಿಗೆ ಸರ್ಕಾರಿ ಉದ್ಯೋಗ ದೊರಕಿಸಿ ಕೊಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ತಿಪ್ಪಸರನಾಯಕ್, ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ, ವಿಟ್ಲಾ ನಾಯಕ್, ರಾಮೇಶ್‍ಬಾಬು ರಾಥೋಡ್ ಹಾಗೂ ವಿದ್ಯಾರ್ಥಿ ಸಂಘಟನೆಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
