ತುಮಕೂರು
ವಿಶೇಷ ವರದಿ : ರಾಕೇಶ್ ವಿ.
ನಗರದ ಅಮಾನಿಕೆರೆ ಆವರಣದಲ್ಲಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೆ. ಈ ಕಾಮಗಾರಿಯ ಭಾಗವಾದ ಫೆನ್ಸಿಂಗ್ ಅಳವಡಿಕೆಯಲ್ಲಿ ಲೋಪದೋಷಗಳಿವೆ ಎಂಬ ಗುಮಾನಿಗಳು ಕೇಳಿ ಬರುತ್ತಿವೆ.
ಅಮಾನಿಕೆರೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಕೆರೆ ಏರಿ ಅಭಿವೃದ್ಧಿ, ಕಾರಂಜಿ ಅಭಿವೃದ್ಧಿ, ಉದ್ಯಾನವನದ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳಿ ನಡೆಯುತ್ತಿವೆ. ಅದರಲ್ಲಿ ಅಮಾನಿಕರೆ ಸುತ್ತಲೂ ಫೆನ್ಸಿಂಗ್ ಕಾಮಗಾರಿ ಹಾಕುತ್ತಿರುವುದು ಒಂದಾಗಿದೆ. ಈ ಕಾಮಗಾರಿಗೆ 3.85 ಕೋಟಿ ರೂಗಳನ್ನು ವ್ಯಯ ಮಾಡಲಾಗುತ್ತಿದ್ದು, ಹಲವಾರು ಕಡೆಗಳಲ್ಲಿ ಹಳೆಯ ಕಂಬಗಳನ್ನು ಬಳಕೆ ಮಾಡಿ ಅದಕ್ಕೆ ಬಣ್ಣ ಹಚ್ಚಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹಳೆಯ ಕಂಬಗಳ ಬಳಕೆ
ಈ ಹಿಂದೆ ಅಳವಡಿಸಿದ್ದಂತಹ ಕಂಬಗಳಿಗೆ ಬೇಲಿ ಇಲ್ಲವಾಗಿದ್ದು, ಈ ಕಂಬಗಳನ್ನೇ ವೆಲ್ಡಿಂಗ್ ಮಾಡಿ ಅವುಗಳನ್ನೇ ಬಳಕೆ ಮಾಡಲಾಗುತ್ತಿದೆ. ಶೇ.20ಕ್ಕೂ ಹೆಚ್ಚು ಭಾಗ ಹಳೆಯ ಕಂಬಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದರ ಹಣ ಎಲ್ಲಿಗೆ ಹೋಗಲಿದೆ ಎಂಬುದು ತಿಳಿಯಬೇಕಿದೆ. ಟೆಂಡರ್ ಪಡೆಯುವಾಗ 3.85 ಕೋಟಿ ರೂಗಳಿಗೆ ಹೊಸ ಕಂಬಗಳನ್ನು ಅಳವಡಿಸಿ ಬೇಲಿ ಹಾಕಲು ಒಪ್ಪಿರುವ ಗುತ್ತಿಗೆದಾರರು ಯಾರ ಅನುಮತಿ ಮೇರೆಗೆ ಹಳೆಯ ಕಂಬಗಳನ್ನು ಬಳಸಿಕೊಳ್ಳುತ್ತಿದ್ದಾರೆ..?
3 ಕೋಟಿ ಬಳಕೆ
ಈ ಹಿಂದೆಯೇ ಅಮಾನಿಕೆರೆ ಆವರಣದ ಸುತ್ತಲೂ ( ಗಾಜಿನಮನೆಯಿಂದ ಆರಂಭವಾಗಿ ಕೋತಿತೋಪು ಪೆಟ್ರೋಲ್ ಹಿಂಭಾಗದ ವರೆಗೆ ) ಬೇಲಿ ಹಾಕಲಾಗಿತ್ತು. ಆ ಬೇಲಿಗೆ ಹಸಿರು ಬಣ್ಣ ಹಾಗೂ ಹಳದಿ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡಲಾಗಿತ್ತು. ಅದನ್ನು ಹೊರತು ಪಡಿಸಿ ಉಳಿದ ಕಡೆ ಬೇಲಿ ಅಳವಡಿಸಲು 3 ಕೋಟಿ 85 ಲಕ್ಷ ಬಳಕೆಯಾಗುವುದೇ..?
