ಕೆರೆಯಾಗಳ ಪಾಳ್ಯದಲ್ಲಿ ಅಪಘಾತ : ಗ್ರಾಮಸ್ಥ ಸಾವು

ಮಧುಗಿರಿ

    ಮನೆಯಲ್ಲಿನ ಪುಟ್ಟ ಮಕ್ಕಳಿಗಾಗಿ ಡೈರಿ ಯಿಂದ ಹಾಲು ತರಲು ಹೊರಟಿದ್ದ ಪಾದಚಾರಿ ತಂದೆಯೊಬ್ಬ ತನ್ನ ಮಗನ ಜನುಮ ದಿನದಂದೆ ಮಸಣ ಸೇರಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ಸುಮಾರು 6:30 ರ ಸಮಯದಲ್ಲಿ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಧುಗಿರಿ-ತುಮಕೂರು ಕೆಶಿಪ್ ರಸ್ತೆಯ ಸಮೀಪ ವಿರುವ ಕೆರೆಗಳಪಾಳ್ಯ ಗ್ರಾಮದ ರಸ್ತೆ ತಿರುವಿನಲ್ಲಿ ಜವರಾಯನ ರೂಪದಲ್ಲಿ ಅತಿ ವೇಗವಾಗಿ ಬಂದ ಲಾರಿಯೊಂದು ಕೆರೆಗಳಪಾಳ್ಯ ಗ್ರಾಮದ ವಾಸಿ ನವೀನ್ (30) ಎನ್ನುವವರ ಮೇಲೆ ಹರಿದಿದ್ದು ನವೀನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮೃತ ನವೀನ್ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮೃತನಿಗೆ ಪತ್ನಿ ಹನುಮಕ್ಕ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳಾದ ದೀಕ್ಷಾ (6) ಬಿಂದು (4) ಹಾಗೂ ಒಂದು ವರ್ಷದ ಗಗನ್ (1) ಗಂಡು ಮಗುವಿದೆ. ಮಕ್ಕಳಿಗಾಗಿ ರಸ್ತೆಯ ಸಮೀಪವಿರುವ ಹಾಲಿನ ಡೈರಿಗೆ ಹೋಗುವಾಗ ಘಟನೆ ನಡೆದಿದ್ದು, ಇತ್ತಾ ಮಕ್ಕಳು ಅಪ್ಪ ಹಾಲು ತರಲು ಹೋದವರು ಇನ್ನೂ ಬಾರದೆ ಇದ್ದು ತಂದೆಯ ಬರುವಿಕೆಯನ್ನು ಕಾದು ಕುಳಿತ್ತಿದ್ದರು. ಅಪಘಾತ ನಡೆದ ಬಗ್ಗೆ ಗ್ರಾಮದ ಸ್ಥಳೀಯರು ಮನೆಯ ಬಳಿ ಬಂದು ವಿವರಿಸಿದಾಗ ಪತ್ನಿ ಮನೆಯ ಬಳಿಯೇ ಕುಸಿದು ಬಿದ್ದರು.

     ಕೆರೆಗಳ ಪಾಳ್ಯದ ಮನೆಯೊಂದರಲ್ಲಿ ಮೃತ ವ್ಯಕ್ತಿಯ ಕುಟುಂಬ ವಾಸವಿದೆ. ಸುಮಾರು ಎರಡು ಲಕ್ಷ ರೂ.ಗಳವರೆಗೆ ಸಾಲ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಈ ಘಟನೆಯಿಂದಾಗಿ ಕುಟುಂಬ ಬೀದಿ ಬಿದ್ದಂತಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ತುಮಕೂರು ರಸ್ತೆಯ ಕಡೆಯ ತಿರುವಿನಿಂದ ಬಂದ ಲಾರಿ ಈ ಮೊದಲು ರಸ್ತೆ ಪಕ್ಕದಲ್ಲಿದ್ದ ನಿಲ್ಲಿಸಿದ್ದ ಎರಡು ಸ್ಕೂಟರ್ ಹಾಗೂ ಒಂದು ಸೈಕಲ್‍ಗೆ ಡಿಕ್ಕಿ ಹೊಡೆದು, ಅನಂತರ ನವೀನ್ ಮೇಲೆ ಹರಿದು ರಸ್ತೆಗೆ ಅಡ್ಡಲಾಗಿ ನಿಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತುಮಕೂರು ಮಧುಗಿರಿಯ ಕೆಶಿಪ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ತಿರುವುಗಳನ್ನು ನಿರ್ಮಿಸಿರುವುದರಿಂದ ವರ್ಷಗಳಿಂದ ವರ್ಷಗಳಿಗೆ ಅಪಘಾತಗಳ ಸಂಖ್ಯೆ ಹೆಚ್ಚಿ ವಾಹನ ಸವಾರರ ಸಾವಿನ ಸಂಖ್ಯೆಯು ದಿನೆ ದಿನೆ ಏರುತ್ತಿದ್ದು, ಇಂತಹ ರಸ್ತೆಯಿಂದಾಗಿ ಮನುಷ್ಯನ ಜೀವಕ್ಕೆ ಭದ್ರತೆಯೆ ಇಲ್ಲ್ಲದಂತಾಗಿದೆ.

