ಹೊಳಲ್ಕೆರೆ:
ತಾಲೂಕಿನ ಕೆಲ ಸರಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಸ್ಟೀಲ್ ಕಂಟೈನರ್ ಬದಲಾಗಿ ತಗಡಿನ ಕಂಟೈನರ್ ವಿತರಿಸುವ ಮೂಲಕ ಲೋಪ ಎಸಗಿದ್ದು ಇದರ ಹೊಣೆಯನ್ನು ತಾಪಂ ಇಒ ಹಾಗೂ ಪಿಡಿಒಗಳೆ ಹೊರಬೇಕು ಎಂದು ಜಿಪಂ ನ್ಯಾಯ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ತಾಲೂಕಿನ ಚಿತ್ರಹಳ್ಳಿ, ಟಿ.ನುಲೇನೂರು, ತಾಳ್ಯ, ಮದ್ದೇರು, ಗ್ರಾಪಂ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕಂಟೈನರ್‍ಗಳನ್ನು ಪರಿಶೀಲಿಸಿ ಮಾತನಾಡಿದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಯ ಉಪಹಾರದ ಧಾನ್ಯಗಳನ್ನು ಸಂಗ್ರಹಿಸಲು ತಾಲೂಕಿನ 25 ಗ್ರಾಪಂಗಳಿಗೆ ತಲಾ 1 ಲಕ್ಷ ರೂಗಳಂತೆ ಸ್ಟೀಲ್ ಕಂಟೈನರ್ ಖರೀದಿಸುವಂತೆ ಸೂಚಿಸಿ ಅನುದಾನ ನೀಡಲಾಗಿತ್ತು. ಆದರೆ ಕಳಪೆ ತಗಡಿನ ಕಂಟೈನರ್ ಖರೀದಿಸಿ ವಿತರಿಸುವ ಮೂಲಕ ಲೋಪ ಎಸಗಲಾಗಿದೆ ಎಂದು ದೂರಿದರು.
ಸದಸ್ಯೆ ಶಶಿಕಲಾ ಸುರೇಶ್‍ಬಾಬು ಮಾತನಾಡಿ, ಜಿಪಂ ಸದಸ್ಯ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನ್ಯಾಯ ಸಮಿತಿ ರಚನೆಯಾಗಿದ್ದು, ಸಮಿತಿ ಸದಸ್ಯರ ನೇತೃತ್ವದಲ್ಲಿ ಜಿಲ್ಲೆಯ 5 ತಾಲೂಕಿನ ಶಾಲೆ, ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತಿದೆ.
ಚಿತ್ರದುರ್ಗ ತಾಲೂಕು ಹೊರತುಪಡಿಸಿ ಬಹುತೇಕ ಉಳಿದ ತಾಲೂಕಿನ ಎಲ್ಲಾ ಕಡೆಗಳಲ್ಲಿ ಸ್ಟೀಲ್ ಕಂಟೈನರ್ ಬದಲಾಗಿ ಕಳಪೆ ಕಂಟೈನರ್ ಸರಭರಾಜಾಗಿರುವುದು ಬೆಳಕಿಗೆ ಬಂದಿದೆ. ಸಂತಸದ ಸಂಗತಿ ಎಂದರೆ ಕೆಲ ಶಾಲೆಗಳಲ್ಲಿ ತಗಡಿನ ಕಂಟೈನರ್ ಗಳನ್ನು ಕೆಲ ಶಾಲೆಯ ಸಿಬ್ಬಂದಿ ವಾಪಾಸ ಕಳಿಸಿರುವುದು ಕಂಡು ಬಂದಿದೆ. ಈಗಾಗಲೇ ವಿತರಿಸಿರುವ ಕಂಟೈನರ್‍ಗಳು ತುಕ್ಕು ಹಿಡಿಯುತಿದ್ದು ಇದರಿಂದ ಕಳಪೆ ಸಾಮಗ್ರಿ ಖರೀದಿ ಸಾಬೀತಾಗಿರುವ ಕಾರಣ ಅದರ ಹೊಣೆಯನ್ನು ಪಿಡಿಒ, ತಾಪಂ ಇಒ ಅವರೆ ಹೊರಬೇಕಿದೆ.
ಈ ರೀತಿ ಲೋಪಗಳಿಗೆ ನ್ಯಾಯ ಸಮಿತಿ ಕ್ಷಮಿಸುವ ಪ್ರಶ್ನೆಯೇ ಇಲ್ಲ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕಿದೆ ಎಂದರು. ಜಿಪಂ ಸದಸ್ಯೆ ವಿಜಯಲಕ್ಷ್ಮಿ ಪ್ರಕಾಶ್, ಜಯಪ್ರತಿಭಾ ನವೀನ್, ಅಕ್ಷರ ದಾಸೋಹದ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








