ಸ್ಮಾರ್ಟ್‍ಸಿಟಿ ಕಾಮಗಾರಿ ಅವಾಂತರ: ತಪ್ಪಿದ ಅವಘಡ..!  

ತುಮಕೂರು

ವಿಶೇಷ ವರದಿ :ಆರ್.ಎಸ್.ಅಯ್ಯರ್

       ಸ್ಮಾರ್ಟ್‍ಸಿಟಿ ಕಾಮಗಾರಿಗೆಂದು ರಸ್ತೆ ಅಗೆವ ಅವಸರÀದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡುವ ಪೈಪ್‍ಲೈನ್‍ಗೆ ಧಕ್ಕೆ ಆಯಿತು. ಇದನ್ನು ತಿಳಿದ ಮಹಾನಗರ ಪಾಲಿಕೆಯವರು ದುರಸ್ತಿಗೆ ತೊಡಗಿದಾಗ ಅಲ್ಲೇ ಭೂಮಿಯೊಳಗೆ ಅಳವಡಿಸಿದ್ದ ಭೂಗತ (ಯು.ಜಿ.) ವಿದ್ಯುತ್ ಕೇಬಲ್ ತುಂಡಾಗಿ, ಸಣ್ಣ ಸ್ಫೋಟ ಸಂಭವಿಸಿರುವ ಹಾಗೂ ಅದೃಷ್ಟವಶಾತ್ ಸಂಭವನೀಯ ಅವಘಡ ತಪ್ಪಿರುವ ಎರಡು ಪ್ರಸಂಗಗಳು ನಡೆದಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
       ತುಮಕೂರು ನಗರದ ಬಟವಾಡಿವೃತ್ತದಲ್ಲಿ ಪೆಟ್ರೋಲ್ ಬಂಕ್ ಸಮೀಪ ಇಂತಹುದೊಂದು ಘಟನೆ ಡಿ.3 ರಂದು ಮಧ್ಯಾಹ್ನ ನಡೆದಿದೆ. ಸ್ಮಾರ್ಟ್‍ಸಿಟಿ ಕಂಪನಿ ವತಿಯಿಂದ ಇಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಕಾಮಗಾರಿಗಾಗಿ ರಸ್ತೆ ಅಗೆಯುವಾಗ ಮಹಾನಗರ ಪಾಲಿಕೆಯ ನೀರು ಸರಬರಾಜು ಪೈಪ್‍ಲೈನ್‍ಗೆ ಧಕ್ಕೆ ಆಗಿದೆ. ಅದನ್ನು ಯಾರೊಬ್ಬರ ಗಮನಕ್ಕೂ ತರದೆ, ಮಣ್ಣಿನಿಂದ ಹಾಗೆಯೇ ಮುಚ್ಚಿ ಹೋಗಿದ್ದಾರೆ.
 
       ಆ ಭಾಗದಲ್ಲಿ ನೀರು ಪೂರೈಕೆ ಅಸ್ತವ್ಯಸ್ತವಾಗಿದೆ. ನಂತರದಲ್ಲಿ ಪಾಲಿಕೆ ಸಿಬ್ಬಂದಿಯವರು ಈ ಸ್ಥಳವನ್ನು ಪತ್ತೆ ಮಾಡಿ, ಖಾಸಗಿ ಜೆ.ಸಿ.ಬಿ. ಯಂತ್ರ ಬಳಸಿಕೊಂಡು ಸದರಿ ಸ್ಥಳದಲ್ಲಿ ಮಣ್ಣನ್ನು ಅಗೆಯಲು ಮುಂದಾಗಿದ್ದಾರೆ. ಅಲ್ಲೇ ಕೆಳಭಾಗದಲ್ಲಿ ಹಾದುಹೋಗಿರುವ ಬೆಸ್ಕಾಂನ ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲ್‍ಗೆ ಜೆ.ಸಿ.ಬಿ. ಯಂತ್ರದ ಭಾಗ ತಾಕಿ, ಅದು ತುಂಡಾಗಿದೆ. ಜೊತೆಗೆ ಸಣ್ಣ ಸ್ಫೋಟವೂ ಆಗಿದೆ. ಪಾಲಿಕೆ ಸಿಬ್ಬಂದಿ ಗಾಬರಿಗೊಂಡಿದ್ದಾರೆ. ಅದೃಷ್ಟವಶಾತ್ ಅನಾಹುತ ತಪ್ಪಿದೆ.