ಹಣ ಉಳಿಸುವ ಪ್ರಯತ್ನವೆ..?
ಕಾಮಗಾರಿಗೆ ಉಪಯುಕ್ತ ಎಂಬ ಕಂಬಗಳನ್ನು ಬಳಸುವಲ್ಲಿ ಸ್ಮಾರ್ಟ್ ಸಿಟಿಯ ನಿಲುವು ಏನಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಮರು ಬಳಕೆಯಾಗುವಂತಹ ಕಂಬಗಳನ್ನು ಬಳಸಿಕೊಂಡು ಹಣ ಉಳಿಸುವ ಯೋಜನೆ ರೂಪಿಸಲಾಗಿದೆಯೇ ಅಥವಾ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಹಳೆಯದನ್ನೆ ಬಳಸಿ ಹೊಸತನ್ನು ಹಾಕಲಾಗಿದೆ ಎಂದು ಬಿಂಬಿಸಿ ಬಿಲ್ ಪಡೆಯುವ ತಂತ್ರಗಾರಿಕೆಯೇ..?
ಎಲ್ ಆಕಾರದ ಕಂಬಗಳು
ಯಾವುದೇ ಪ್ರದೇಶದ ಸುತ್ತ ಫೆನ್ಸಿಂಗ್ ಮಾಡಬೇಕಾದ ನಿರ್ದಿಷ್ಠ ಅಳತೆಯಲ್ಲಿ ಎತ್ತರ ಕಂಬಗಳನ್ನು ಅಳವಡಿಸಿ ಅದಕ್ಕೆ ತಂತಿ ಬೇಲಿಯನ್ನು ಅಳವಡಿಸಲಾಗುತ್ತದೆ. ಈ ಹಿಂದೆಯೂ ಅಮಾನಿಕೆರೆ ಸುತ್ತಲೂ ಇದೇ ರೀತಿ ಬೇಲಿ ಹಾಕಲಾಗಿತ್ತು. ಈಗ ಹಾಲಿ ಇರುವ ಕಂಬಗಳಿಗೆ ಮೇಲ್ಭಾಗದಲ್ಲಿ 45 ಡಿಗ್ರಿಯಲ್ಲಿ ಎಲ್ ರೀತಿಯಲ್ಲಿ ಜೋಡಿಸಲಾಗುತ್ತಿದ್ದು ಯಾರು ಈ ಬೇಲಿಯನ್ನು ಹತ್ತದಂತೆ ಮಾಡಲಾಗುತ್ತಿದೆ.
1.7 ಮೀಟರ್ ಎತ್ತರ
ಈ ಹಿಂದೆ ಟೂಡಾ ವತಿಯಿಂದ ಅಳವಡಿಸಲಾಗಿದ್ದ ಕಂಬಗಳ ಮೇಲೆ ಸ್ಮಾರ್ಟ್ ಸಿಟಿಯಿಂದ ಇನ್ನು ಸ್ವಲ್ಪ ಉದ್ದ ಕಬ್ಬಿಣದ ತುಂಡನ್ನು ಅಳವಡಿಸಲಾಗುತ್ತಿದೆ. ಇದು 45 ಡಿಗ್ರಿಯಲ್ಲಿ ಅಳವಡಿಸಲಾಗುತ್ತಿದೆ. ಒಟ್ಟು ಕಂಬಗಳು 1.7 ಮೀಟರ್ ಎತ್ತರವಿದ್ದು ಅದರ ಮೇಲ್ಬಾಗದಲ್ಲಿ 45 ಡಿಗ್ರಿಯಲ್ಲಿ 0.5 ಮೀಟರ್ ಉದ್ದ ಅಳವಡಿಸಲಾಗುತ್ತಿದೆ. ಇದಕ್ಕೆ ಚೈನ್‍ಲಿಂಕ್ ಫೆನ್ಸಿಂಗ್ ಹಾಕಲಾಗುತ್ತಿದೆ.
