ಪಾಲಿಕೆಯಿಂದ ಈವರೆಗೆ ನಗರದಲ್ಲಿ 38 ನಾಯಿಗಳಿಗೆ ಎಬಿಸಿ

ತುಮಕೂರು

   ತುಮಕೂರು ಮಹಾನಗರ ಪಾಲಿಕೆಯು ನಗರದಲ್ಲಿರುವ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಜ.3 ರಂದು ಕಾರ್ಯಾಚರಣೆ ಆರಂಭಿಸಿದ್ದು, ಅಂದಿನಿಂದ ಜ.9 ರವರೆಗೆ ಒಟ್ಟು 38 ಬೀದಿನಾಯಿಗಳನ್ನು ಹಿಡಿದೊಯ್ದು ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಮಾಡಲಾಗಿದೆ.

    ಬೀದಿನಾಯಿಯನ್ನು ಅವುಗಳಿಗೆ ಹಾನಿಯಾಗದ ರೀತಿಯಲ್ಲಿ ಹಿಡಿದು, ವಾಹನದಲ್ಲಿ ಅವುಗಳನ್ನು ನಿರ್ದಿಷ್ಟ ಸ್ಥಳಕ್ಕೆ ಸಾಗಿಸಿ, ಅಲ್ಲಿ ಎಬಿಸಿ ಮಾಡಿ, ಬಳಿಕ ಆರೈಕೆ ಮಾಡಿ, ಲಸಿಕೆ ಹಾಕಿ, ಅವುಗಳನ್ನು ಪುನಃ ಅವುಗಳಿದ್ದ ಪ್ರದೇಶಕ್ಕೇ ತಂದು ಬಿಡುವ ಪ್ರಕ್ರಿಯೆಯ ಗುತ್ತಿಗೆಯನ್ನು ಬೆಂಗಳೂರು ಮೂಲದ ಚೇತಕ್ ಅನಿಮಲ್ ವೆಲ್‍ಫೇರ್ ಟ್ರಸ್ಟ್ ಎಂಬ ಖಾಸಗಿ ಸಂಸ್ಥೆಯು ಪಡೆದುಕೊಂಡಿದೆ. ಆ ಸಂಸ್ಥೆಯು ಪ್ರಸ್ತುತ ಪಾಲಿಕೆಯ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಸುತ್ತಿದೆ.

   ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರ ದೂರುಗಳನ್ನು ಆಧರಿಸಿ ಈ ಸಂಸ್ಥೆಯು ನಗರದ 11, 12, 19, 33 ಮೊದಲಾದ ವಾರ್ಡ್‍ಗಳಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಇವೆಲ್ಲ ಸ್ಥಳಗಳಿಂದ ಒಟ್ಟು 38 ಬೀದಿನಾಯಿಗಳನ್ನು ಈವರೆಗೆ ಹಿಡಿಯಲಾಗಿದೆ. ಇವುಗಳನ್ನು ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಆ ಟ್ರಸ್ಟ್ ಹೊಂದಿರುವ ಕಟ್ಟಡಕ್ಕೆ ಒಯ್ಯಲಾಗಿದೆ. ಅಲ್ಲಿ ಪಶುವೈದ್ಯಾಧಿಕಾರಿಗಳು ಇವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಿದ್ದಾರೆ. ಬಳಿಕ ಅವುಗಳ ಮೇಲೆ ನಿಗಾ ಇರಿಸಿ, ಆರೈಕೆ ಮಾಡಲಾಗಿದೆ. ಅವೆಲ್ಲಕ್ಕೂ ಹುಚ್ಚು ನಿರೋಧಕ ಲಸಿಕೆ (ಎಆರ್‍ವಿ -ಆಂಟಿ ರೇಬಿಸ್ ವ್ಯಾಕ್ಸಿನ್) ಹಾಕಲಾಗಿದೆ. ಇವುಗಳ ಆರೋಗ್ಯ ಗಮನಿಸಿ, ಅವುಗಳನ್ನು ಎಲ್ಲಿಂದ ಹಿಡಿದು ತರಲಾಗಿತ್ತೋ ಅದೇ ಪ್ರದೇಶದಲ್ಲಿ ಸದರಿ ಟ್ರಸ್ಟ್‍ನವರು ಬಿಡುಗಡೆ ಮಾಡುವರು ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್ ತಿಳಿಸಿದ್ದಾರೆ.