        ಇಂತಹುದೇ ಘಟನೆ ಕಳೆದ 15 ದಿನಗಳ ಹಿಂದೆ ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ತುಮಕೂರು ನಗರದ ರಾಧಾಕೃಷ್ಣನ್ ರಸ್ತೆಯ ಕೊನೆಯಂಚಿನಲ್ಲಿ ಹಳೆಯ ಉಪ್ಪಾರಹಳ್ಳಿ ಗೇಟ್ ಬಳಿ ನಡೆದಿದೆ. ಇಲ್ಲೂ ಸಹ ಕಾಂಕ್ರಿಟ್ ಡೆಕ್ಟ್ ನಿರ್ಮಿಸಲು ಗುಂಡಿ ತೋಡುವಾಗ ನೀರು ಸರಬರಾಜು ಪೈಪ್‍ಗೆ ಧಕ್ಕೆ ಆಗಿತ್ತು. ಇದನ್ನು ದುರಸ್ತಿಗೊಳಿಸಲು ಪಾಲಿಕೆ ಸಿಬ್ಬಂದಿಯವರು ಜೆ.ಸಿ.ಬಿ. ಯಂತ್ರ ಬಳಸಿದಾಗ, ಇಲ್ಲೂ ಸಹ ಮೇಲ್ಕಂಡ ಮಾದರಿಯಲ್ಲೇ ಅನಾಹುತ ಸಂಭವಿಸಿದ್ದು, ಅದೃಷ್ಟವಶಾತ್ ಅಪಾಯ ಆಗಿಲ್ಲ. ಇವೆರಡು ಆತಂಕಕಾರಿ ಪ್ರಸಂಗಗಳು ಇದೀಗ ತುಮಕೂರು ಮಹಾನಗರ ಪಾಲಿಕೆಯ ಸದಸ್ಯರನ್ನು ಗರಂ ಆಗಿಸಿದೆ.
        ತುಮಕೂರು ನಗರದಲ್ಲಿ ಅಗಾಧ ಪ್ರಮಾಣದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳಿಂದ ನಾಗರಿಕರ ಮೂಲಭೂತ ಸೌಲಭ್ಯಗಳಿಗೆ ಪ್ರತಿನಿತ್ಯ ಅಡಚಣೆ ಆಗುತ್ತಿದೆಯೆಂಬುದು ತುಮಕೂರು ಮಹಾನಗರ ಪಾಲಿಕೆ ಸದಸ್ಯರನ್ನು ಈಗಾಗಲೇ ಕೆರಳಿಸಿದೆ. ಪಾಲಿಕೆ ಸಭೆಗಳಲ್ಲಿ ಹಾಗೂ ಪ್ರತ್ಯೇಕ ಸ್ಮಾರ್ಟ್‍ಸಿಟಿ ಸಭೆಗಳಲ್ಲಿ ಈ ಬಗ್ಗೆ ನಿರ್ದಾಕ್ಷಿಣ್ಯವಾಗಿ ಹಾಗೂ ಪಕ್ಷಾತೀತವಾಗಿ ಸದಸ್ಯರು ದನಿಯೆತ್ತಿದ್ದಾರೆ. ಇಷ್ಟಾಗಿಯೂ ಇದೀಗ ಇಂತಹ ಪ್ರಸಂಗಗಳು ಜರುಗಿರುವುದು ಸಹಜವಾಗಿಯೇ ಪಾಲಿಕೆ ಸದಸ್ಯರನ್ನು ಕೆರಳಿಸಿದೆ.
