ಬೆಂಗಳೂರು
ನವದೆಹಲಿಯ ಜವಹರ್ಲಾಲ್ ನೆಹರೂ(ಜೆಎನ್ಯು) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಹಿಂಸಾಚಾರ ನಡೆಸಿರುವುದನ್ನು ಖಂಡಿಸಿ ಸೋಮವಾರ ನಗರದಲ್ಲಿ ವಿದ್ಯಾರ್ಥಿ ಕಾಂಗ್ರೆಸ್(ಎನ್ಎಸ್ಯುಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆನಂದ್ ರಾವ್ ವೃತ್ತ ಬಳಿಯ ಗಾಂಧಿಪ್ರತಿಮೆ ಬಳಿ ಸೇರಿದ ನೂರಾರು ವಿದ್ಯಾರ್ಥಿಗಳು,ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಕ್ಯಾಂಪಸ್ನಲ್ಲಿ ಹಾಸ್ಟೆಲ್?ಗೆ ನುಗ್ಗಿದ್ದ ಕೆಲವು ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಜೆಎನ್ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಐಶೆ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಆಕೆಯ ಜೊತೆಗಿದ್ದ ಇತರೆ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವರ್ಗದವರ ಮೇಲೂ ಹಲ್ಲೆ ನಡೆಸಿದ್ದಾರೆ.
ಈ ಹಲ್ಲೆಯಲ್ಲಿ ಐಶೆ ಘೋಷ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ತೀವ್ರ ರಕ್ತಸ್ರಾವವಾಗಿತ್ತು. ಪ್ರಸ್ತುತ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಘಟನೆಯನ್ನು ಇಡೀ ದೇಶ ಒಮ್ಮತದಿಂದ ವಿರೋಧಿಸಿದೆ, ವ್ಯಾಪಕ ಖಂಡನೆ ಎದುರಾಗುತ್ತಿದೆ. ಈ ಘಟನೆಯ ಹಿಂದೆ ಎಬಿವಿಪಿ ಹಾಗೂ ಬಿಜೆಪಿ ಗೂಂಡಾಗಳ ಕೈವಾಡ ಇದೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.ಈ ಸಂದರ್ಭದಲ್ಲಿ ಎನ್ ಎಸ್ ಯುಐ ಅಧ್ಯಕ್ಷ ಹೆಚ್.ಎಸ್.ಮಂಜುನಾಥ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