ಮರು ಅಭಿವೃದ್ಧಿ ಕಾಮಗಾರಿ
ಅಮಾನಿಕೆರೆ ಸುತ್ತಲೂ ಈ ಹಿಂದೆಯೆ ಟೂಡಾದ ವತಿಯಿಂದ ಕಂಬಗಳನ್ನು ಅಳವಡಿಸಿ ಬೇಲಿ ಹಾಕಲಾಗಿತ್ತು. ಅದನ್ನು ಸ್ಮಾರ್ಟ್ ಸಿಟಿಯಿಂದ ಮರು ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲಾಗುತ್ತಿದೆ. ಅದರಲ್ಲಿ ಈ ಹಿಂದೆ ಇದ್ದ ಕಂಬಗಳನ್ನು ಪರೀಕ್ಷಿಸಿ ಮರುಬಳಕೆ ಮಾಡಲು ಸಾಧ್ಯವಿದ್ದವುಗಳನ್ನು ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ.
ಹಾಳಾದ ಕಡೆ ಹೊಸ ಫೆನ್ಸಿಂಗ್ ಅಳವಡಿಕೆ
ಅಮಾನಿಕೆರೆ ಸುತ್ತ ಹಾಕಲಾಗಿದ್ದ ಫೆನ್ಸಿಂಗ್ ಅನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಎಲ್ಲೆಲ್ಲಿ ಹಾಳಾಗಿರುವುದು ಕಂಡು ಬಂದಿದೆಯೊ ಅಲ್ಲಲ್ಲಿ ಅದನ್ನು ಬದಲಾಯಿಸಲಾಗುತ್ತಿದೆ. ಉದಾಹರಣೆಗೆ ಹಾಳಾದ ಕಂಬಗಳನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ನೂತನ ಕಂಬಗಳನ್ನು ಅಳವಡಿಸುವುದು. ಮತ್ತು ತುಂಡಾದ ಬೇಲಿಯನ್ನು ಬದಲಾಯಿಸುವುದು ಹೀಗೆ ಹಾಳಾದ ಸ್ಥಳದಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಶೇ.60% ಮರುಬಳಕೆ
ಈಗಾಗಲೇ ಅಳವಡಿಕೆಯಾಗಿದ್ದ ಕಂಬಗಳು ಹಾಗೂ ಫೆನ್ಸಿಂಗ್ ಅನ್ನು ಬಹುತೇಖ ಅಂದರೆ ಶೇ.60ರಷ್ಟು ಹಳೆಯದನ್ನೇ ಬಳಕೆ ಮಾಡಲಾಗುತ್ತಿದ್ದು, ಕೇವಲ ಶೇ.40ರಷ್ಟಕ್ಕೆ ಮಾತ್ರ ಹೊಸ ಕಂಬಗಳು ಹಾಗೂ ಹೊಸ ಚೈನ್ ಲಿಂಕ್ ಅಳವಡಿಕೆ ಮಾಡಲಾಗುತ್ತಿದೆ.
9 ತಿಂಗಳ ಗಡುವು
ಚೇನ್‍ಲಿಂಕ್ ಫೆನ್ಸಿಂಗ್ ಮಾಡುವುದಕ್ಕೆ 9 ತಿಂಗಳ ಗಡುವು ನೀಡಲಾಗಿದ್ದು, ಈ ಕಾಮಗಾರಿ 2019ರ ಆಗಸ್ಟ್ 2ರಂದು ಪ್ರಾರಂಭಗೊಂಡಿದ್ದು, ಅದನ್ನು ಪೂರ್ಣಗೊಳಿಸಲು ಒಂಭತ್ತು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಪ್ರಕಾರ 2020ರ ಮೇ ತಿಂಗಳವರೆಗೆ ಸಮಯವಿದ್ದು, ಅದನ್ನು ಪೂರ್ಣಗೊಳಿಸುವ ಕೆಲಸದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








