ತುಮಕೂರು
ವಿಶೇಷ ವರದಿ :ರಾಕೇಶ್.ವಿ.
ತುಮಕೂರು ನಗರದಲ್ಲಿ ಆಯ್ದ ವಾರ್ಡುಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳಿಂದ ಜನರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎನ್ನುವುದಕ್ಕಿಂತ ಸಮಸ್ಯೆಗಳೇ ಹೆಚ್ಚಾಗಿ ಕಾಣತೊಡಗಿವೆ.
ವಿವಿಧ ಕಾಮಗಾರಿಗಳ ಪೈಕಿ ರಸ್ತೆ ಅಭಿವೃದ್ಧಿಗೆ ಮೊದಲು ರೂಪಿಸಿದ್ದ ಯೋಜನೆಯೇ ಬೇರೆ ಇದೀಗ ನಡೆಯುತ್ತಿರುವ ಕೆಲಸಗಳೇ ಬೇರೆ. ಸ್ಮಾರ್ಟ್ ಸಿಟಿ ಆಯ್ಕೆಯಾದ ನಂತರ ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸಲಾಯಿತು. ಆಗ ಕೆಲವು ಸಲಹೆಗಳನ್ನು ಪಡೆಯಲಾಯಿತು. ಆದರೆ ಕಾಮಗಾರಿಗಳು ಆರಂಭವಾಗುತ್ತಿದ್ದಂತೆ ಕ್ರಿಯಾಯೋಜನೆಗಳ ರೂಪು ರೇಷೆ ಬದಲಾಗುತ್ತಾ ಬಂದಿದೆ.
ಬಹುಕೋಟಿ ರೂಗಳ ವೆಚ್ಚದಲ್ಲಿ ಈ ಕಾಮಗಾರಿಗಳು ನಡೆಯುತ್ತಿದ್ದು, ಅದರಲ್ಲಿ ಪ್ರಮುಖವಾಗಿ ರಸ್ತೆಯ ಪಕ್ಕದಲ್ಲಿ ನಿರ್ಮಾಣ ಮಾಡಲಾದ ಯುಟಿಲಿಟಿ ಚೇಂಬರ್ಗಳದ್ದೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಸಾರ್ವಜನಿಕರು ನಿತ್ಯ ಒಂದಲ್ಲಾ ಒಂದು ಕಿರುಕುಳ ಅನುಭವಿಸುತ್ತಾ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಪತ್ರಿಕೆಯಲ್ಲಿಯೂ ಕಾಮಗಾರಿಗಳ ಸಮಸ್ಯೆ ಮತ್ತು ವೈಫಲ್ಯಗಳ ಬಗ್ಗೆ ಪ್ರಕಟಿಸುತ್ತಾ ಬರಲಾಗಿದೆ. ಇದಕ್ಕೆ ಪೂರಕವಾಗಿ ಹಾಲಿ, ಮಾಜಿ ಶಾಸಕರು, ಸಚಿವರು, ಸಂಸದರು ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ.
ಇತ್ತೀಚೆಗೆ ವಿವಿಧ ಸ್ಥಳಗಳಲ್ಲಿ ಸಂಸದರು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದರು. ಆ ವೇಳೆ ಆಯಾ ಸಂಬಂಧಿತ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪೂರಕ ದಾಖಲೆಗಳನ್ನು ನೀಡುವಂತೆ ಕೋರಿದರೂ ದಾಖಲೆಗಳನ್ನು ನೀಡಿರಲಿಲ್ಲ. ಕೇಳಲಾದ ಮಾಹಿತಿಯನ್ನು ಕೂಡ ಸೂಕ್ತವಾಗಿ ನೀಡಲಾಗಲಿಲ್ಲ. ಕೆಲ ದಿನಗಳ ಗಡುವು ನೀಡಲು ಕೋರಲಾಗಿತ್ತು. ಉದಾಹರಣೆಗೆ ಅಮಾನಿಕೆರೆ ಏರಿಯ ಮೇಲೆ ಮಾಡಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದಾಗ ಅದಕ್ಕೆ ಸರಿಯಾಗಿ ಉತ್ತರ ನೀಡಲಾಗದೆ ಸಮಯ ಕೋರಿದ್ದರು.
