ಹರಿಹರ:
ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಮ್ಮ ಸಮುದಾಯದ ಸಂಸದರು ಹಾಗೂ ಶಾಸಕರು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮನವಿ ಮಾಡುವುದಾಗಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ತಾಲೂಕಿನ ರಾಜನಹಳ್ಳಿಯ ಶ್ರೀವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ ಶಾಸಕರು, ಸಂಸದರು ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ನಾನು ಈ ಸಮಾಜಕ್ಕೆ ಅಣ್ಣನಾಗಿದ್ದು, ಜ.10ರ ಒಳಗಾಗಿ ರಾಜನಹಳ್ಳಿ ಶ್ರೀವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಭೇಟಿ ಮಾಡಿ, ಮೀಸಲಾತಿ ಹೆಚ್ಚಿಸುವಂತೆ ಮನವಿ ಸಹ ಮಾಡುತ್ತೇವೆ ಎಂದು ಹೇಳಿದರು.
ಒಂದು ವೇಳೆ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡದಿದ್ದರೆ, ಮುಂದೆ ನಮ್ಮ ಸಮುದಾಯದ ಶಾಸಕರು, ಸಂಸದರು ಕೈಗೊಳ್ಳುವ ಯಾವುದೇ ತೀರ್ಮಾನ, ನಿರ್ಧಾರಕ್ಕೆ ನಾನೂ ಬದ್ಧನಾಗಿರುತ್ತೇನೆ. ಈ ಬಗ್ಗೆ ರಾಗಿ ಕಾಳಿನಷ್ಟೂ ಅನುಮಾನ ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ವಾಲ್ಮೀಕಿ ಜಾತ್ರೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಮ್ಮ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುವ ವಿಚಾರದ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಸಮಾಜವು ಸಂಘಟನೆಯಾಗುತ್ತಿದೆ. ಮಠದ ಆವರಣದಲ್ಲಿ ಎರಡನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಮಾಡಲು ನಿರ್ಧರಿಸಿದ್ದು, ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ತಮಗೆ ಮತ್ತು ತಮ್ಮ ಸಮುದಾಯದಕ್ಕೆ ಮುಖ್ಯಮಂತ್ರಿಗಳ ಬಗ್ಗೆ ಅಪಾರವಾದ ನಂಬಿಕೆಯಿದ್ದು, ವಾಲ್ಮೀಕಿ ಜಾತ್ರೆಯಲ್ಲಿ ಪ್ರಸ್ತುತ ನೀಡುತ್ತಿರುವ ಶೇ.3.5ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಶಾಸಕ ಶಿವನಗೌಡ ಪಾಟೀಲ್ ಮಾತನಾಡಿ, ಮಠದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿದ್ದೇವೆ. ಇದುವರೆಗೂ ಮೀಸಲಾತಿಯನ್ನು ಹೆಚ್ಚಿಸದಿರುವುದರ ಬಗ್ಗೆ ಸಾಕಷ್ಟು ಬೇಸರವಿದೆ. ಶ್ರೀರಾಮುಲು ಅವರಿಗೆ ಮೀಸಲಾತಿ ವಿಚಾರವಾಗಿ ಪಕ್ಷಾತೀತವಾಗಿ ಬೆಂಬಲ ನೀಡಿದ್ದೇವೆ. ಸರ್ಕಾರದ ಜೊತೆ ಮಾತನಾಡಿ ಮೀಸಲಾತಿ ಬೇಡಿಕೆಯನ್ನು ಈಡೇಸುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಮೀಸಲಾತಿ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಸರ್ಕಾರ ಮೀಸಲಾತಿ ವಿಚಾರವಾಗಿ ವಿಳಂಬ ಮಾಡುತ್ತಿರುವುದು ಸಾಕಷ್ಟು ಬೇಸರ ತಂದಿದೆ. ಸರ್ಕಾರ ಈ ಬಗ್ಗೆ ಚರ್ಚೆ ಮಾಡಿ ವಾಲ್ಮೀಕಿ ಜಾತ್ರೆಯೊಳಗೆ ಮೀಸಲಾತಿ ಹೆಚ್ಚಳದ ಬಗ್ಗೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಸದ ದೇವೇಂದ್ರಪ್ಪ, ಶಾಸಕರುಗಳಾದ ಎಸ್.ವಿ.ರಾಮಚಂದ್ರಪ್ಪ, ಸೋಮಲಿಂಗಪ್ಪ, ಕಂಪ್ಲಿ ಗಣೇಶ್, ಪ್ರತಾಪ್‍ಗೌಡ ಪಾಟೀಲ್, ಟಿ.ರಘುಮೂರ್ತಿ, ಬಸವರಾಜ್ ದದ್ದಲ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಚ್.ಓಬಳಪ್ಪ, ಸಮಾಜದ ಮುಖಂಡ ಕಳ್ಳೇರ್ ಮಂಜುನಾಥ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