    ಎಬಿಸಿ ಮಾಡುವ ಹೊತ್ತಿನಲ್ಲೇ ಸದರಿ ನಾಯಿಗಳಿಗೆ ಆ ಟ್ರಸ್ಟ್‍ನವರು ಒಂದು ಗುರುತು ಮಾಡಿರುತ್ತಾರೆ. ಇದರಿಂದ ಈ ನಾಯಿಗಳನ್ನು ನೋಡಿದೊಡನೆ ಎಬಿಸಿ ಆಗಿರುವುದು ಗೊತ್ತಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ನಾಯಿಗಳನ್ನು ಮತ್ತೊಮ್ಮೆ ಹಿಡಿಯುವುದು ತಪ್ಪುತ್ತದೆ ಎಂದರು.

ಮಾಸಿಕ 500 ಎಬಿಸಿ ಗುರಿ

     ಒಂದು ತಿಂಗಳಿಗೆ ಕನಿಷ್ಟ 500 ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಎಬಿಸಿ ಮಾಡಿಸುವ ಗುರಿಯನ್ನು ನೀಡಲಾಗಿದೆ. ಈ ಪ್ರಕ್ರಿಯೆಗಾಗಿ ಒಂದು ನಾಯಿಗೆ 1,200 ರೂ. ಶುಲ್ಕವನ್ನು ಸದರಿ ಸಂಸ್ಥೆಗೆ ನೀಡಲಾಗುವುದು. ಇಂತಹುದೊಂದು ಪ್ರಕ್ರಿಯೆಗೆ ಪಶುವೈದ್ಯ ಇಲಾಖೆಯು 1,400 ರೂ.ಗಳ ವೆಚ್ಚವನ್ನು ಅಂದಾಜಿಸಿತ್ತು. ಅದಕ್ಕಿಂತ ಕಡಿಮೆ ದರಕ್ಕೆ ಈ ಪ್ರಕ್ರಿಯೆಯನ್ನು ಟ್ರಸ್ಟ್ ನಡೆಸುತ್ತಿದೆ. ಕೋರ್ಟ್ ನಿರ್ದೇಶನದಂತೆ ವೈಜ್ಞಾನಿಕವಾಗಿ ಇವೆಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಬೀದಿನಾಯಿಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬೆಂಗಳೂರು ಮಹಾನಗರ ಬಿಟ್ಟರೆ, ತುಮಕೂರು ನಗರದಲ್ಲಿ ಮಾತ್ರ ಇಂತಹ ವ್ಯವಸ್ಥಿತ ಹಾಗೂ ವೈಜ್ಞಾನಿಕ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ದೂರು ಸಲ್ಲಿಸಬಹುದು

    ಬೀದಿನಾಯಿಗಳಿದ್ದರೆ ಅಥವಾ ಹುಚ್ಚು ನಾಯಿಯನ್ನು ಕಂಡರೆ ಸಾರ್ವಜನಿಕರು ತಕ್ಷಣವೇ ಮಹಾನಗರ ಪಾಲಿಕೆಯ ಕಂಟ್ರೋಲ್ ರೂಂಗೆ ದೂರು ಸಲ್ಲಿಸಬಹುದು. ಆಗ ಪಾಲಿಕೆಯಿಂದ ಸದರಿ ಟ್ರಸ್ಟ್‍ನವರಿಗೆ ಮಾಹಿತಿ ರವಾನೆಗೊಂಡು, ಟ್ರಸ್ಟ್‍ನವರು ಸ್ಥಳಕ್ಕಾಗಮಿಸುವರು. ಇದಲ್ಲದೆ ಸಾರ್ವಜನಿಕರು ಸದರಿ ಚೇತಕ್ ಅನಿಮಲ್ ವೆಲ್‍ಫೇರ್ ಟ್ರಸ್ಟ್ (ಮೊಬೈಲ್ ಸಂಖ್ಯೆ: 9900107502)ಗೂ ನೇರವಾಗಿ ದೂರು ಸಲ್ಲಿಸಬಹುದು ಎಂದು ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link