ಅದಾದ ಬಳಿಕ ಸ್ಮಾರ್ಟ್ ಸಿಟಿ ಕಚೇರಿಯಲ್ಲಿಯೇ ವಿವಿಧ ಇಲಾಖಾಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಂಸದರು ಹಾಗೂ ಶಾಸಕರು ಸಭೆ ನಡೆಸಿದರು. ಅಂದಿನ ಸಭೆಯಲ್ಲಿ ಪ್ರಮುಖವಾಗಿ ಬೆಸ್ಕಾಂ ಇಲಾಖೆ ಹಾಗೂ ಸ್ಮಾರ್ಟ್ ಸಿಟಿ ಕಂಪನಿಯ ನಡುವಿನ ಸಮನ್ವಯತೆ ಕೊರತೆ ಎದ್ದು ಕಾಣುತ್ತಿತ್ತು. ಒಮ್ಮೆ ಸ್ಮಾರ್ಟ್ ಸಿಟಿ ಕಂಪನಿಯವರು ಒಂದು ರೀತಿಯಲ್ಲಿ ಹೇಳಿದರೆ ಬೆಸ್ಕಾಂ ಇಲಾಖೆಯವರು ಒಂದು ರೀತಿಯಲ್ಲಿ ಹೇಳಿದರು. ಈ ಸಮಸ್ಯೆಗೆ ಸಂಬಂಧಿಸಿದಂತೆ ಈವರೆಗೂ ಸ್ಪಷ್ಟ ಚಿತ್ರಣ ಕಂಡುಬಂದಿಲ್ಲ. ಮಾಹಿತಿಯನ್ನೂ ನೀಡಿಲ್ಲ. ಇದರಿಂದಾಗಿ ಗೊಂದಲಗಳು ಮುಂದುವರೆದಿವೆ.
ಬುಗುಡನಹಳ್ಳಿ ಕೆರೆಯ ಅಭಿವೃದ್ಧಿ ಬಗ್ಗೆ ಕೆರೆಯ ಅಂಗಳದಲ್ಲಿಯೇ ಸಭೆಯನ್ನು ಕರೆಯಲಾಗಿತ್ತು. ಅಂದು ಮಹಾನಗರ ಪಾಲಿಕೆಯ ಮಾಹಿತಿ ಒಂದು ರೀತಿಯಿದ್ದರೆ, ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್ಗಳ ಮಾಹಿತಿ ಒಂದು ರೀತಿಯಲ್ಲಿತ್ತು. ಜೊತೆಗೆ ಸ್ಮಾರ್ಟ್ ಸಿಟಿ ಎಂಜಿನಿಯರ್ಗಳ ಮಾಹಿತಿ ಮತ್ತೊಂದು ರೀತಿ ಇತ್ತು. ಇಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಇರುವುದನ್ನು ಮನಗಂಡ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಮೂರು ಇಲಾಖೆಗಳು ಒಟ್ಟಿಗೆ ಸೇರಿಕೊಂಡು ಜಂಟಿ ಸರ್ವೇ ಮಾಡುವಂತೆ ಸೂಚನೆ ನೀಡಲಾಗಿತ್ತು.
ಈ ಸಭೆಗಳ ಬಳಿಕ ಪತ್ರಿಕೆಯಲ್ಲಿನ ವರದಿಗಳನ್ನು ಗಮನಿಸಿದ ಮಾಜಿ ಜನಪ್ರತಿನಿಧಿಯೊಬ್ಬರು ಸ್ಮಾರ್ಟ್ ಸಿಟಿ ಇಲಾಖೆಯ ಅಧಿಕಾರಿಗಳ ವಿರುದ್ಧ, ಕಾಮಗಾರಿಗಳ ವಿರುದ್ಧ ಕಿಡಿಕಾರಿದ್ದರು. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿಯ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಸಾಕ್ಷಿಯೆಂಬಂತೆ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಎಂಡಿ ಆಗಿದ್ದಂತಹ ಟಿ.ಭೂಬಾಲನ್ ಅವರು ಪ್ರಾಥಮಿಕವಾಗಿ ಹಲವು ಗುತ್ತಿಗೆದಾರರಿಗೆ ಲಕ್ಷಾಂತರ ರೂಗಳ ದಂಢವನ್ನು ವಿಧಿಸಿದ್ದನ್ನು ಗಮನಿಸಿದರೆ ಇಲ್ಲಿ ಕಾಮಗಾರಿಗಳು ಕಳಪೆ ಹಾಗೂ ಭ್ರಷ್ಟಾಚಾರದಿಂದ ಕೂಡಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂಬುದಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುವ ಮೂಲಕ ಒತ್ತಾಯಿಸಿದ್ದರು.
