ತುಮಕೂರು

ವಿಶೇಷ ವರದಿ :ಆರ್.ಎಸ್.ಅಯ್ಯರ್
ತುಮಕೂರು ನಗರಕ್ಕೆ ಹೇಮಾವತಿ ನೀರು ಈ ಬಾರಿ ಸಮೃದ್ಧವಾಗಿ ದೊರಕುತ್ತಿದೆ. ಈ ವರ್ಷ ಸುರಿದ ಭಾರಿ ಮಳೆಯ ಕಾರಣದಿಂದ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯವು ಸಾಕಪ್ಪ…ಸಾಕು ಎನಿಸುವಂತೆ ಭರ್ತಿ ಆದ ಪರಿಣಾಮ, ಅಲ್ಲಿಂದ ತಕರಾರಿಲ್ಲದೆ ತುಮಕೂರಿಗೆ ನೀರು ಹರಿಯುತ್ತಿದೆ. ಈಗಷ್ಟೇ ಅಲ್ಲದೆ ಮುಂಬರುವ (2020 ರ) ಬೇಸಿಗೆ ಕಳೆದು, ಮಳೆಗಾಲದ ಕೊನೆಯವರೆಗೂ ತುಮಕೂರು ನಗರದಲ್ಲಿ ನೀರಿಗೆ ನಿರಾತಂಕ ಎಂಬ ಭರವಸೆಯನ್ನು ಮೂಡಿಸಿದೆ.
ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ತುಮಕೂರು ನಗರದ ಜನತೆಗೆ ಹೇಮಾವತಿ ನೀರು ಪೂರೈಕೆಯಾಗುತ್ತದೆ. ಮುಂಜಾಗ್ರತೆ ದೃಷ್ಟಿಯಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೊಂದಿಕೊಂಡೇ ಇರುವ ನರಸಾಪುರ ಕೆರೆ ಮತ್ತು ಹತ್ತಿರದಲ್ಲಿರುವ ಹೆಬ್ಬಾಕ ಕೆರೆಯಲ್ಲೂ ಹೇಮಾವತಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಆ ಮೂಲಕ ತುಮಕೂರು ನಗರಕ್ಕೆ ಸತತವಾಗಿ ನೀರು ಸರಬರಾಜಾಗುವಂತಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈ ವರ್ಷ ಈಗಾಗಲೇ ಎರಡು ಬಾರಿ ಹೇಮಾವತಿ ನಾಲೆಯ ಮೂಲಕ ಜಲಸಂಗ್ರಹಾಗಾರಕ್ಕೆ ನೀರು ಹರಿದುಬಂದಿದೆ. ಆಗಸ್ಟ್ 11 ರಂದು ಮೊದಲ ಬಾರಿ ಹಾಗೂ ಅಕ್ಟೋಬರ್ 2 ರಂದು ಎರಡನೇ ಬಾರಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಅದರ ಫಲವಾಗಿ ಈವರೆಗೆ ನಗರಾದ್ಯಂತ ಹೇಮಾವತಿ ನೀರು ಯಥೇಚ್ಚವಾಗಿ ಸರಬರಾಜಾಗಿದೆ. ಇನ್ನೂ ಕೆಲಕಾಲ ಸರಬರಾಜಾಗುವಷ್ಟು ನೀರೂ ಲಭ್ಯವಿದೆ.
ಆದರೆ ದೂರದೃಷ್ಟಿಯಿಂದ ಈಗ ಮತ್ತೊಮ್ಮೆ ಇದೇ ಡಿಸೆಂಬರ್ 16 ರಿಂದ ಮೂರನೇ ಬಾರಿಗೆ ಹೇಮಾವತಿ ನಾಲೆಯಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ನೀರು ಹರಿಯತೊಡಗಿದೆ. ಜಲಸಂಗ್ರಹಾಗಾರ, ನರಸಾಪುರ ಕೆರೆ ಮತ್ತು ಹೆಬ್ಬಾಕ ಕೆರೆ ಭರ್ತಿ ಆಗುವವರೆಗೂ ನಾಲೆಯಿಂದ ನೀರು ಹರಿದುಬರಲಿದೆ. ಇದೇ ರೀತಿ ಮತ್ತೊಮ್ಮೆ 2020 ರ ಫೆಬ್ರವರಿಯಲ್ಲೂ ನಾಲೆಯಿಂದ ನೀರು ಹರಿಯುವ ನಿರೀಕ್ಷೆ ಇದೆ. ಇವೆಲ್ಲ ಬೆಳವಣಿಗೆಗಳು ನಿರಾತಂಕಕ್ಕೆ ಕಾರಣವೆನಿಸುತ್ತಿವೆ.
ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಡಿ.15 ರವರೆಗೂ 90 ಎಂ.ಸಿ.ಎಫ್.ಟಿ.ಯಷ್ಟು ನೀರು ಇತ್ತು. ಡಿ.16 ರಿಂದ ನಾಲೆಯಿಂದ 100 ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿದುಬರತೊಡಗಿದ್ದು, ಡಿ.18 ರಂದು ಬೆಳಗ್ಗೆ ಹೊತ್ತಿಗೆ ನೀರಿನ ಪ್ರಮಾಣ 110 ಎಂ.ಸಿ.ಎಫ್.ಟಿ.ಯಷ್ಟು ಏರಿಕೆಯಾಗಿದೆ. ನಾಲೆಯಿಂದ ಜಲಸಂಗ್ರಹಾಗಾರಕ್ಕೆ ಇದೇ ಪ್ರಮಾಣದಲ್ಲಿ ನೀರಿನ ಒಳಹರಿವು ಇದ್ದರೆ, ಮುಂದಿನ 20 ಅಥವಾ 25 ದಿನಗಳ ಅವಧಿಯಲ್ಲಿ ಜಲಸಂಗ್ರಹಾಗಾರ ಭರ್ತಿ ಆಗಬಹುದೆಂಬ ಲೆಕ್ಕಾಚಾರವಿದೆ. ಇದೇ ಹೊತ್ತಿಗೆ ನರಸಾಪುರ ಕೆರೆ ಸೇರಿ ಹೆಬ್ಬಾಕ ಕೆರೆಯನ್ನೂ ತುಂಬಿಸಿಕೊಳ್ಳಲಾಗುವುದು. ಹೀಗೆ ಇವೆಲ್ಲ ಭರ್ತಿ ಆದರೆ ತುಮಕೂರು ನಗರಕ್ಕೆ ಮುಂದಿನ ಅಂದರೆ 2020ರ ಬೇಸಿಗೆ ಕಳೆದು, ಆಗಸ್ಟ್ ಅಂತ್ಯದವರೆಗೆ ನೀರಿನ ಸಮಸ್ಯೆ ಇರಲಾರದು ಎಂದು ಅಂದಾಜಿಸಲಾಗುತ್ತಿದೆ.
ಮತ್ತೊಂದು ಬೆಳವಣಿಗೆಯೆಂದರೆ, 2020 ರ ಫೆಬ್ರವರಿಯಲ್ಲಿ ಮತ್ತೊಮ್ಮೆ ನಾಲೆಯಿಂದ ನೀರು ಹರಿಸಿ, ಜಲಸಂಗ್ರಹಾಗಾರವನ್ನು ಭರ್ತಿ ಮಾಡಲಾಗುವುದೆಂದು ನಿರೀಕ್ಷಿಸಲಾಗಿದೆ. ಆ ರೀತಿ ಆದಲ್ಲಿ 2020 ರ ಅಕ್ಟೋಬರ್ವರೆಗೆ ತುಮಕೂರಿನ ಜನರು ನೀರಿನ ವಿಷಯದಲ್ಲಿ ನಿರಾತಂಕವಾಗಿರಬಹುದು ಎಂದು ಲೆಕ್ಕ ಹಾಕಲಾಗುತ್ತಿದೆ.
ಪ್ರಸ್ತುತ ಹೆಬ್ಬಾಕ ಕೆರೆಯಲ್ಲಿ 150 ಎಂ.ಸಿ.ಎಫ್.ಟಿ.ಯಷ್ಟು ನೀರನ್ನು ಸಂಗ್ರಹಿಸಿದ್ದು, ಅದಿಷ್ಟೇ ನೀರನ್ನು ಸುಮಾರು ಎರಡೂವರೆ ತಿಂಗಳುಗಳ ಕಾಲ ಉಪಯೋಗಿಸಬಹುದಾಗಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ಮೂಲಗಳು ಅಭಿಪ್ರಾಯಪಡುತ್ತವೆ.
ಬೋರ್ಗಳ ಬಳಕೆ ಕ್ಷೀಣ
ಈ ವರ್ಷ ಹೇಮಾವತಿ ನೀರು ಯಥೇಚ್ಛವಾಗಿ ದೊರೆಯುತ್ತಿರುವುದರಿಂದ ತುಮಕೂರು ನಗರದ ಎಲ್ಲ 35 ವಾರ್ಡ್ಗಳಿಗೂ ಹೇಮಾವತಿ ನೀರನ್ನು ನಲ್ಲಿಗಳ ಮೂಲಕ ಪೂರೈಸಲಾಗುತ್ತಿದೆ. ಹೊರವಲಯದ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ, ನಗರದ ಒಳಪ್ರದೇಶದಲ್ಲಿ ಹೇಮಾವತಿ ನೀರು ಪೂರೈಕೆಗೆ ಯಾವುದೇ ಅಡೆತಡೆಗಳೇನೂ ಇಲ್ಲ. ಹೊರವಲಯದ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಅನಿವಾರ್ಯವಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಲಾಗುತ್ತಿದೆ.
ಆದರೂ ಒಟ್ಟಾರೆ ಇಡೀ ನಗರದ ಪರಿಸ್ಥಿತಿಯನ್ನು ಗಮನಿಸಿದರೆ, ಕೊಳವೆಬಾವಿಗಳ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಗೊಂಡಿದೆ. ಇದರಿಂದ ಅತ್ಯಮೂಲ್ಯವಾದ ಅಂತರ್ಜಲದ ಬಳಕೆ ಕಡಿಮೆಯಾಗಿದ್ದು, ಅಂತರ್ಜಲ ಸಂರಕ್ಷಣೆ ಸಾಧ್ಯವಾಗುತ್ತಿದೆ. ಅಷ್ಟೇ ಅಮೂಲ್ಯವಾದ ವಿದ್ಯುತ್ ಉಳಿತಾಯವಾಗುತ್ತಿದೆ. ನಿರಂತರ ಚಾಲನೆಯಿಂದ ಪಂಪು-ಮೋಟಾರ್ಗಳು ಪದೇ ಪದೇ ದುರಸ್ತಿಗೊಳ್ಳುವುದೂ ತಪ್ಪಿದ್ದು, ಪಾಲಿಕೆಯ ಆರ್ಥಿಕ ಸಂಪನ್ಮೂಲ ಉಳಿದಂತಾಗುತ್ತಿದೆ ಎಂಬ ಒಂದು ಸಕಾರಾತ್ಮಕ ವಿಶ್ಲೇಷಣೆಯೂ ಕೇಳಿಬರುತ್ತಿದೆ.