       ವಿವಿಧ ಇಲಾಖೆಗಳ ಜೊತೆ ಸಹಭಾಗಿತ್ವ ಹೊಂದದೆ ಹಾಗೂ ಸಮನ್ವಯ ಸಾಧಿಸದೆ, ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಿರಂಕುಶವೆಂಬಂತೆ ನಡೆಯುತ್ತಿರುವುದೇ ಇಂತಹ ಹಲವು ಫಜೀತಿಗಳಿಗೆ ಎಡೆಮಾಡುತ್ತಿದೆಯೆಂಬುದು ಪಾಲಿಕೆ ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನೀರಿನ ಜಾಲಕ್ಕೆ ಧಕ್ಕೆ
      ಸ್ಮಾರ್ಟ್‍ಸಿಟಿ ಕಾಮಗಾರಿಗಳಿಗೆಂದು ನಗರಾದ್ಯಂತ ವಿವಿಧೆಡೆ ರಸ್ತೆಗಳನ್ನು ಅಗೆಯಲಾಗುತ್ತಿದೆ. ಅದರಿಂದ ಅನೇಕ ಸ್ಥಳಗಳಲ್ಲಿ ಕುಡಿಯುವ ನೀರಿನ ಸಂಪರ್ಕಜಾಲಕ್ಕೆ ಧಕ್ಕೆ ಆಗುತ್ತಿದೆ. ಈಗ ನಗರದಲ್ಲಿ 24/7 ಯೋಜನೆ ಅನುಷ್ಠಾನಕ್ಕೆ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದೆ. ಅದಕ್ಕೂ ಈಗ ಅಡ್ಡಿ ಆಗುತ್ತಿದೆ. ನಗರದ ಕ್ಯಾತಸಂದ್ರದ ಕೆಸರುಮಡು ರಸ್ತೆಯಲ್ಲಿ ಸುಮಾರು ಒಂದೂವರೆ ತಿಂಗಳುಗಳಿಂದ ನೀರು ಪೂರೈಕೆಗೆ ಅಡಚಣೆ ಆಗಿರುವುದನ್ನು ಉದಾಹರಿಸಲಾಗುತ್ತಿದೆ. ಇದೇ ರೀತಿ ಉಪ್ಪಾರಹಳ್ಳಿ ಭಾಗದಲ್ಲಿ, ಕೆ.ಆರ್. ಬಡಾವಣೆಯ ಚಾಮುಂಡೇಶ್ವರಿ ದೇವಾಲಯದ ಭಾಗದಲ್ಲಿ ರಸ್ತೆ ಅಗೆತಕ್ಕೆ ನೀರು ಸರಬರಾಜು ಪೈಪ್‍ಗಳು ಬಲಿಯಾಗಿ, ಭಾರಿ ತಲೆನೋವು ತಂದುದನ್ನು ನಿದರ್ಶನವಾಗಿ ನೀಡಲಾಗುತ್ತಿದೆ. 
ಯು.ಜಿ.ಡಿ. ಸಮಸ್ಯೆ
       ಇದೇ ಹೊತ್ತಿಗೆ ನಗರದ ವಿವಿಧ ವಾರ್ಡ್‍ಗಳಲ್ಲಿ ಒಳಚರಂಡಿ ಯೋಜನೆಯ (ಯು.ಜಿ.ಡಿ.) ಪೈಪ್‍ಗಳಿಗೆ ಭಾರಿ ಪ್ರಮಾಣದಲ್ಲಿ ಧಕ್ಕೆ ಆಗಿದ್ದು, ಸಾರ್ವಜನಿಕರು ಫಜೀತಿ ಪಡುವಂತಾಗುತ್ತಿದೆ. ನಗರದ ಚಿಕ್ಕಪೇಟೆ, ಅಶೋಕ ರಸ್ತೆ, ಚಾಮುಂಡೇಶ್ವರಿ ದೇವಾಲಯದ ರಸ್ತೆ, ಗುಬ್ಬಿಗೇಟ್ ಮೊದಲಾದೆಡೆ ಆಗಿರುವ ಸಮಸ್ಯೆಗಳು ಅಗಣಿತವಾದವು. ಅದರಲ್ಲೂ ನಗರದ ರಿಂಗ್ ರಸ್ತೆ ಕಾಮಗಾರಿ ಕೈಗೊಂಡ ಬಳಿಕ, ಆ ಅಂಚಿನಲ್ಲಿರುವ ಎಲ್ಲ ಬಡಾವಣೆಗಳಲ್ಲೂ ಒಳಚರಂಡಿಗೆ ಸಂಬಂಧಿಸಿದಂತೆ ಒಂದಲ್ಲ ಒಂದು ಸಮಸ್ಯೆ ಸೃಷ್ಟಿಗೊಳ್ಳುತ್ತಲೇ ಇದೆ.
