ಮೋದಿ, ಅಮಿತ್ ಷಾ ವಿರುದ್ದ ಮುಸ್ಲಿಂ ಸಮುದಾಯ ಪ್ರಬಲ ಹೋರಾಟಕ್ಕೆ ಮುಂದಾಗಬೇಕು : ಟಿ.ರಘುಮೂರ್ತಿ

ಚಳ್ಳಕೆರೆ

  ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರಲ್ಲಿ ಈ ನೆಲದಲ್ಲಿ ಜನ್ಮತಾಳಿದ ಮುಸ್ಲಿಂದ ಬಾಂಧವರೂ ಸಹ ಅಧಿಕ ಸಂಖ್ಯೆಯಲ್ಲಿದ್ದರು. ರಾಷ್ಟ್ರೀಯತೆಯ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಯಾರೂ ಸಹ ಅನುಮಾನ ಪಡುವ ವಿಚಾರವೇ ಇಲ್ಲ.

    ಅವರೂ ಸಹ ಈ ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ್ದು, ನೂರಾರು ವರ್ಷಗಳಿಂದ ಅನ್ಯೂನತೆಯಿಂದ ತಮ್ಮ ಬದುಕನ್ನು ಹಂಚಿಕೊಂಡ ಈ ಸಮುದಾಯವನ್ನು ದೂರವಿಡಲು ಸಂಚು ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಸಿಎಎ, ಎಚ್‍ಆರ್‍ಸಿ ಕಾಯ್ದೆ ಜಾರಿಯಾಗದಂತೆ ತಡೆಯುವ ಎಲ್ಲಾ ಹೋರಾಟಗಳಿಗೆ ನಾನು ಸದಾ ಸಂಪೂರ್ಣ ಬೆಂಬಲಿಸುತ್ತೇನೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮುಸ್ಲಿಂ ಸಮುದಾಯದ ಆತ್ಮಸ್ಥೈರ್ಯ ತುಂಬಿದರು.

     ಅವರು ಶುಕ್ರವಾರ ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಗರದ ಮುಸ್ಲಿಂ ಸಮಾಜ, ಪ್ರಗತಿಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಸಂಯುಕ್ತ ವೇದಿಕೆ ಹಮ್ಮಿಕೊಂಡಿದ್ದ ಪೌರಕಾಯ್ದೆ ವಿರುದ್ದ ನಡೆದ ಪ್ರತಿಭಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಷ್ಟ್ರದ ಇತಿಹಾಸದಲ್ಲಿ ಯಾವುದೇ ಸಂದರ್ಭದಲ್ಲೂ ಸಹ ಮುಸ್ಲಿಂ ಸಮುದಾಯ ದೇಶದ ಹಿತವನ್ನು ಬಯಸುವಲ್ಲಿ ಸದಾ ಮುಂದಿದೆ.

     ರಾಷ್ಟ್ರ ಧ್ವಜವನ್ನು ಹಿಡಿದು ಅಪ್ಪಟ ದೇಶ ಪ್ರೇಮಿಗಳಾದ ಇವರಿಗೆ ಕೇಂದ್ರ ಸರ್ಕಾರ ಕಾಯ್ದೆ ಜಾರಿ ಮೂಲಕ ತೊಂದರೆ ಕೊಡಲು ಹುನ್ನಾರ ನಡೆಸುತ್ತಿದ್ದು ಸಮುದಾಯ ಸಂಘಟನೆಯಿಂದ ಜಾಗೃತರಾಗಿ ಇಂತಹ ಶಕ್ತಿಗಳನ್ನು ಎದುರಿಸಬೇಕು. ಪ್ರಧಾನ ಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಮಂತ್ರಿ ಅಮಿತ್ ಷಾರವರ ನಿರ್ಧಾರವನ್ನು ಸಂಘಟನೆ ಬಲವಾಗಿ ವಿರೋಧಿಸಬೇಕೆಂದರು.

    ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಮನ್ಸೂರ್ ಖಾನ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರಸ್ಥಾನ ನಾಗಪೂರದಲ್ಲಿ ರಾಷ್ಟ್ರಧ್ವಜರೋಹಣಕ್ಕೆ ಅವಕಾಶ ನೀಡದ ಜನರಿಂದ ನಾವು ಪಾಠಕಲಿಯುವ ಅವಶ್ಯಕತೆ ಇಲ್ಲ. ಕಳೆದ ಹಲವಾರು ದಶಕಗಳಿಂದ ಈ ನೆಲದಲ್ಲಿ ಹಿಂದೂ ಮುಸ್ಲಿಂ ಬಂಧುಗಳು ಧರ್ಮ ಬೇರೆಯಾದರೂ ನಾವೆಲ್ಲರೂ ಒಂದೇ ದೇಶದ ಮಕ್ಕಳು ಎಂದು ಸಮಾನ ರೀತಿಯಿಂದ ಸಹಭಾಳ್ವೆಯನ್ನು ನಡೆಸುತ್ತಿದ್ದಾರೆ.

    ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಎಂದಿಗೂ ಸಹ ಇಂತಹ ಘೋರವಾದ ಕಾನೂನು ಜಾರಿಗೆ ತರಲು ಪ್ರಯತ್ನಿಸಿರಲಿಲ್ಲ. ಆದರೆ, ಪ್ರಧಾನ ಮಂತ್ರಿ ನರೇಂದ್ರಮೋದಿ, ಅಮಿತ್ ಷಾ ರಾಷ್ಟ್ರದ ಜನರ ಭಾವನೆಗೆ ವಿರುದ್ದವಾಗಿ ಇಂತಹ ಕಾನೂನು ತಂದು ಹಿಂದೂ- ಮುಸ್ಲಿಂ ಸಮುದಾಯದಲ್ಲಿ ವಿಷ ಬೀಜ ಬಿತ್ತುತ್ತಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

   ವಿಚಾರವಾದಿ, ದಲಿತ ಸಂಘಟನೆಗಳ ಅಗ್ರಗಣ್ಯನಾಯಕ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ, ರಾಷ್ಟ್ರದ ಸ್ವಾತಂತ್ರ್ಯದಲ್ಲಿ ಹೋರಾಟ ನಡೆಸಿದ ಹಲವಾರು ಸಮುದಾಯಗಳಲ್ಲಿ ಮುಸ್ಲಿಂ ಸಮುದಾಯ ಸಹ ಒಂದಾಗಿದ್ದು, ಈ ಸಮುದಾಯದ ಸಾವಿರಾರು ಸೈನಿಕರು ಯುದ್ದಲ್ಲಿ ಭಾಗವಹಿಸಿ ದೇಶಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮುಸ್ಲಿಂ ಸಮುದಾಯ ನೀಡಿದ ಕೊಡುಗೆಯನ್ನು ಕೇಂದ್ರ ಸರ್ಕಾರ ಮರೆತಿದೆ. ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳದ ನಾಯಕತ್ವ ಕೇಂದ್ರದಲ್ಲಿದ್ದು, ಇದರಿಂದ ಮುಂದಿನ ದಿನಗಳಲ್ಲೂ ಸಹ ಅಪಾಯ ಕಾದಿದೆ ಎಂದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕಳೆದ ಐದು ವರ್ಷಗಳ ಆಡಳಿತದಲ್ಲಿ ಸುಳ್ಳನ್ನೇ ಹೇಳಿ ರಾಷ್ಟ್ರವನ್ನಾಳಿದ ಈ ನಾಯಕರಿಗೆ ಜನರು ಬುದ್ದಿ ಕಲಿಸುವ ಹಂತ ತಲುಪಿದ್ದರು. ಲೋಕಸಭಾ ಚುನಾವಣೆ ಸಮೀಪದ ಸಂದರ್ಭದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ನರೇಂದ್ರಮೋದಿ, ಅಮಿತ್ ಷಾ ದೇಶದ ಮಹಿಳೆಯರ ಮತ್ತು ಯುವಕರ ಮನಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಮೋದಿಯವರ ಆಡಳಿತದಲ್ಲಿ ಸುಳ್ಳು ಹೇಳಿದ್ದೇ ಹೆಚ್ಚು ಇಂತಹ ಸಂದರ್ಭದಲ್ಲಿ ಈ ಕಾಯ್ದೆ ತರುವ ಮೂಲಕ ಎರಡೂ ಸಮುದಾಯಗಳಲ್ಲಿ ಅಸಮದಾನ ಮೂಡಲು ಇವರು ನೆರವಾಗಿದ್ದು, ಇಂತಹ ಕುಚೋದ್ಯಗಳಿಗೆ ಮುಸ್ಲಿಂ ಸಮುದಾಯ ಬಲಿಯಾಗಬಾರದು ಎಂದರು.

  ಪ್ರತಿಭಟನೆಯನ್ನು ಉದ್ದೇಶಿಸಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಎತ್ತಿನಹಟ್ಟಿ ಗೌಡ, ಉಪನ್ಯಾಸಕ ಅರುಣ್, ನಾಯಕನಹಟ್ಟಿ ಮೌಲಿ ಮೋಹಿದ್ದಿನ್, ಪಿಎಸ್‍ಡಿ ಬ್ಯಾಂಕ್ ಅಧ್ಯಕ್ಷ ಅನ್ವರ್ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ಜಿ.ವೀರೇಶ್, ಸಮರ್ಥರಾಯ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಸಿ.ಶ್ರೀನಿವಾಸ್, ವೈ.ಪ್ರಕಾಶ್, ಮಲ್ಲಿಕಾರ್ಜುನ, ವೀರಭದ್ರಪ್ಪ, ಚಳ್ಳಕೆರೆಯಪ್ಪ, ವಿರೂಪಾಕ್ಷಿ, ಹೊಯ್ಸಳಗೋವಿಂದ, ನಾಗವೇಣಮ್ಮ, ಸುಮಭರಮಣ್ಣ, ಆರ್.ಮಂಜುಳಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‍ಪೀರ್, ಫರೀದ್‍ಖಾನ್, ಆರ್.ಪ್ರಸನ್ನಕುಮಾರ್, ಅನ್ವರ್ ಮಾಸ್ಟರ್, ಎಸ್.ಮುಜೀಬುಲ್ಲಾ, ಸೈಯದ್, ಸೈಪುಲ್ಲಾ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link