ವಾಲ್ವ್ಮನ್ಗಳ ಜವಾಬ್ದಾರಿ
ನಗರಾದ್ಯಂತ ಮಹಾನಗರ ಪಾಲಿಕೆಗೆ ಸೇರಿದ ಸುಮಾರು 600 ಕೊಳವೆಬಾವಿಗಳು ಬಳಕೆಗೆ ಯೋಗ್ಯವಾಗಿದ್ದು ಚಾಲನೆಯಲ್ಲಿವೆ. ಆದರೆ ಹೇಮಾವತಿ ನೀರಿನ ಯಥೇಚ್ಛ ಲಭ್ಯತೆಯ ಹಿನ್ನೆಲೆಯಲ್ಲಿ ಈಗ ಇವುಗಳ ಬಳಕೆ ಸೀಮಿತ ಕಾಲಾವಧಿಗೆ ಮಾತ್ರ ಅಗತ್ಯವೆನಿಸುತ್ತಿದೆ. ಆದರೂ ಕೆಲವೆಡೆ ಈಗಲೂ ಸಹ ಕೆಲವು ವಾಲ್ವ್ಮನ್ಗಳು ಕೊಳವೆಬಾವಿ ಮೋಟಾರ್ಗಳನ್ನು ಅನಿಯಂತ್ರಿತವಾಗಿ ಬಳಸುತ್ತಿದ್ದಾರೆಂಬ ಹಾಗೂ ಕೊಳವೆಬಾವಿಯ ಕೆಳಭಾಗದಲ್ಲಿ ಸಮುದ್ರವೇ ಇದೆಯೆಂಬಷ್ಟು ಅಸಡ್ಡೆಯಿಂದ ವರ್ತಿಸುತ್ತಿದ್ದಾರೆಂಬ ಅಸಮಾಧಾನದ ಮಾತುಗಳೂ ಕೇಳಿಬರುತ್ತಿವೆ. ಆದರೆ ಇದರ ನಡುವೆ ಕೆಲವು ವಾಲ್ವ್ಮನ್ಗಳು ತುಂಬ ಜವಾಬ್ದಾರಿಯಿಂದಿದ್ದು, ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆಂಬ ಪ್ರಶಂಸೆಯ ಮಾತುಗಳೂ ಉಂಟು.
ಈಗ ಹೇಮಾವತಿಯಿಂದ ಯಥೇಚ್ಛ ನೀರು ಸಿಗುತ್ತಿರಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಎಲ್ಲೂ ಸಹ ಅಮೂಲ್ಯವಾದ ನೀರು ವ್ಯರ್ಥವಾಗದಂತೆ ಗಮನಿಸಬೇಕಾದ ಹೊಣೆ ಆಯಾ ವಾರ್ಡ್ಗಳ ವಾಲ್ವ್ಮನ್ಗಳದ್ದಾಗಿರುತ್ತದೆಂಬ ಅನಿಸಿಕೆ ವ್ಯಕ್ತವಾಗುತ್ತಿದೆ.
ಈ ವರ್ಷ ಈಗಾಗಲೇ ಎರಡು ಬಾರಿ ಹೇಮಾವತಿ ನಾಲೆಯ ಮೂಲಕ ಜಲಸಂಗ್ರಹಾಗಾರಕ್ಕೆ ನೀರು ಹರಿದು ಬಂದಿದೆ. ಅದರ ಫಲವಾಗಿ ಈವರೆಗೆ ನಗರಾದ್ಯಂತ ಹೇಮಾವತಿ ನೀರು ಯಥೇಚ್ಚವಾಗಿ ಸರಬರಾಜಾಗಿದೆ. ಇನ್ನೂ ಕೆಲಕಾಲ ಸರಬರಾಜಾಗುವಷ್ಟು ನೀರೂ ಲಭ್ಯವಿದೆ. ಈಗ ಮತ್ತೊಮ್ಮೆ ಇದೇ ಡಿಸೆಂಬರ್ 16 ರಿಂದ ಮೂರನೇ ಬಾರಿ ಗೆ ಹೇಮಾವತಿ ನಾಲೆಯಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ನೀರು ಹರಿಯತೊಡಗಿದೆ. ಇದೇ ರೀತಿ ಮತ್ತೊ ಮ್ಮೆ 2020 ರ ಫೆಬ್ರವರಿಯಲ್ಲೂ ನಾಲೆಯಿಂದ ನೀರು ಹರಿಯುವ ನಿರೀಕ್ಷೆ ಇದೆ. ಹೀಗಾಗಿ 2020ರ ಅಕ್ಟೋಬರ್ವರೆಗೆ ತುಮಕೂರಿನ ಜನರು ನೀರಿನ ವಿಷಯದಲ್ಲಿ ನಿರಾತಂಕವಾಗಿರಬಹುದು ಎಂದು ಲೆಕ್ಕ ಹಾಕಲಾಗುತ್ತಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








