ಬೆಂಗಳೂರು
ಮನೆಕೆಲಸಕ್ಕೆ ಸೇರಿಕೊಂಡು ಮನೆ ಮಾಲೀಕರ ನಂಬಿಕೆಗಳಿಸಿ ಅವರ ಮನೆಯಲ್ಲದೇ ಅಕ್ಕಪಕ್ಕದವರ ಮನೆಗೆ ನುಗ್ಗಿ ಕನ್ನಗಳವು ಮಾಡುತ್ತಿದ್ದ ಒರಿಸ್ಸಾ ಮೂಲದ ನಾಲ್ವರು ಕನ್ನಗಳ್ಳರ ಗ್ಯಾಂಗ್‌ನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒರಿಸ್ಸಾ ಗ್ಯಾಂಗ್‌ನ ಬೊಮ್ಮನಹಳ್ಳಿಯ ಬೇಗೂರು ಮುಖ್ಯ ರಸ್ತೆಯ ಅನಂತ್‌ಕುಮಾರ್,(31) ಸರ್ಜಾಪುರ ಮುಖ್ಯರಸ್ತೆ ಚನ್ನಸಂದ್ರದ ರಮೇಶ್ ಚಂದ್ರ ಶಾಹೊ (32) ಬೇಗೂರು ಮುಖ್ಯರಸ್ತೆಯ ವಿಶ್ವಜೀತ್ ಮಲ್ಲಿಕ್, (23), ಹಾಗೂ ದುಲಾಲ್ ಸಿಂಗ್ ಸಾಹು, (33) ಬಂಧಿಸಲಾಗಿದೆ
ಬಂಧಿತರಿಂದ 64 ಲಕ್ಷ ಮೌಲ್ಯದ 1.6 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಜಯನಗರ, ಜೆ.ಪಿ.ನಗರ, ಹಲಸೂರು, ಎಸ್.ಆರ್.ನಗರ, ಬ್ಯಾಟರಾಯನಪುರ, ಕೆ.ಪಿ. ಅಗ್ರಹಾರ ಸೇರಿದಂತೆ 15 ಕಡೆಗಳಲ್ಲಿ ನಡೆದಿದ್ದ ಕನ್ನಗಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಒರಿಸ್ಸಾ ಮೂಲದವರಾಗಿದ್ದ ಬಂಗಾಳಿ, ಓಡಿಯಾ ಭಾಷೆಯನ್ನು ಮಾತನಾಡುತ್ತಿದ್ದು, ಭಾಷೆಯಿಂದಲೇ ಪರಿಚಯ ಮಾಡಿಕೊಂಡು ಗ್ಯಾಂಗ್ ಕಟ್ಟಿಕೊಂಡು ತಾವು ಕೆಲಸ ಮಾಡುವ ಮನೆ ಮಾಲೀಕರ ನಂಬಿಕೆ ಗಳಿಸುತ್ತಿದ್ದರು.ಮಾಲೀಕರಿಗೆ ನಂಬಿಕೆ, ಮನೆ ಬಾಗಿಲಿಗೆ ಬೀಗ ಹಾಕದೇ ಹೋಗುವುದು. ಇಲ್ಲವೇ ಕಿ ಕೊಟ್ಟು ಹೋಗುತ್ತಿದ್ದಾಗ ಹೊಂಚು ಹಾಕಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದಲ್ಲದೇ ಅಕ್ಕ ಪಕ್ಕದ ಬೀಗ ಹಾಕಿದ ಮನಗಳಿಗೆ ನುಗ್ಗಿ ಕಳವು ಮಾಡುತ್ತಿದ್ದರು.
ಕಳವು ಮಾಡಿದ ಚಿನ್ನಾಭರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ನಗರದಲ್ಲಿ ಮಾರಾಟ ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಕೊಲ್ಕತ್ತಾಗೆ ಕೊಂಡೊಯ್ದು ಅಲ್ಲಿ ಮಾರಾಟ ಮಾಡುತ್ತಿದ್ದರು.
ಕೋಲ್ಕತ್ತಾದಲ್ಲಿ ಕೃತ್ಯ
ಆರೋಪಿಗಳ ವಿರುದ್ಧ ಕೊಲ್ಕತ್ತಾ ಹಾಗೂ ಓರಿಸ್ಸಾದಲ್ಲಿ ಮನೆ ಗಳವು ಸೇರಿದಂತೆ ಅಪರಾಧ ಪ್ರಕರಣಗಳು ದಾಖಲಾಗಿದ್ದು ಅಲ್ಲಿ ಹಳೆ ಆರೋಪಿಗಳಾಗಿದ್ದಾರೆ
ಬ್ಯಾಟರಾಯನಪುರದಲ್ಲಿ ನಡೆದಿದ್ದ ಕನ್ನಗಳವು ಪ್ರಕರಣವನ್ನು ಕೈಗೆತ್ತಿಕೊಂಡ ಎಸಿಪಿ, ವೇಣುಗೋಪಾಲ್, ಅವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಪಶ್ಚಿಮ ಬಂಗಾಳದ ಕೊಲ್ಕತ್ತಾ ಹಾಗೂ ಭುವನೇಶ್ವರ ನಗರಕ್ಕೆ ತೆರಳಿ 15 ದಿನಗಳ ಕಾಲ ಅಲ್ಲಿಯೇ ಉಳಿದು ಆರೋಪಿಗಳು ಫೋಟೋ ಹಿಡಿದು ಸಂಬಂಧಿಕರನ್ನು ಪತ್ತೆ ಮಾಡಿದ್ದಾರೆ.
ಅಲ್ಲಿನ ಪೊಲೀಸರ ಸಹಕಾರದೊಂದಿಗೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಗ್ಯಾಂಗ್ ನಲ್ಲಿರುವ ಇನ್ನೂ ಕೆಲವರ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಭಾಸ್ಕರ ರಾವ್ ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲದೀಪ್ ಕುಮಾರ್ ಸಿಂಗ್, ರವಿಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