ಸ್ಮಾರ್ಟ್ ಸಿಟಿ ನಿಯಮಾವಳಿ ಅನ್ವಯ ಕಾಮಗಾರಿಗಳ ಮೇಲ್ವಿಚಾರಣೆ ನಡೆಯುತ್ತಿಲ್ಲ. ನಗರದ ಸ್ಮಾರ್ಟ್ ಸಿಟಿ ಯೋಜನೆ ತ್ಯಾಪೆ ಹಾಕಿದಂತಾಗಿದೆ. ಯು.ಜಿ.ಡಿ. ಹಾಗೂ 24*7 ಕುಡಿಯುವ ನೀರು ಸರಬರಾಜು ಯೋಜನೆ, ಬುಗುಡನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಭ್ರಷ್ಟಾಚಾರದ ವಾಸನೆ ತೀವ್ರವಾಗಿದೆ. ತುಮಕೂರು ನಗರ ಧೂಳುಮಯವಾಗಿದೆ. ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಜಾಸ್ತಿಯಾಗುತ್ತಿದ್ದಾರೆ. ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ.
ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ವಯಸ್ಸಾದವರು, ಮಹಿಳೆಯರು ಮಕ್ಕಳು ಓಡಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಕಾಮಗಾರಿಗಳ ಸೋಷಿಯಲ್ ಆಡಿಟ್ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯುವಂತಾಗಬೇಕು. ಚೇಂಬರುಗಳ ನಿರ್ಮಾಣ ಸರಿ ಇಲ್ಲ. ಕೆಲವು ರಸ್ತೆ ಮಟ್ಟದಿಂದ ಅರ್ಧ ಅಡಿ ಮೇಲಿ ಇವೆ.
ಇದರ ಸುತ್ತಲಿನ ಮಣ್ಣು ಕುಸಿಯುತ್ತಿದೆ. ಮಹಾತ್ಮ ಗಾಂಧೀ ಕ್ರೀಡಾಂಗಣ ಒಡೆಯಬಾರದಿತ್ತು, ಅದನ್ನು ಉಳಿಸಿಕೊಂಡು ಬೇರೆ ಕಡೆ 20 ಎಕರೆ ಜಾಗ ಖರೀದಿಸಿ ಎಲ್ಲಾ ಕ್ರೀಡೆಗಳಿಗೆ ಅವಕಾಶ ಕಲ್ಪಿಸಬಹುದಿತ್ತು. ತುಮಕೂರು ಅಮಾನಿಕೆರೆಯ ಏರಿ ದುರಸ್ಥಿ ಪೂರ್ಣ ಕಳಪೆಯಾಗಿದೆ. ಕೆರೆಯ ಮಣ್ಣು ಉಪಯೋಗಿಸಿ ಏರಿ ಮಾಡುತ್ತಿರುವುದರಿಂದ ಮಣ್ಣಿನ ಬಿಗಿತ ಇಲ್ಲದಂತಾಗಿದೆ. ರಿವಿಟ್ಮೆಂಟ್ ಸರಿ ಇಲ್ಲ. ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದೆ ಎಂದೆಲ್ಲಾ ಆರೋಪಗಳ ಸುರಿಮಳೆಗೈದಿದ್ದರು.
ಇದಾದ ಬಳಿಕ ಒಬ್ಬರ ನಂತರ ಒಬ್ಬರು ಹೀಗೆ ಹಾಲಿ ಮಾಜಿ ಶಾಸಕರಿಬ್ಬರು ಪತ್ರಿಕಾಗೋಷ್ಠಿಗಳನ್ನು ನಡೆಸಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸ್ಮಾರ್ಟ್ ಸಿಟಿಯ ಚೇಂಬರ್ ಕಾಮಗಾರಿಗಳಿಂದ ಬಹುತೇಕ ಸಮಸ್ಯೆಗಳು ಎದ್ದು ಕಾಣುತ್ತಿವೆ. ಈ ಕಾರಣಕ್ಕಾಗಿ ಮುಂದೆ ಚೇಂಬರ್ಗಳನ್ನು ಮಾಡದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಹಲವು ಕಾಮಗಾರಿಗಳು ತುಮಕೂರಿನ ಜನರಿಗೆ ಅನಾವಶ್ಯಕವಾಗಿದ್ದಂತಹ ಕಾಮಗಾರಿ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರಲ್ಲಿ ಬಹುತೇಕ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮ್ಮದ್ರವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆಯುತ್ತವೆ ಎಂದು ಭಾವಿಸಿದ್ದೆವು. ಆದರೆ ಇಂದು ನಡೆಯುತ್ತಿರುವ ಎಲ್ಲಾ ಕಾಮಗಾರಿಗಳಿಂದ ಸಮಸ್ಯೆಗಳು ಎದ್ದು ಕಾಣುತ್ತಿದ್ದು, ಈ ಬಗ್ಗೆ ಮುಂದಾಲೋಚನೆ ಮಾಡಿ ಕಾಮಗಾರಿಗಳನ್ನು ಮಾಡಬೇಕಿತ್ತು. ಅಲ್ಲಿರುವ ಅಭಿಯಂತರರು ಯಾವ ಮುಂದಾಲೋಚನೆ ಇಲ್ಲದೆ ಅದ್ಹೇಗೆ ಕಾಮಗಾರಿ ಮಾಡುತ್ತಾರೆ? ಒಂದು ರಸ್ತೆಯನ್ನು ಸರಿಪಡಿಸಬೇಕಾದರೆ ಅದಕ್ಕೆ ಲಿಂಕ್ ರಸ್ತೆಯಲ್ಲಿ ಜನರಿಗೆ ಓಡಾಡಲು ಅನುಕೂಲ ಮಾಡಬೇಕು. ಅದ್ಯಾವುದು ಮಾಡದೇ ರಸ್ತೆಯ ಕಾಮಗಾರಿ ಮಾಡುತ್ತೇವೆ ಎಂದು ಹೇಳಿ ಯದ್ವಾ ತದ್ವಾ ಹಳ್ಳಗಳನ್ನು ಕೊರೆದು ಇದ್ದ ರಸ್ತೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಹಾಲಿ ಮಾಜಿ ಶಾಸಕರ ಪತ್ರಿಕಾಗೋಷ್ಠಿಗಳ ನಂತರ ಸಂಸದ ಜಿ.ಎಸ್ಬಸವರಾಜು ಅವರು ಕೂಡ ಪತ್ರಿಕಾಗೋಷ್ಠಿ ನಡೆಸಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಸ್ಮಾರ್ಟ್ ಸಿಟಿ ಕಂಪನಿಗೆ ಚಂಡಿಗಡ, ಬಾಂಬೆ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಬಂದಂತಹ ಅಧಿಕಾರಿಗಳಿಗೆ ತುಮಕೂರು ನಗರದ ಬಗ್ಗೆ ಏನು ಮಾಹಿತಿ ಇರುತ್ತದೆ. ಸುಮ್ಮನೆ ಕ್ರಿಯಾಯೋಜನೆ ರೂಪಿಸಿ ಕೆಲಸ ಮಾಡಿ ಎಂದು ಹೇಳಿದರೆ ಹೇಗೆ..? ತುಮಕೂರು ಸ್ಮಾರ್ಟ್ಸಿಟಿ ಕಾಮಗಾರಿಗಳು ಇಷ್ಟೊಂದು ಹದಗೆಡಲು ಗೊತ್ತು ಗುರಿಯಿಲ್ಲದ ಎಸ್.ಪಿ.ವಿ. ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯೇ ಕಾರಣ. ಸ್ಥಳೀಯ ಜನಪ್ರತಿನಿಧಿಗಳ ಸಲಹೆ, ಸೂಚನೆಗಳನ್ನು ಸ್ವೀಕರಿಸದೆ, ಸರ್ವಾಧಿಕಾರಿ ಧೋರಣೆಯಿಂದ ಕೆಲಸ ಮಾಡಿದ್ದೇ, ಸ್ಮಾರ್ಟ್ಸಿಟಿ ಯೋಜನೆಯ ಕಾಮಗಾರಿಗಳ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಲು ಪ್ರಮುಖ ಕಾರಣ ಎಂದು ಆರೋಪಿಸಿದ್ದರು.
ಇದರ ನಡುವೆ ನಗರದ ಉಪ್ಪಾರಹಳ್ಳಿ ಮೇಲ್ಸೇತುವೆ ಪಕ್ಕದಲ್ಲಿ ಜೋಡಿಸಲಾಗಿದ್ದ ಪೈಪುಗಳಿಗೆ ಆಕಸ್ಮಿಕ ಬೆಂಕಿ ತಗುಲಿ, ಸುಮಾರು ನಾಲ್ಕು ಲೋಡ್ನಷ್ಟು ಪೈಪುಗಳು ನಷ್ಟವಾಗಿದ್ದವು. ಆದರೆ ಸ್ಮಾರ್ಟ್ ಸಿಟಿಯಿಂದಾಗಲಿ ಅಥವಾ ಯಾವೊಬ್ಬ ಜನಪ್ರತಿನಿಧಿಯಾಗಲೀ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿರಲಿಲ್ಲ. ಸುಮಾರು ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದರೂ ಅದರ ಬಗ್ಗೆ ಚಕಾರವೆತ್ತದೇ ಇರುವುದಕ್ಕೆ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಉಂಟಾಗಿದ್ದವು. ಇದಕ್ಕೆಲ್ಲಾ ಸ್ಮಾರ್ಟ್ ಸಿಟಿಯವರೇ ಉತ್ತರ ಕೊಡಬೇಕಿದೆ.