ಹಾವೇರಿ
ಜಿಲ್ಲೆಯಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯಬಾರದು. ಈ ಕುರಿತಂತೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಗೋಡೆ ಬರಹ ಇತರ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಬಾಲ್ಯ ವಿವಾಹ ನಡೆದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಬೇಟಿ ಪಡಾವೋ ಮತ್ತು ಬೇಟಿ ಬಚಾವೋ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮಗುವನ್ನು ಉಳಿಸಿ ಮಗುವನ್ನು ಬೆಳೆಸಿ (ಬೇಟಿ ಬಚಾವೋ ಬೇಟಿ ಪಡಾವೋ) ಯೋಜನೆಯಡಿ ಜಿಲ್ಲೆಯ ಹೆಣ್ಣು ಮಗುವಿನ ರಕ್ಷಣೆ, ಪೋಷಣೆ ಹಾಗೂ ಉತ್ತಮ ಶಿಕ್ಷಣ ದೊರಕುವಂತೆ ಕ್ರಮವಹಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಯಲ್ಲಿ ಮಹಿಳೆಯರಿಗಾಗಿ ಇರುವ ಯೋಜನೆಗಳ ಕುರಿತಂತೆ ಕರಪತ್ರಗಳನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ವಿತರಿಸುವ ಮೂಲಕ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.
ಹೆಣ್ಣು ಮಕ್ಕಳ ಶಿಕ್ಷಣ ರಕ್ಷಣೆಯ ಜೊತೆಗೆ ಪಿಸಿ- ಪಿಎನ್ಡಿಟಿ ಕಾಯ್ದೆ ದುರ್ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸುವ ಉದ್ದೇಶದಿಂದ ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರಸವಪೂರ್ವ ಲಿಂಗಪತ್ತೆ ತಡೆಯಬೇಕು. ಬಾಲ್ಯ ವಿವಾಹಗಳು ತಡೆನಂತರ ಕಡ್ಡಾಯವಾಗಿ ಪಾಲಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಬೇಕು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರ ಪಡಿಸಬೇಕು. ಈ ಮಕ್ಕಳನ್ನು ಬಾಲಕಿಯರ ಬಾಲಮಂದಿರದಲ್ಲಿ ದಾಖಲಿಸುವಂತೆ ಸೂಚಿಸಿದರು. ಈ ಕುರಿತಂತೆ ಜಾಗೃತಿ ಮೂಡಿಸಿ “ಮಗಳನ್ನು ಉಳಿಸಿ ಮಗಳನ್ನು ಓದಿಸಿ” ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪಿ.ವೈ.ಶೆಟ್ಟಪ್ಪನವರ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅನುಷ್ಠಾನ ಕುರಿತಂತೆ ಮಾಹಿತಿ ನೀಡಿದರು.ಬಾಲ್ಯ ವಿವಾಹ ನಿಷೇಧ ಯೋಜನೆಯಡಿ ಎಪ್ರಿಲ್- 2019 ರಿಂದ ನವಂಬರ್ 2019ರವರೆಗೆ ಇಲಾಖೆ ವತಿಯಿಂದ ಒಟ್ಟು 22 ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಈ ಅವಧಿಯಲ್ಲಿ 590 ಸಾಮೂಹಿಕ ವಿವಾಹಗಳು ನಡೆದಿವೆ. ಈ ವಿವಾಹದಲ್ಲಿ ಯಾವುದೇ ಬಾಲ್ಯ ವಿವಾಹಗಳು ನಡೆದಿರುವುದಿಲ್ಲ ಎಂದು ಸಭೆಗೆ ವಿವರಿಸಿದರು.