ಬಿಸಿಯೂಟದ ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ..!

ಹುಳಿಯಾರು:

     ಶಾಲಾ ಬಿಸಿಯೂಟಕ್ಕೆ ಹುಳು ಬಿದ್ದಿರುವ ಬೇಳೆ ಸರಬರಾಜು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಪೋಷಕರು ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ ಮಾಡಿದ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

     ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಿಸಿಯೂಟದ ಸಾಂಬಾರಿನಲ್ಲಿ ಅನೇಕ ದಿನಗಳಿಂದ ಹುಳುಗಳು ಕಾಣಿಸುತ್ತಿತ್ತು. ಶಾಲಾ ಮಕ್ಕಳು ಸಾಂಬಾರಿನಲ್ಲಿ ಹುಳು ಕಂಡು ಶಾಲೆಯಲ್ಲಿ ಊಟ ಮಾಡುವುದನ್ನೇ ಬಿಟ್ಟಿದ್ದರು. ಪೋಷಕರು ಈ ಬಗ್ಗೆ ಪ್ರಶ್ನಿಸಲಾಗಿ ಸಾರಿನಲ್ಲಿ ಹುಳುಗಳಿರುವ ಬಗ್ಗೆ ದೂರಿದರು. ತಕ್ಷಣ ಬಿಸಿಯೂಟದ ಸಿಬ್ಬಂಧಿ ಹಾಗೂ ಶಿಕ್ಷಕರನ್ನು ಪೋಷಕರು ತರಾಟೆಗೆ ತೆಗೆದುಕೊಂಡರು.

    ಆದರೆ ಬಿಸಿಯೂಟಕ್ಕೆ ಸರಬರಾಜು ಆಗುತ್ತಿರುವ ಬೇಳೆಯಲ್ಲೇ ಹುಳುಗಳಿದ್ದು ಎಷ್ಟು ಕ್ಲೀನ್ ಮಾಡಿ ಹಾಕಿದರೂ ಕಣ್ತಪ್ಪಿ ಒಂದೊಂದು ಬಂದು ಬಿಡ್ತಾವೆ ನಾವೇನು ಮಾಡೋಣ ಎನ್ನುವ ಅಸಹಾಯಕತೆಯನ್ನು ಸಿಬ್ಬಂಧಿ ತೋಡಿಕೊಂಡರು. ಪರಿಣಾಮ ಶಾಲೆಗೆ ಬೇಳೆ ಇಳಿಸಲು ಬಂದಾಗಲೇ ಪರಿಶೀಲಿಸಿ ಸತ್ಯಾಸತ್ಯತೆ ಅರಿಯಲು ಪೋಷಕರು ನಿರ್ಧರಿಸಿದರು.

    ಅದರಂತೆ ಗುರುವಾರ ಶಾಲೆಗೆ ರೇಷನ್ ಇಳಿಸಲು ಬಂದ ಲಾರಿಯಿಂದಲೇ ನೇರವಾಗಿ ಬೇಳೆ ಇಳಿಸಿಕೊಂಡು ಪೋಷಕರು ಪರಿಶೀಲಿಸಿದಾಗ ಬೇಳೆಯಲ್ಲೇ ಹುಳುಗಳಿರುವ ಸತ್ಯ ಬಯಲಿಗೆ ಬಂದಿತು. ಇದರಿಂದ ಆಕ್ರೋಶಗೊಂಡ ಪೋಷಕರು ಅಧಿಕಾರಿಗಳು ಬಂದು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳದ ವಿನಹ ಲಾರಿ ಬಿಡುವುದಿಲ್ಲ ಎಂದು ಮಕ್ಕಳೊಂದಿಗೆ ಪೋಷಕರು ಧರಣಿಗೆ ಮುಂದಾದರು.

     ವಿಷಯ ತಿಳಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ಬೇಳೆ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಿದರಲ್ಲದೆ ಈ ಬೇಳೆಯನ್ನು ಯಾವ ಶಾಲೆಗೂ ಇಳಿಸದಂತೆ ವಾಪಸ್ ತೆಗೆದುಕೊಂಡು ಹೋಗುವಂತೆ ಲಾರಿ ಚಾಲಕನಿಗೆ ಸೂಚನೆ ನೀಡಿದರು. ಜೊತೆಗೆ ಇನ್ನೆರಡು ದಿನಗಳಲ್ಲಿ ಗುಣಮಟ್ಟದ ಬೇಳೆ ಸರಬರಾಜು ಮಾಡುವ ಭರವಸೆ ನೀಡಿದರು.

     ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹನುಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಎಂಜಾರಪ್ಪ, ಮಾಜಿ ಸದಸ್ಯ ಲೋಕೇಶ್, ಬಿ.ಆರ್.ರಮೇಶ್, ಸಿಆರ್‍ಪಿ ಲೋಕೇಶ್ ಸೇರಿದಂತೆ ಗ್ರಾಮಸ್ಥರು, ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link