ತುಮಕೂರು
ಇಂದು ಜಿಲ್ಲೆಯಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ರೈತ ಸಮಾವೇಶಕ್ಕೆ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ ನಿಗಾ ವಹಿಸಿಕೊಂಡು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.2 ರಂದು ನಡೆಯುವ ರೈತ ಸಮಾರಂಭದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಗುರುವಾರ 2 ಗಂಟೆ ಸುಮಾರಿಗೆ ತುಮಕೂರಿಗೆ ಆಗಮಿಸಲಿದ್ದಾರೆ. ಮೊದಲು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ. ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶ್ರೀಗಳನ್ನು ಭೇಟಿ ಮಾಡಿದ ಬಳಿಕ, ಶ್ರೀಮಠದ ಮಕ್ಕಳೊಂದಿಗೆ ಸಣ್ಣ ಸಂವಾದ ಮಾಡುತ್ತಾರೆ ಎಂದರು.
ಬಳಿಕ ಶ್ರೀಮಠದಲ್ಲಿ ವಸ್ತು ಸಂಗ್ರಹಾಲಯದ ಶಂಕುಸ್ಥಾಪನೆ ನೆರವೇರಿಸಿ, ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ ನಡೆಯುವ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದು, 32 ಮಂದಿ ಪ್ರಗತಿ ಪರ ರೈತರಿಗೆ ಕೃಷಿ ಕರ್ಮಣ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಅದರಲ್ಲಿ 16 ಮಹಿಳಾ ಪ್ರಗತಿಪರ ರೈತರು ಹಾಗೂ 16 ಪುರುಷರ ರೈತರು ಪ್ರಧಾನಿಯಿಂದ ಪ್ರಶಸ್ತಿ ಸ್ವೀಕರಿಸಲಿದ್ದು, ಪ್ರಧಾನಿಯವರು ರೈತರನ್ನುದ್ದೇಶಿಸಿ ಭಾಷಣ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ರೈತ ಸಮಾರಂಭದಲ್ಲಿ ರಾಜ್ಯದ ಮೂರು ಜನ ಪ್ರಗತಿಪರ ರೈತರು ಪ್ರಶಸ್ತಿ ಪಡೆಯಲಿದ್ದಾರೆ. ಇಂದು ಸಂಜೆಯೊಳಗೆ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಮಾರಂಭದಲ್ಲಿ ಮೂರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ 12 ರಾಜ್ಯದ ಕೃಷಿ ಸಚಿವರು ಭಾಗವಹಿಸುವ ನಿರೀಕ್ಷೆ ಇದೆ. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಎಸ್.ಆರ್.ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಸಂಸದ ಜಿ.ಎಸ್.ಬಸವರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