ಹೆಚ್ಚುತ್ತಿರುವ ರಣಬಿಸಿಲು: ಹಣ್ಣುಗಳಿಗೆ ಬೇಡಿಕೆ : ಎಳನೀರು-ತಂಪು ಪಾನೀಯಗಳಿಗೆ ಮಾರು ಹೋಗುತ್ತಿರುವ ಜನತೆ

ತುಮಕೂರು: ಬಿಸಿಲಿನ ಝಳ ದಿನೆ ದಿನೆ ಏರಿಕೆಯಾಗುತ್ತಿದ್ದು, ಮಧ್ಯಾಹ್ನದ ಉರಿಬಿಸಿಲು ಜನತೆಯನ್ನು ಹೈರಾಣಾಗಿಸುತ್ತಿದೆ. ಇದರಿಂದಾಗಿ ಬೇಸಿಗೆಯ ದಣಿವಾರಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಇದೀಗ ಎಲ್ಲಾ ಹಣ್ಣುಗಳ ದರವೂ ದುಪ್ಪಟ್ಟಾಗಿದೆ. ಅದರಲ್ಲೂ ನಿಂಬೆಹಣ್ಣಿನ ಬೆಲೆಯೂ ಹೆಚ್ಚಿದ್ದು, ಒಂದು ನಿಂಬೆಹಣ್ಣಿಗೆ 10 ರೂ.ಗಳವರೆಗೆ ಮಾರಾಟವಾಗುತ್ತಿದೆ.
ಮಾರುಕಟ್ಟೆಯಲ್ಲಿ ನಿಂಬೆಹಣ್ಣಿನ ಬೆಲೆ ಆರೇಳು ರೂ.ಗಳಿಗೆ ಸಿಗುತ್ತಿದ್ದರೆ, ಚಿಲ್ಲರೆ ವ್ಯಾಪಾರ ಮಾರಾಟ ಮಾಡುವವರ ಬಳಿ ನಿಂಬೆಹಣ್ಣಿಗೆ 10 ರೂ.ಗಳಿಗೂ ಅಧಿಕವಾಗಿದ್ದು, ಇವುಗಳು ಸಿಗುವುದೇ ಇಲ್ಲ ಎಂಬ ಉತ್ತರ ಮಾರಾಟಗಾರರಿಂದ ಕೇಳಿಬರುತ್ತಿದೆ. ನಿಂಬೆಹಣ್ಣಿಗೆ ಅಷ್ಟಾಗಿ ಡಿಮ್ಯಾಂಡ್ ಇರಲಿಲ್ಲ. ಆದರೆ ಈ ಬಾರಿ ನಿಂಬೆಹಣ್ಣಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದುಬಿಟ್ಟಿದೆ.
ತುಮಕೂರು ಜಿಲ್ಲೆಯಲ್ಲಿ ಕಲ್ಲಂಗಡಿ ಹೆಚ್ಚು ಬೆಳೆಯಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಈ ಬಾರಿ ಬಂಪರ್ ಬೆಳೆ ಬೆಳೆದಿದ್ದು, ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದೆ. ಒಂದು ಕಲ್ಲಂಗಡಿ ಅದರ ಗಾತ್ರ ಮತ್ತು ತೂಕದ ಮೇಲೆ ಧಾರಣೆ ಅವಲಂಬಿಸಿದೆ. ಚಿಕ್ಕ ಗಾತ್ರದ್ದು 50 ರೂ.ಗಳಿಂದ ಹಿಡಿದು 100 ರೂ.ಗಳವರೆಗೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳು ಹಣ್ಣನ್ನು ಕತ್ತರಿಸಿ ಒಂದು ಪೀಸ್‌ಗೆ 20 ರೂ.ಗಳಂತೆ ಮಾರಾಟ ಮಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಇದು ಹೆಚ್ಚು ಬೇಡಿಕೆಯ ಹಣ್ಣಾಗಿದೆ.
ಕಲ್ಲಂಗಡಿ ಹಣ್ಣಿನಂತೆಯೇ ಕರಬೂಜಕ್ಕೂ ಬೇಡಿಕೆ ಇದೆ. ಆದರೆ ಕರಬೂಜಕ್ಕೆ ಹೆಚ್ಚು ಧಾರಣೆ ಇಲ್ಲ. ಕಿತ್ತಳೆ ಹಣ್ಣು ವಾರದಿಂದ ವಾರಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಈ ವಾರ ಬಾಳೆಹಣ್ಣು ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ಶ್ರೀರಾಮ ನವಮಿಗೂ ಹಿಂದೆ ಮತ್ತು ಹಬ್ಬದ ಆಸುಪಾಸಿನಲ್ಲಿ ಕೆ.ಜಿಗೆ 80 ರೂ. ಇದ್ದ ಏಲಕ್ಕಿ ಬಾಳೆಹಣ್ಣು ಈಗ 60 ರೂ.ಗಳ ತನಕ ಇಳಿಮುಖವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಫಸಲು ಬಂದಿದೆ. ಆದರೆ ಬೆಳೆಯುವ ರೈತರಿಗೆ ಈ ಲಾಭ ಸಿಗುತ್ತಿಲ್ಲ. ರೈತರಿಂದ 20 ರಿಂದ 25 ರೂ.ಗಳವರೆಗ ಕೆ.ಜಿ.ಬಾಳೆ ಖರೀದಿಸುವ ಮಾರಾಟಗಾರರು 60 ರಿಂದ 80 ರೂ.ಗಳವರೆಗೆ ಮಾರಾಟ ಮಾಡುತ್ತಿದ್ದಾರೆ.
