ಬೆಂಗಳೂರು
ಹೈದ್ರಾಬಾದ್ ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿ ಸಾಕ್ಷಿ ನಾಷಮಾಡಿರುವ ಪೊಲೀಸರ ಕ್ರಮ, ಬಾಲಿವುಡ್ ನಟಿ ಐಶ್ವರ್ಯ ರೈ ವಿಚಾರವಾಗಿ ಅಶ್ಲೀಲವಾಗಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಘಟಕ ಪ್ರತಿಭಟನೆ ನಡೆಸಿತು.
ನಗರದ ಮಲ್ಲೇಶ್ವರ ವೃತ್ತದಲ್ಲಿ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಜ್ಯೋತಿ ಮಾತನಾಡಿ, ಹೈದರಾಬಾದ್ ನ ಅತ್ಯಾಚಾರ ಆರೋಪಿಗಳನ್ನು ಎನ್‍ಕೌಂಟರ್ ನಡೆಸಿ ಕೊಂದಿರುವ ಪೊಲೀಸರ ಕ್ರಮ ಖಂಡನೀಯ. ಶಿಕ್ಷೆ ವಿಧಿಸಬೇಕಾಗಿದ್ದು ನ್ಯಾಯಾಲಯವೇ ವಿನಾ ಪೊಲೀಸರಲ್ಲ. ಪ್ರಕರಣದ ವಿಚಾರಣೆಯನ್ನು ಶೀಘ್ರ ಗತಿಯಲ್ಲಿ ಮುಕ್ತಾಯಗೊಳಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಎನ್‍ಕೌಂಟರ್ ಮಾಡಿ ಅತ್ಯಾಚಾರ ಪ್ರಕರಣದ ಸಾಕ್ಷ್ಯ ನಾಶಮಾಡಲು ಪೆÇಲೀಸರು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಎನ್‍ಕೌಂಟರ್‍ಗಳು ಸಂವಿಧಾನ ಬಾಹಿರವಾಗಿದ್ದು ಇವು ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯ ಒದಗಿಸುವುದಿಲ್ಲ. ಮಹಿಳಾ ಚಳವಳಿ ಈವೆರಗೆ ಗಳಿಸಿದ್ದ ಮಹಿಳಾಪರ ಕಾನೂನುಗಳನ್ನು ನಿರ್ನಾಮ ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಉತ್ತರ ದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ನ್ಯಾಯಾಲಯಕ್ಕೆ ತೆರಳುವ ಹಾದಿಯಲ್ಲೇ ಆರೋಪಿಗಳು ಸುಟ್ಟುಹಾಕಿದ ಘಟನೆಗೆ ಇಡೀ ದೇಶವೇ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಉತ್ತಮ ಆಡಳಿತ ನಡೆಸುತ್ತೇವೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಒಟ್ಟಾರೆ ದೇಶದ ವ್ಯವಸ್ಥೆಯೇ ಕುಸಿದುಬಿದ್ದಿದೆ ಎಂದರು.
ಸಚಿವ ಕೆ.ಎಸ್. ಈಶ್ವರಪ್ಪ ನಟಿ ಐಶ್ವರ್ಯ ರೈ ಅವರ ಬಗ್ಗೆ ನೀಡಿರುವ ಹೇಳಿಕೆ ಅವರ ಕೀಳು ಮನಸ್ಥಿತಿಯನ್ನು ಬಿಂಬಿಸುತ್ತದೆ. ಮಹಿಳೆಯರನ್ನು ಭೋಗದ ಸರಕು ಎಂದು ನೋಡುವ ಮನೋಸ್ಥಿತಿಯುಳ್ಳ ಇಂತಹ ನಾಯಕತ್ವ ನಮ್ಮ ದೇಶವನ್ನು ಆಳುತ್ತಿರುವಾಗ ಅತ್ಯಾಚಾರ-ಕೊಲೆಗಳೇ ಸಮಾಜದ ನಿಯಮವಾಗುತ್ತದೆ. ಮಹಿಳಾವಿರೋಧಿ ಹೇಳಿಕೆ ನೀಡಿರುವ ಈಶ್ವರಪ್ಪ ಅವರ ವಿರುದ್ಧ ಅವರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಆದ್ದರಿಂದ ಗಲ್ಲುಶಿಕ್ಷೆ, ಎನ್‍ಕೌಂಟರ್‍ಗಳು ಅತ್ಯಾಚಾರಕ್ಕೆ ಕಡಿವಾಣ ಹಾಕುವುದಿಲ್ಲ, ಇಂತಹ ಮನಸ್ಥಿತಿಯನ್ನು ಹೋಗಲಾಡಿಸಿ ಸಂವಿಧಾನದ ಆಶಯಗಳಾದ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆಯನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸಮಾಜ ಒತ್ತು ನೀಡಬೇಕಿದೆ ಎಂದು ಹೇಳಿದರು.