   ರಸ್ತೆಯ ನಿರ್ಮಾಣದ ಹೊಣೆ ಹೊತ್ತಿರುವ ಸದ್ಭವ್ ಕಂಪನಿಯವರು ಒಳ್ಳೆಯ ರಸ್ತೆಯನ್ನು ನಿರ್ಮಿಸಿದ್ದೇವೆಂದು ಬೀಗುತ್ತಿದ್ದಾರೆ. ಆದರೆ ಅಪಘಾತಕ್ಕೆ ಒಳಗಾದವರ ಪರಿಸ್ಥಿತಿಯ ಬಗ್ಗೆ ಒಮ್ಮೆಯು ತಲೆ ಕೆಡಿಸಿಕೊಂಡಿಲ್ಲ. ಇದೇ ರಸ್ತೆಯಲ್ಲಿ ನಡೆದ ಅಪಘಾತಗಳಿಂದಾಗಿ ಕೈ ಕಾಲು ಮುರಿದು ಕೊಂಡು ಮನೆ ಸೇರಿರುವವರದು ಒಂದು ಪರಿಸ್ಥಿತಿಯಾದರೆ, ಅಪಘಾತಗಳಲ್ಲಿ ಮರಣ ಹೊಂದಿದವರ ಕುಟುಂಬದವರ ಸ್ಥಿತಿ ಬೇರೆಯೆ ಇದ್ದು, ವಾಹನ ಸವಾರರಿಗೆ ಪರಲೋಕÀ ದರ್ಶಿಸುವ ದಾರಿಯಾಗಿ ಪರಿಣಮಿಸಿದೆ.

    ರಸ್ತೆಯಲ್ಲಿ ಸಾವಿರಾರು ಜನ ಜಮಾವಣೆಯಾಗಿ ನವೀನ್ ಶವ ನೋಡಲು ನೂರಾರು ಗ್ರಾಮಸ್ಥರು ರಸ್ತೆಯಲ್ಲಿ ನಿಂತಿದ್ದು ಅಪಘಾತಕ್ಕೆ ಕಾರಣವಾದರ ವಿರುದ್ಧ ಕೆಲ ಹೊತ್ತು ಹರಿಹಾಯ್ದರು. ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿ, ರಸ್ತೆಗೆ ಅಡ್ಡಲಾಗಿ ಸುಮಾರು ಮೂರು ಗಂಟೆಗಳ ಕಾಲ ನಿಂತಿದ್ದ ಲಾರಿಯನ್ನು ಕ್ರೇನ್ ಮೂಲಕ ಎಳೆದು ರಸ್ತೆಯಲ್ಲಿ ನಿಂತಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

     ಅವೈಜ್ಞಾನಿಕ ರಸ್ತೆಯ ತಿರುವಿನಿಂದ ಆಗ ಬಾರದ ಅನಾಹುತಗಳು ಸಂಭವಿಸುತ್ತಲೆ ಇವೆ. ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡು ಈ ಬಡ ಕುಟುಂಬ ಈಗ ಅನಾಥವಾಗಿದೆ. ಹರಿಹರ ರೊಪ್ಪದಿಂದ ಹಿಡಿದು ಕಾಟಗಾನಹಟ್ಟಿಯ ಗೇಟ್‍ವರೆವಿಗೂ ಅನೇಕ ರೀತಿಯ ಗಂಭೀರವಾದಂತಹ ಅದೆಷ್ಟೊ ದುರ್ಘಟನೆಗಳು ನಡೆದು ಹೋಗಿವೆ.