ಮುಚ್ಚದಿರುವ ಗುಂಡಿಗಳು
       ಮತ್ತೆ ಕೆಲವು ಬಡಾವಣೆಗಳಲ್ಲಿ ಸ್ಮಾರ್ಟ್‍ಸಿಟಿಗಾಗಿ ರಸ್ತೆ ಬದಿ ಡೆಕ್ಟ್‍ಗಳನ್ನು (ಕಾಂಕ್ರಿಟ್ ಚೇಂಬರ್) ನಿರ್ಮಿಸಲು ಗುಂಡಿ ತೋಡಲಾಗಿದ್ದು, ಕಳೆದ ಎರಡು-ಮೂರು ತಿಂಗಳುಗಳಿಂದ ಗುಂಡಿಯನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಪ್ರಾಣಹಾನಿ ಸಂಭವಿಸಿದರೆ ಯಾರು ಹೊಣೆಯೆಂಬುದು ಸಾರ್ವಜನಿಕರ ಮತ್ತು ಪಾಲಿಕೆ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.  
ಸಮನ್ವಯ ಸಾಧಿಸದ ಕಂಪನಿ
      ಸ್ಮಾರ್ಟ್‍ಸಿಟಿ ಕಂಪನಿಯು ಮೊದಲಿಗೆ ತುಮಕೂರು ಮಹಾನಗರ ಪಾಲಿಕೆ, ಬೆಸ್ಕಾಂ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ, ಬಿ.ಎಸ್.ಎನ್.ಎಲ್. ಜೊತೆ ಸಂಪರ್ಕ ಸಾಧಿಸಿ, ಸಮನ್ವಯ ಸಾಧಿಸಬೇಕು. ಈ ಇಲಾಖೆಗಳ ಸಹಕಾರ ಪಡೆದುಕೊಳ್ಳಬೇಕು. ಆದರೆ ಇಂತಹ ಸಕಾರಾತ್ಮಕ ಬೆಳವಣಿಗೆ ಆಗಿಲ್ಲವೆಂಬುದೇ ಈ ಹೊತ್ತಿನ ಅನೇಕ ಫಜೀತಿಗಳಿಗೆ ಕಾರಣ ಎನ್ನಲಾಗುತ್ತಿದೆ. 
ಯಾರಿಗೂ ಏನು ಗೊತ್ತಿಲ್ಲ!
