ದಾವಣಗೆರೆ:
ವಕೀಲರು ಕಾರ್ಯಕ್ಷಮತೆ ಬೆಳೆಸಿಕೊಳ್ಳುವ ಮೂಲಕ, ನ್ಯಾಯದಾನ ವಿಳಂಬ ಆಗದಂತೆ ತ್ವರಿತಗತಿಯಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸುವ ಮೂಲಕ ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಇಮ್ಮಡಿಗೊಳ್ಳುವಂತೆ ಮಾಡಬೇಕೆಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಜಿನಲ್ಕರ್ ಭೀಮರಾವ್ ಕರೆ ನೀಡಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಜಿಲ್ಲಾ ಘಟಕದಿಂದ ವಕೀಲರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರು ಈಗಲೂ ಅತೀವ ವಿಶ್ವಾಸವಿಟ್ಟಿದ್ದಾರೆ. ಆದರೆ, ಕೆಲವೊಮ್ಮೆ ನ್ಯಾಯದಾನ ವಿಳಂಬ ಆಗುವುದರಿಂದ ಜನರ ನಂಬಿಕೆ ಹುಸಿಯಾಗಿ, ನ್ಯಾಯಾಂಗದ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಮುನ್ನವೇ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕೆಂದು ಸಲಹೆ ನೀಡಿದರು.
ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣಗಳಿಂದಾಗಿ ಕೆಲವು ಪ್ರಕರಣಗಳು 5-10 ವರ್ಷಗಳವರೆಗೆ ನಡೆಯುತ್ತವೆ. ಇದಕ್ಕೆ ವಕೀಲರ ನಿರ್ಲಕ್ಷ್ಯವೂ ಸಹ ಕಾರಣವಾಗಿದೆ. ಆದ್ದರಿಂದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಕೀಲರು ಕಾರ್ಯಕ್ಷಮತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನ್ಯಾಯದಾನ ತ್ವರಿತಗೊಂಡು, ನ್ಯಾಯಾಂಗದ ಮೇಲಿನ ಜನರ ವಿಶ್ವಾಸವೂ ಇಮ್ಮಡಿಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ಯಾವುದೇ ನ್ಯಾಯಾಲಯಗಳಿಂದ ಪರಿಣಾಮಕಾರಿಯಾಗಿ ತೀರ್ಪು ಬರಬೇಕಾದರೆ, ವಕೀಲರ ಸಹಕಾರವೂ ಅತ್ಯವಶ್ಯವಾಗಿದೆ. ತಮ್ಮ ಪಕ್ಷವನ್ನು ವಕೀಲರು ನ್ಯಾಯಾಧೀಶರಿಗೆ ಮನದಟ್ಟು ಮಾಡಿಕೊಡಬೇಕು. ಇದಕ್ಕಾಗಿ ಆಳವಾದ ಕಾನೂನು ಜ್ಞಾನದ ಜೊತೆಗೆ ನಾನಾ ನ್ಯಾಯಾಲಯಗಳ ತೀರ್ಪುಗಳನ್ನು ಸಹ ಚೆನ್ನಾಗಿ ತಿಳಿದಿರಬೇಕಾಗುತ್ತದೆ. ವ್ಯತಿರಿಕ್ತವಾದ ತೀರ್ಪನ್ನು ಕೂಡ ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವವನ್ನು ವಕೀಲರು ಹೊಂದಿರಬೇಕು ಎಂದರು.