ಕಳೆದ 2013ರಲ್ಲಿ ನಿರ್ಭಯ ಪ್ರಕರಣದ ನಂತರ ಸರ್ಕಾರ ರಚಿಸಿದ್ದ ನ್ಯಾ. ವರ್ಮಾ ಆಯೋಗ ಮತ್ತು ನ್ಯಾ. ಉಷಾ ಮೆಹರಾ ಆಯೋಗ ನೀಡಿರುವ ಶಿಫಾರಸುಗಳನ್ನು ತಕ್ಷಣ ಜಾರಿಗೊಳಿಸಬೇಕು. ರಾಜ್ಯದಲ್ಲಿ ವಿ.ಎಸ್.ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ 2018ರಲ್ಲಿ ನೀಡಲಾಗಿದ್ದ ಮಹಿಳೆರು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತ ವರದಿಯನ್ನು ಪರಿಗಣಿಸಿ ಅದರ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಹಿಂಸಾಚಾರ – ಅತ್ಯಾಚಾರ ಪ್ರಕರಣಗಳು ಹಾಗೂ ಅವುಗಳಿಗೆ ಸರ್ಕಾರಗಳು ಸ್ಪಂದಿಸುತ್ತಿರುವ ರೀತಿ ದಿಗಿಲು ಮತ್ತು ಅಸಹ್ಯ ಹುಟ್ಟಿಸುತ್ತಿವೆ. ಆಳುವ ಸರ್ಕಾರಗಳ ಬೇಜವಾಬ್ದಾರಿತನ ಮತ್ತು ಪುರುಷಾಧಿಪತ್ಯದ ಪಾಳೆಯಗಾರಿ ಧೋರಣೆಗಳಿಂದಾಗಿ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಬದುಕುವುದು ದುಸ್ತರವಾಗಿದೆ. ಇಂತಹ ಆತಂಕಕಾರಿ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರಗಳು ತೋರಿರುವ ವೈಫಲ್ಯಗಳು ಖಂಡನೀಯ ಎಂದರು.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಮಾತುಗಳು, ಘೋಷಣೆ ಭಾಷಣಗಳಲ್ಲಿ ಮಾತ್ರ ಉಳಿದಿವೆ, ಬೇಟಿ ಬಚಾವ್ ಕಾರ್ಯಕ್ರಮಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ವೆಚ್ಚಮಾಡಿ ಜಾಹೀರಾತು ನೀಡುತ್ತಿದೆ. ಆದರೆ ಹೆಣ್ಣುಮಕ್ಕಳ ಜೀವ ಉಳಿಸಲು ಇದರಿಂದ ಸಾಧ್ಯವಾಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾರತಿ ಪ್ರಶಾಂತ್, ದಿವ್ಯ, ಅನಿತಾ, ವೀಣಾ, ಸರೋಜಾ, ಪುಷ್ಪಾ ಮುಂತಾದವರು ವಹಿಸಿದ್ದರು. ಪತ್ರಕರ್ತ ಡಾ. ಸಿದ್ದನಗೌಡ ಪಾಟೀಲ, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಎಐವೈಎಫ್ ನಾಯಕರಾದ ಹರೀಶ್ ಬಾಲಾ ಮತ್ತು ಬಾಡದ ವೀರಣ್ಣ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
