ಬೆಂಗಳೂರು
ನಗರದಲ್ಲಿನ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ಸುಮಾರು 4.75 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ನಗರಾಭಿವೃದ್ದಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ಲಭ್ಯವಿರುವ 3.35 ಕೋಟಿ ರೂ. ನೆದರ್‍ಲ್ಯಾಂಡ್ ದೇಶದ ಸ್ವೀಪ್ ಸ್ಮಾರ್ಟ್ ಸಂಸ್ಥೆಯ ಕೊಡುಗೆ 1.40 ಕೋಟಿ ಒಳಗೊಂಡಂತೆ ಒಟ್ಟು 4.75 ಕೋಟಿ ರೂ. ವೆಚ್ಚದಲ್ಲಿ 10 ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ಒಣಕಸ ಮೇಲ್ದರ್ಜೆಗೇರಿಸುವ ಕಾರ್ಯ ಆರಂಭಿಸಲಾಗುವುದು ಎಂದರು.
ಯಶವಂತಪುರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹೆಚ್ಚುವರಿ ಒಣತ್ಯಾಜ್ಯವನ್ನು ಮರುಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಒಣತ್ಯಾಜ್ಯದಲ್ಲಿ ದೊರೆಯುವ ಸುಮಾರು 36 ಮರುಬಳಕೆ ವಸ್ತುಗಳನ್ನು ಒಂದೇ ಬಾರಿ ಅತಿಕಡಿಮೆ ಸಮಯದಲ್ಲಿ ಏರ್ಪಡಿಸಿ ಮರುಬಳಕೆ ಮಾಡಿಕೊಳ್ಳಬಹುದಾಗಿದೆ.ಈ ಹಿಂದೆ 6 ರಿಂದ 8 ತ್ಯಾಜ್ಯಗಳನ್ನು ಬೇರ್ಪಡಿಸಬಹುದಾಗಿದ್ದ ಈ ಘಟಕಗಳನ್ನು ಒಟ್ಟು 36 ತ್ಯಾಜ್ಯಗಳನ್ನು ಒಂದೇ ಬಾರಿ ವಿಂಗಡಿಸಬಹುದಾಗಿದೆ ಎಂದರು.
ಪ್ರತಿದಿನ 1.2 ಟನ್ ಒಣತ್ಯಾಜ್ಯ ಮರುಬಳಕೆಯಿಂದ 3 ರಿಂದ 4 ಟನ್ ಮರುಬಳಕೆ ವಸ್ತುಗಳನ್ನು ಪಡೆದುಕೊಳ್ಳಬಹುದು. ವಾರ್ಡ್ ವ್ಯಾಪ್ತಿಯಲ್ಲಿಯೇ ಉತ್ಪತ್ತಿಯಾಗುವ ಬಹುತೇಕ ಒಣತ್ಯಾಜ್ಯವನ್ನು ವಾರ್ಡ್ ಮಟ್ಟದಲ್ಲಿಯೇ ವಿಂಗಡಿಸಬಹುದು ಎಂದರು.
ಈ ಸಂದರ್ಭದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನೆದರ್‍ಲ್ಯಾಂಡ್‍ನ ಸ್ವೀಪ್ ಸ್ಮಾರ್ಟ್ ಸಿಇಒ ಸಿಲ್ವಾ ಡೆ ವಾನ್, ನೆದರ್‍ಲ್ಯಾಂಡ್ ಕೌನ್ಸಿಲ್ ಜನರಲ್ ಗೆರ್ಟ್ ಹಿಯಾಜ್ ಕೂಪ್, ಇನ್ನಿತರರು ಉಪಸ್ಥಿತರಿದ್ದರು.