     ಹರಿಹರ ರೊಪ್ಪದ ಕ್ರಾಸ್ ಬಳಿ ನಿರ್ಮಿಸಿರುವ ರಸ್ತೆಯಲ್ಲಿ ಸುಮಾರು ಅರ್ಧ ಕಿಲೋ ಮೀಟರ್‍ನಷ್ಟು ಡಾಂಬರ್ ತುಂಬಾ ನುಣುಪಾಗಿದೆ. ಇಲ್ಲಿನ ವಾಹನಗಳು ಬ್ರೇಕ್ ಹಾಕಿದರೂ ನಿಲ್ಲುವ ಸ್ಥಿತಿಯಲ್ಲಿ ಇರುವುದಿಲ್ಲ. ಸಾಲು ಮರದ ತಿಮ್ಮಕ್ಕನ ಉದ್ಯಾನದ ಮುಂಭಾಗದ ಇದೇ ರಸ್ತೆಯು ಸರಿಯಾಗಿಲ್ಲ. ಕಾಟಗಾನ ಹಟ್ಟಿ ಗೇಟ್ ಬಳಿಯಲ್ಲಿ ಬರುವಾಗ ಬಹಳ ಕಿರಿಕಿರಿ ಯಾಗುತ್ತಿದೆ ಎಂಬುದು ವಾಹನ ಚಾಲಕರ ಆರೋಪ.

     ಕೆಶಿಪ್‍ನವರು ರಸ್ತೆ ಸುರಕ್ಷತೆಯ ಬಗ್ಗೆ ಅಷ್ಟೇನೂ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಅಪಘಾತ ವಲಯಗಳನ್ನು ಸರಿಯಾಗಿ ಗುರುತಿಸಿಲ್ಲ. ವಾಹನಗಳಿಂದ ಬಿದ್ದು ಪೆಟ್ಟಾದವರ ಸ್ಥಿತಿ ಡೋಲಾಯಮಾನವಾಗಿದ್ದು, ಪ್ರತಿಯೊಂದಕ್ಕೂ ಪೊಲೀಸರೆ ಈ ರಸ್ತೆಯಲ್ಲಿ ಶ್ರೀ ರಕ್ಷೆಯಾಗಿದ್ದಾರೆ. ಅವರು ಇಲ್ಲ್ಲವಾದರೆ ದೇವರೆ ಗತಿ.

     ರಸ್ತೆಯಲ್ಲಿ ಅಪಘಾತವಾದರೆ ಪೊಲೀಸ್ ಇಲಾಖೆಯವರು ಬಂದು ಅಪಘಾತಕ್ಕೆ ಒಳಗಾದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸುವವರೆವಿಗೂ ಸುಮಾರು ಗಂಟೆಗಳ ಕಾಲ ಇತರ ವಾಹನಗಳು ಹಾಗೂ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು ಕಾಯಲೆ ಬೇಕಾದ ಅನಿವಾರ್ಯತೆ ಇದೆ.

    ಗ್ರಾಮಸ್ಥ ಸಿದ್ದಲಿಂಗಮೂರ್ತಿ ಮಾತನಾಡಿ, ಈ ರಸ್ತೆಯ ಸಮೀಪವೆ ಹಾಲಿನ ಡೈರಿ, ಶುದ್ಧ ನೀರಿನ ಘಟಕ ಹಾಗೂ ಶಾಲೆ ಇದೆ. ಇದೇ ರಸ್ತೆಯಲ್ಲಿರುವ ಈ ಅಪಾಯಕಾರಿ ತಿರುವಿನಿಂದಾಗಿ 2017 ರಿಂದ ಗ್ರಾಮದಲ್ಲಿ ಸುಮಾರು 30 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಇಡೀ ರಸ್ತೆಯ ಉದ್ದಗಲಕ್ಕೂ ಎಷ್ಟು ಅಪಘಾತಗಳು ಸಂಭವಿಸಿವೆ ಎಂಬುದರ ಬಗ್ಗೆ ಮಾಹಿತಿಯೆ ಇಲ್ಲ. ಅನೇಕ ವಾಹನ ಸವಾರರು ಹಾಗೂ ಗ್ರಾಮಸ್ಥರು ಮೃತಪಟ್ಟಿದ್ದಾರೆ. ಹಲವಾರು ಬಾರಿ ರಸ್ತೆ ತಿರುವನ್ನು ಸರಿಪಡಿಸುವಂತೆ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.

     ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ಸದ್ಬವ್ ಕಂಪನಿಯವರಿಗೆ ಮನವಿ ಮಾಡಿದ್ದರೂ, ಇದೂವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತುರ್ತಾಗಿ ರಸ್ತೆಯಲ್ಲಿನ ಅವೈಜ್ಞಾನಿಕ ತಿರುವನ್ನು ಸರಿ ಪಡಿಸದೆ ಹೋದರೆ ಸಂಬಂಧಿಸಿದವರ ವಿರುದ್ಧ ಮತ್ತೆ ಉಗ್ರ ಹೋರಾಟ ನಡೆಸದೆ ವಿಧಿಯಿಲ್ಲ ಎಂದು ಎಚ್ಚರಿಸಿದ್ದಾರೆ.

 

Recent Articles

spot_img

Related Stories

Share via
Copy link