ಪಾಲಿಕೆ ಕ್ರಮ: ಖಾಸಗಿ ಸಂಸ್ಥೆಯಿಂದ ನಗರದಲ್ಲಿ ಬೀದಿನಾಯಿ ಹಿಡಿವ ಕಾರ್ಯಾಚರಣೆಗೆ ಚಾಲನೆ

ತುಮಕೂರು
    ತುಮಕೂರು ನಗರದಲ್ಲಿ ದೀರ್ಘಕಾಲದಿಂದ ಕಾಡುತ್ತಿರುವ ಬೀದಿನಾಯಿಗಳ ಹಾವಳಿಯನ್ನು ನ್ಯಾಯಾಲಯದ ನಿರ್ದೇಶನಾನುಸಾರ ವೈಜ್ಞಾನಿಕವಾಗಿ ನಿಯಂತ್ರಿಸುವ ನವೀನ ಮಾದರಿಯ ಕಾರ್ಯಾಚರಣೆಗೆ ತುಮಕೂರು ಮಹಾನಗರ ಪಾಲಿಕೆಯು ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದೆ.
    ಚೇತಕ್ ಅನಿಮಲ್ ವೆಲ್‍ಫೇರ್ ಟ್ರಸ್ಟ್ ಎಂಬ ಖಾಸಗಿ ಸಂಸ್ಥೆಯು ಇದರ ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ಸಂಸ್ಥೆಯ ಸಿಬ್ಬಂದಿಗಳು ಪ್ರಸ್ತುತ ಬೀದಿನಾಯಿಗಳನ್ನು ಹಿಡಿದು, ನಿಗದಿತ ಸ್ಥಳದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ಆರೈಕೆ ಮಾಡಿ ಪುನಃ ಅವುಗಳು ಮೊದಲಿದ್ದ ಸ್ಥಳಕ್ಕೇ ತಂದು ಬಿಡುವ ಪ್ರಕ್ರಿಯೆಯನ್ನು ತುಮಕೂರು ನಗರದಲ್ಲಿ ಇನ್ನು ಮುಂದೆ ನಿರಂತರವಾಗಿ ನಡೆಸಲಿದ್ದಾರೆ. 
    ಪಾಲಿಕೆ ಕಚೇರಿಯ ಆರೋಗ್ಯ ಶಾಖೆಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಈ ಕಾರ್ಯಾಚರಣೆಯನ್ನು ಉದ್ಘಾಟಿಸಿದರು. ಪಾಲಿಕೆ ಸದಸ್ಯ ಜೆ.ಕುಮಾರ್, ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್‍ಗಳಾದ ಕೃಷ್ಣಮೂರ್ತಿ, ಮೃತ್ಯುಂಜಯ ಹಾಗೂ ಆರೋಗ್ಯ ನಿರೀಕ್ಷಕರುಗಳು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
    ಸಾರ್ವಜನಿಕರ ದೂರು ಇನ್ನು ಮುಂದೆ ಬರದಷ್ಟು ಸಮರ್ಪಕವಾಗಿ ಬೀದಿನಾಯಿ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಬೇಕು. ಒಟ್ಟಾರೆ ನಗರದಲ್ಲಿ ಬೀದಿನಾಯಿ ಹಾವಳಿ ನಿಯಂತ್ರಿಸಲ್ಪಡಬೇಕು ಎಂದು ಸೈಯದ್ ನಯಾಜ್ ಮತ್ತು ಜೆ.ಕುಮಾರ್ ಆಶಿಸಿದರು. 
ವಾಹನ, ಸಿಬ್ಬಂದಿ, ಬಲೆ
     ಬೀದಿನಾಯಿಗಳನ್ನು ಹಿಡಿಯಲೆಂದೇ ಈ ಖಾಸಗಿ ಸಂಸ್ಥೆಯು ಒಂದು ವಾಹನವನ್ನು ಮೀಸಲಿರಿಸಿದೆ. ಚಾಲಕ ಸೇರಿ ಸಮವಸ್ತ್ರ ಧರಿಸಿರುವ ನಾಲ್ವರು ಸಿಬ್ಬಂದಿ ಇದರಲ್ಲಿರುತ್ತಾರೆ. ತುದಿಯಲ್ಲಿ ರಿಂಗ್ ಮಾದರಿ ಬಲೆಯನ್ನು ಅಳವಡಿಸಿರುವ ಕಬ್ಬಿಣದ ರಾಡ್‍ಗಳ ಮೂಲಕ ನಾಯಿಗೆ ಯಾವುದೇ ಹಾನಿ ಆಗದಂತೆ ಹಿಡಿದು ಅದನ್ನು ವಾಹನಕ್ಕೆ ಹಾಕಿಕೊಳ್ಳಲಾಗುವುದು. 