ಕಕ್ಷಿದಾರರಿಗೆ ಸಮರ್ಪಕವಾಗಿ ನ್ಯಾಯ ಒದಗಿಸುವ ಬದ್ಧತೆಯನ್ನು ವಕೀಲರು ಪ್ರದರ್ಶಿಸಬೇಕಾಗಿದೆ ಎಂದ ಅವರು, ವಕೀಲರು ಹಾಗೂ ನ್ಯಾಯಾಧೀಶರು ಕಡ್ಡಾಯವಾಗಿ ಕಾನೂನು ಅಧ್ಯಯನ ಮಾಡಲೇಬೇಕಾಗಿದೆ. ಪ್ರಸ್ತುತ ಇರುವ ಸಾವಿರಾರು ಕಾನೂನುಗಳ ಬಗ್ಗೆ ಆಳವಾದ ಜ್ಞಾನ ಇರಬೇಕು. ಹೀಗಾಗಿ ಸದಾ ವಿದ್ಯಾರ್ಥಿಗಳಾಗಿ ನಿರಂತರ ಅಧ್ಯಯನಶೀಲರಾಗಬೇಕೆಂದು ಪ್ರತಿಪಾದಿಸಿದರು.
ಕಾನೂನು ಕ್ಷೇತ್ರದಲ್ಲಿ ಆಗುವ ಹೊಸ ಬದಲಾವಣೆಗಳನ್ನು ತಿಳಿದಾಗ ಮಾತ್ರ ವೃತ್ತಿಯಲ್ಲಿ ಯಶಸ್ವಿ ವಕೀಲರಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ. ಈ ದಿಸೆಯಲ್ಲಿ ಅಧಿವಕ್ತಾ ಪರಿಷತ್ ವಕೀಲರಿಗಾಗಿ ಕಾನೂನು ಕಾರ್ಯಾಗಾರ ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್.ಬಡಿಗೇರ್ ಮಾತನಾಡಿ, ಎರಡೂ ಪಕ್ಷದವರಿಗೆ ಸಮಾಧಾನವಾಗುವಂತೆ ಹಳೇ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು 2-3 ತಿಂಗಳಿಗೊಮ್ಮೆ ಲೋಕ ಅದಾಲತ್ ಏರ್ಪಡಿಸಲಾಗುತ್ತಿದೆ. ಇದರಿಂದ ಕಕ್ಷಿದಾರರಿಗೆ ಸಮಯ, ಹಣ ಉಳಿತಾಯವಾಗುತ್ತದೆ. ಆದ್ದರಿಂದ ವಕೀಲರು ಕಕ್ಷಿದಾರರಲ್ಲಿ ರಾಜಿ ಮಾಡಿಸಲು ಮನಸ್ಸು ಮಾಡಬೇಕಾದ ಅವಶ್ಯಕತೆ ಇದೆ. ಎಲ್ಲರಿಗೂ ಸಮಾನ ನ್ಯಾಯ ಸಿಗುವ ರೀತಿಯಲ್ಲಿ ರಾಜಿ ಸಂಧಾನಕ್ಕೆ ವಕೀಲರು ಪ್ರಯತ್ನಿಸಿದಲ್ಲಿ ಸಾಮಾಜಿಕ ಜವಾಬ್ದಾರಿ ನಿಭಾಯಿಸಿದಂತಾಗಲಿದೆ ಎಂದು ಹೇಳಿದರು.
ಭಾರತ ದಂಡ ಸಂಹಿತೆ ಹಾಗೂ ದಂಡ ಪ್ರಕ್ರಿಯ ಸಂಹಿತೆ ಗೋಷ್ಠಿಗಳಲ್ಲಿ ಬೆಂಗಳೂರಿನ ಹೈಕೋರ್ಟ್ ಸರ್ಕಾರಿ ವಕೀಲರಾದ ವಿಜಯಕುಮಾರ್ ಪಾಟೀಲ್, ಟಿ.ಪಿ.ಶ್ರೀನಿವಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ ವಹಿಸಿದ್ದರು. ಹಿರಿಯ ವಕೀಲ ಜಿ.ಕೆ.ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೌಮ್ಯ ಪ್ರಾರ್ಥಿಸಿದರು. ಎಲ್.ದಯಾನಂದ್ ಸ್ವಾಗತಿಸಿದರು. ಎಂ.ಜಿ.ರಮೇಶ ಕಾರ್ಯಕ್ರಮ ನಿರೂಪಿಸಿದರು. ವಿ.ವಸಂತ ಕುಮಾರ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