ಗಡಿನಾಡ ಜಾನಪದ ಸಮ್ಮೇಳನ

0
31

ಶಿರಾ

     ಕನ್ನಡ ಜಾನಪದ ಪರಿಷತ್‍ನ ರಾಜ್ಯ ಘಟಕ, ಜಿಲ್ಲಾ ಹಾಗೂ ಶಿರಾ ತಾ.ಘಟಕದ ವತಿಯಿಂದ ಶಿರಾ ತಾಲ್ಲೂಕಿನ ಗಡಿ ಗ್ರಾಮವಾದ ಬರಗೂರು ಗ್ರಾಮದಲ್ಲಿ ಫೆ. 20 ರಂದು ಗಡಿನಾಡ ಜಾನಪದ ಸಮ್ಮೇಳನವನ್ನು ಕೈಗೊಳ್ಳಲಾಗಿದೆ ಎಂದು ಕನ್ನಡ ಜಾನಪದ ಪರಿಷತ್‍ನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ತಿಳಿಸಿದರು.

     ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿಯೇ ಜಾನಪದ ಪರಿಷತ್‍ನಿಂದ ಪ್ರಥಮ ಬಾರಿಗೆ ಬರಗೂರು ಗ್ರಾಮದಲ್ಲಿ ಗಡಿನಾಡ ಜಾನಪದ ಸಮ್ಮೇಳನ ಕೈಗೊಳ್ಳಲಾಗುತ್ತಿದ್ದು ಸದರಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಾಡೋಜ ಹಾಗೂ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

      ಪ್ರಸ್ತುತ ದಿನಮಾನಗಳಲ್ಲಿ ಗಡಿನಾಡಿನ ಗ್ರಾಮಗಳು ಎರಡು ರಾಜ್ಯಗಳ ಸಮಸ್ಯೆಗಳಲ್ಲಿ ಸುಳಿಗಳಲ್ಲಿ ಸಿಲುಕಿ ನಲುಗಿ ಹೋಗಿವೆ. ಭಾಷಾಭಿಮಾನವನ್ನು ಮೆರೆಯಲು ಕೂಡ ಕಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಗಡಿನಾಡ ಗ್ರಾಮಗಳನ್ನು ಉಳಿಸಿಕೊಳ್ಳುವ ಹಾಗೂ ಅಲ್ಲಿನ ಜನಪದರನ್ನು, ಜನಪದ ಕಣಜವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬಂದಿದ್ದು, ಗಡಿನಾಡ ಸಮ್ಮೇಳನಗಳಿಂದ ಕಲಾವಿದರನ್ನು ಬೆಳಕಿಗೆ ತರುವ ಕೆಲಸವನ್ನು ಜಾನಪದ ಪರಿಷತ್ ಪ್ರಾಮಾಣಿಕವಾಗಿ ಮಾಡಲಿದೆ ಎಂದರು.

     ಫೆ.20 ರಂದು ಗಡಿನಾಡ ಜಾನಪದ ಸಮ್ಮೇಳನವು ನಡೆಯಲಿದ್ದು ಬರಗೂರು ಹೆಬ್ಬಾಗಿಲು, ನೊಳಂಬವಾಡಿ ವೇದಿಕೆಯಲ್ಲಿ ದಿನವಿಡೀ ಜಾನಪದ ಕಮ್ಮಟಗಳು ನಡೆಯಲಿವೆ. ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಜಾನಪದ ವಿದ್ವಾಂಸರುಗಳಿಂದ ವಿವಿಧ ಜಾನಪದ ಗೋಷ್ಠಿಗಳು ನಡೆಯಲಿದ್ದು, ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಡಾ.ಎಸ್.ಬಾಲಾಜಿ ತಿಳಿಸಿದರು.

     ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿ, ಮರೆತು ಹೋಗುತ್ತಿರುವ ಜಾನಪದವನ್ನು ಉಳಿಸುವ ಹೊಣೆ ಕನ್ನಡಿಗರದ್ದಾಗಬೇಕಿದೆ. ನಮ್ಮ ಗ್ರಾಮೀಣ ಭಾಗದ ಭಾಷೆಗಳು, ಕಲೆಗಳು ಹಾಗೂ ಜಾನಪದ ಕಲಾಕಾರರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸಗಳು ನಿರಂತರವಾಗಬೇಕಿದ್ದು, ಈ ಹಿನ್ನೆಲೆಯಲ್ಲಿ ಬರಗೂರು ಗ್ರಾಮದಲ್ಲಿ ಸಮ್ಮೇಳನವನ್ನು ಕೈಗೊಳ್ಳಲಾಗಿದೆ ಎಂದರು.

     ಕೊಟ್ಟ ಶಂಕರ್ ಮಾತನಾಡಿ, ಬರಗೂರಿನಲ್ಲಿ ನಡೆಯುವ ಗಡಿನಾಡ ಸಮ್ಮೇಳನದ ಪೂರ್ವ ಸಿದ್ಧತೆಗಾಗಿ ಈಗಾಗಲೇ ಹಲವು ಸುತ್ತಿನ ಪೂರ್ವಭಾವಿ ಸಭೆಗಳು ನಡೆದಿದ್ದು, ಸಮ್ಮೇಳನದ ಯಶಸ್ಸಿಗೆ ಗಡಿನಾಡ ಕನ್ನಡಿಗರ ಸಹಕಾರ ಅಗತ್ಯವಿದೆ. ಇದರೊಟ್ಟಿಗೆ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಿರುವುದು ನಮ್ಮಗಳ ಹೆಮ್ಮೆಯೇ ಸರಿ ಎಂದರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಎಲ್.ಶ್ರೀನಿವಾಸಮೂರ್ತಿ, ತಾ.ಅಧ್ಯಕ್ಷ ಶಿವಣ್ಣ ಹೆಂದೊರೆ, ಡಿ.ಎನ್.ಪರಮೇಶ್‍ಗೌಡ ಮುಂತಾದವರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here