    ಬಳಿಕ ಈ ರೀತಿ ಹಿಡಿದ ನಾಯಿಗಳನ್ನು ತುಮಕೂರು ನಗರದ ಹೊರವಲಯದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಸದರಿ ಖಾಸಗಿ ಸಂಸ್ಥೆಯು ವ್ಯವಸ್ಥೆ ಮಾಡಿಕೊಂಡಿರುವ ಸ್ಥಳಕ್ಕೆ ಒಯ್ಯಲಾಗುವುದು. ಅಲ್ಲಿ ಪಶುವೈದ್ಯರನ್ನೊಳಗೊಂಡ ಶಸ್ತ್ರಚಿಕಿತ್ಸಾ ಘಟಕ ಇರುತ್ತದೆ. ಹೆಣ್ಣು ಮತ್ತು ಗಂಡು ನಾಯಿಗಳೆರಡಕ್ಕೂ ಇಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು. ನಂತರದ ಮೂರುದಿನಗಳ ಅವಧಿಯಲ್ಲಿ ಆ ನಾಯಿಗಳ ಆರೈಕೆ ಮಾಡಿ, ಬಳಿಕ ಅವುಗಳನ್ನು ಎಲ್ಲಿಂದ ಹಿಡಿದು ತರಲಾಗಿತ್ತೋ ಅದೇ ಸ್ಥಳಕ್ಕೆ ವಾಪಸ್ ಬಿಡಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಮಾಹಿತಿ ನೀಡಿದರು. 
     ಈ ಕಾರ್ಯಾಚರಣೆ ತಂಡವು ಪ್ರತಿನಿತ್ಯ ಬೆಳಗ್ಗೆ 6-30 ರಿಂದ ಸಂಜೆ 5 ಗಂಟೆಯವರೆಗೆ ಬೀದಿನಾಯಿಗಳನ್ನು ಹಿಡಿಯಲಿದೆ. ಒಂದು ದಿನದಲ್ಲಿ ಸುಮಾರು 10 ರಿಂದ 15 ನಾಯಿಗಳನ್ನು ಹಿಡಿಯಲಿದೆ. ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿಕಯ ಶಸ್ತ್ರಚಿಕಿತ್ಸಾ ಘಟಕದಲ್ಲಿ ಸುಮಾರು 60 ರಿಂದ 70 ನಾಯಿಗಳನ್ನು ಆರೈಕೆ ಮಾಡಬಹುದಾಗಿದೆ. 
ಹುಚ್ಚುನಾಯಿ ಇದ್ದರೆ..
    ಬೀದಿನಾಯಿಗಳ ಪೈಕಿ ಒಂದು ವೇಳೆ ಹುಚ್ಚುನಾಯಿ ಇರುವುದು ಕಂಡುಬಂದರೆ, ಅದನ್ನೂ ಹಿಡಿದು ಸದರಿ ಘಟಕದಲ್ಲಿರಿಸಿ ನಿಗಾ ವಹಿಸಲಾಗುವುದು. ಪಶುವೈದ್ಯರು ಹುಚ್ಚುನಾಯಿ ಎಂದು ದೃಢೀಕರಿಸಿದರೆ, ಅದಕ್ಕೆ ಸೂಕ್ತ ಲಸಿಕೆ ಹಾಕಲಾಗುವುದು. ಆ ನಾಯಿಯನ್ನು ಅಲ್ಲಿಯೇ ಇರಿಸಲಾಗುವುದು ಎಂದು ಮೂಲಗಳು ಹೇಳುತ್ತಿವೆ. 
ನಗರಾದ್ಯಂತ ನಾಯಿ ಹಾವಳಿ
      ಪ್ರಸ್ತುತ ತುಮಕೂರು ನಗರಾದ್ಯಂತ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಪಾಲಿಕೆಯ ಪ್ರತಿ ಸಭೆಯಲ್ಲೂ ಸದಸ್ಯರು ಈ ಸಮಸ್ಯೆ ಬಗ್ಗೆ ಪ್ರಸ್ತಾಪಿಸುತ್ತಲೇ ಇರುತ್ತಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮೊದಲಿನಂತೆ ನಾಯಿಗಳನ್ನು ಹಿಡಿಯುವಂತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆಯಿಂದ ಹೇಳಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆಯು ಬೀದಿನಾಯಿ ಹಾವಳಿ ನಿಯಂತ್ರಿಸಲು ಮುಂದಾದಾಗ, ಈ ಸಂಸ್ಥೆಯು ಗುತ್ತಿಗೆ ಪಡೆದುಕೊಂಡಿದೆ. ಪ್ರತಿನಿತ್ಯ ಈ ಸಂಸ್ಥೆಯ ತಂಡವು ಕಾರ್ಯಾಚರಣೆ ನಡೆಸಲಿದೆ. ಇದರ ಪರಿಣಾಮ ಮತ್ತು ಫಲಿತಾಂಶವನ್ನು ಮುಂದೆ ಕಾದುನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap