ಚಳ್ಳಕೆರೆ
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಒಕ್ಕೂಟದ ಜಿಲ್ಲಾ ಹಾಗೂ ತಾಲ್ಲೂಕು ಶಾಖೆ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್ ಪರಿನಿಬ್ಬಾಣ, ಸಂವಿಧಾನ ಪುನರ್ಮನನ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶುಕ್ರವಾರ ಉದ್ಘಾಟಿಸುವರು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ರವರ ಚಿಂತನೆಗಳು ಇಡೀ ಸಮುದಾಯಕ್ಕೆ ಸೇರಿದ್ದು, ರಾಷ್ಟ್ರದ ಸಮಸ್ತ ಜನರೂ ಸಹ ಅಂಬೇಡ್ಕರ್ರವರ ವಿಚಾರಧಾರೆಗಳನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆ ಹಾಗೂ ತಾಲ್ಲೂಕಿನಾದ್ಯಂತ ಸುಮಾರು 5 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಈಗಾಗಲೇ ಮನವಿ ಮಾಡಿದ್ದು, ಅಂಬೇಡ್ಕರ್ ಪರಿನಿಬ್ಬಾಣ ಹಾಗೂ ಸಂವಿಧಾನ ಪುನರ್ಮನನ ಕಾರ್ಯಕ್ರಮದ ಮೂಲಕ ಜನರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಸಿ.ಕೆ.ಮಹೇಶ್, ರಾಜ್ಯ ಕಾರ್ಯದರ್ಶಿ ಕೆ.ಜೆ.ಕಮಾನಿ, ರಾಜ್ಯ ಮಾತಂಗ ಪರಿವಾರ ಸಮಿತಿ ಅಧ್ಯಕ್ಷ ಶಂಕರ್, ಜಿ.ಟಿ.ಗೋವಿಂದಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡುವರು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಖ್ಯೆ ಹೆಚ್ಚಿದ್ದು, ನೌಕರ ಒಕ್ಕೂಟ ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರದ ಮಹಾನ್ ಚಿಂತಕ, ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ರವರ ಸೇವೆಯ ಬಗ್ಗೆ ಹೆಚ್ಚು ಮನವರಿಕೆ ಮಾಡಿಕೊಳ್ಳುವ ಕಾರ್ಯಕ್ರಮವಾಗಿದ್ದು, ಈ ನಿಟ್ಟಿನಲ್ಲಿ ಆಯೋಜಿಸಿದ್ದು, ಎಲ್ಲಾ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ(ಲೋಕೋಪಯೋಗಿ ಇಲಾಖೆ) ಸತ್ಯಪ್ಪ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಸಮರ್ಥರಾಯ, ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್, ಸಮುದಾಯದ ಯುವ ಮುಖಂಡರಾದ ಉಮೇಶ್ಚಂದ್ರ ಬ್ಯಾನರ್ಜಿ, ತಿಪ್ಪೇಸ್ವಾಮಿ, ಡಿ.ಶ್ರೀನಿವಾಸ್, ಸುರೇಶ್, ಮಾರಣ್ಣ, ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