      ಬೆಸ್ಕಾಂನ ವಿದ್ಯುತ್ ಕೇಬಲ್ ಎಷ್ಟು ಆಳದಲ್ಲಿ- ಯಾವ ರಸ್ತೆಗಳಲ್ಲಿ ಅಳವಡಿಸಲ್ಪಟ್ಟಿದೆ ಎಂಬುದು ಗ್ಯಾಸ್ (ಅಡುಗೆ ಅನಿಲ) ಕಂಪನಿಗೆ ಗೊತ್ತಿಲ್ಲ! ಗ್ಯಾಸ್ ಕಂಪನಿಯು ಎಷ್ಟು ಆಳದಲ್ಲಿ ಯಾವ ರಸ್ತೆಯಲ್ಲಿ ಗ್ಯಾಸ್ ಪೈಪ್‍ಲೈನ್ ಅಳವಡಿಸಿದೆಯೆಂಬುದು ಪಾಲಿಕೆಗೆ ಗೊತ್ತಿಲ್ಲ! ನೀರು ಪೂರೈಕೆ ಮಂಡಲಿಯು ಎಲ್ಲೆಲಿ, ಎಷ್ಟು ಆಳದಲ್ಲಿ ನೀರಿನ ಪೈಪ್ ಅಳವಡಿಸಿದೆ ಹಾಗೂ ಒಳಚರಂಡಿ ಪೈಪ್‍ಲೈನ್ ಅಳವಡಿಸಿದೆಯೆಂಬುದು ಇನ್ನೊಂದು ಇಲಾಖೆಗೆ ಗೊತ್ತಿಲ್ಲ! ಇದರ ನಡುವೆ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿಯೇ ಇಲ್ಲ! ಕೇಬಲ್‍ಗಳು, ಪೈಪ್‍ಗಳು ನಿಯಮಾವಳಿಯಂತೆ ನಿಗದಿತ ಆಳದಲ್ಲಿ ಅಳವಡಿಸಲ್ಪಟ್ಟಿವೆಯೇ ಎಂಬುದೂ ಅರ್ಥವಾಗುತ್ತಿಲ್ಲ! ಒಂದೊಂದು ಪ್ರದೇಶದಲ್ಲಿ ಒಂದೊಂದು ಆಳದಲ್ಲಿ ಅಳವಡಿಸಲ್ಪಟ್ಟಿವೆಯೆಂಬ ದೂರುಗಳೂ ಇವೆ. ಹೀಗೆ ಎಲ್ಲವೂ ಗೋಜಲು-ಗೋಜಲುಗಳಾಗಿವೆ ಎಂಬುದು ತುಮಕೂರು ನಗರದ ಪ್ರಜ್ಞಾವಂತ ನಾಗರಿಕರ ವಲಯದಲ್ಲಿ ಬಹುಚರ್ಚೆಗೊಳಗಾಗುತ್ತಿರುವ ವಿಷಯವಾಗಿದೆ.
ಕೆಂಗಣ್ಣಿಗೆ ಗುರಿಯಾಗುವ ಭೀತಿ
        ನಗರದಲ್ಲಿ ಇಷ್ಟೆಲ್ಲ ಅವಾಂತರ ಆಗುತ್ತಿದ್ದರೂ, ಈ ಬಗ್ಗೆ ಯಾವುದೇ ಇಲಾಖೆಯವರು ಸ್ಮಾರ್ಟ್‍ಸಿಟಿ ಕಂಪನಿಯವರನ್ನು ಪ್ರಶ್ನಿಸುವ ವಾತಾವರಣವೇ ಇಲ್ಲವೆಂಬ ಗಂಭೀರ ದೂರು ಸಹ ಕೇಳಿಬರುತ್ತಿದೆ. ಯಾರು ಏನು ಪ್ರಶ್ನಿಸಿದರೂ, ಕಂಪನಿಯ ಈಗಿನ ಮುಖ್ಯಸ್ಥರತ್ತ ಕಂಪನಿಯವರು ಬೊಟ್ಟು ಮಾಡುತ್ತಾರೆಂದೂ, ಆ ಮುಖ್ಯಸ್ಥರ ಕೆಂಗಣ್ಣಿಗೆ ತಾವೇಕೆ ಗುರಿ ಆಗಬೇಕೆಂಬ ಭೀತಿಯಿಂದ, ಅಸಹಾಯಕತೆಯಿಂದ ಇತರ ಇಲಾಖೆಯವರು ಸುಮ್ಮನಾಗುತ್ತಿದ್ದಾರೆಂದೂ ಹೇಳಲಾಗುತ್ತಿದೆ. ಇಂತಹುದೊಂದು ಅಸಹಜ ವಾತಾವರಣದಲ್ಲಿ ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link