ದ್ರಾಕ್ಷಿ ಈಗ ಹೆಚ್ಚು ಮಾರಾಟವಾಗುತ್ತಿದೆ. ತುಮಕೂರಿನಲ್ಲಿ ಈ ಹಣ್ಣು ಬೆಳೆಯುತ್ತಿಲ್ಲ. ಆದರೆ ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಭಾಗಗಳಿಂದ ಇಲ್ಲಿಗೆ ರವಾನೆ ಮಾಡಿಕೊಳ್ಳಲಾಗುತ್ತಿದೆ. ಬೆಲೆಯೂ ಏರಿಕೆಯಾಗಿದೆ. ಪಪ್ಪಾಯಿ ಹಣ್ಣಿನ ಬೆಲೆಯೂ ಉತ್ತಮ ಸ್ಥಿತಿಯಲ್ಲಿದೆ. ತುಮಕೂರು ಜಿಲ್ಲೆಯಲ್ಲಿ ಬಹಳಷ್ಟು ಕಡೆಗಳಲ್ಲಿ ಪಪ್ಪಾಯಿ ಬೆಳೆಯಲಾಗುತ್ತಿದೆ.
ಎಳನೀರು ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿರುವುದಲ್ಲದೆ, ಕ್ರಮೇಣ ಧಾರಣೆ ಏರುಗತಿಯಲ್ಲಿಯೇ ಇದೆ. ಬೇಸಿಗೆಯ ತಂಪು ಕಾರಣಕ್ಕೆ ಬಹಳಷ್ಟು ಜನ ತಂಪು ಪಾನೀಯಗಳ ಮೊರೆ ಹೋಗದೆ ಎಳನೀರಿನತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಣದೊಳಗೆ ಹಾಗೂ ರಸ್ತೆ ಬದಿಗಳಲ್ಲಿ ಎಳನೀರು ಮಾರಾಟ ಜೋರಾಗಿ ನಡೆಯುತ್ತಿದ್ದು, ಕನಿಷ್ಠ 50 ರೂ.ಗಳಿಂದ 70 ರೂ.ಗಳವರೆಗೂ ಮಾರಾಟವಾಗುತ್ತಿದೆ. ಆದರೆ ರೈತರಿಂದ ಕಡಿಮೆ ಧಾರಣೆಗೆ ಖರೀದಿಸುತ್ತಿದ್ದಾರೆ. ಕೇವಲ 20 ರಿಂದ 30 ರೂ.ಗಳಿಗೆ ಖರೀದಿಸಿ ಇಲ್ಲಿ 60 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಕಾಯಿ ಮತ್ತು ಎಳನೀರು ಕೊರತೆ ಉಂಟಾಗಿರುವ ಕಾರಣ ಬೇಡಿಕೆಯೂ ಹೆಚ್ಚುತ್ತಿದೆ.
ನಗರ ಪ್ರದೇಶಗಳಲ್ಲಿ ನಿಂಬೆಹಣ್ಣು, ಕಲ್ಲಂಗಡಿ ಹಣ್ಣು, ಕರಬೂಜ, ಕಿತ್ತಳೆ, ಎಳನೀರು ಇಂತಹ ಪಾನೀಯಗಳು ಮತ್ತು ಹಣ್ಣುಗಳು ಹೆಚ್ಚು ಚಾಲ್ತಿಯಲ್ಲಿವೆ. ಧಾರಣೆಯೂ ಅಧಿಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿಂಬೆಹಣ್ಣು ಸುಲಭವಾಗಿ ಸಿಗುತ್ತಿದ್ದು, ಟೀ, ಕಾಫಿ ಬದಲಿಗೆ ಶರಬತ್ತಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಯಾರಾದರೂ ಮನೆಗಳಿಗೆ ಹೋದರೆ ಟೀ ಬದಲಿಗೆ ಶರಬತ್ತು ನೀಡುತ್ತಿದ್ದಾರೆ.
ಹಿಂದೆಲ್ಲಾ ಪಟ್ಟಣಿಗರು ಗ್ರಾಮೀಣ ಪ್ರದೇಶಗಳಿಗೆ ಹೋದರೆ ತೋಟಕ್ಕೆ ಕರೆದೊಯ್ದು ಎಳನೀರು ಕುಡಿಸುತ್ತಿದ್ದರು. ಆದರೆ ಎಳನೀರಿಗೆ ಉತ್ತಮ ಧಾರಣೆ ಬಂದಿರುವುದರಿAದ ಹಾಗೂ ತೋಟಗಳಲ್ಲಿ ತೆಂಗಿನ ಕಾಯಿಗಳ ಕೊರತೆ ಉಂಟಾಗಿರುವುದರಿAದ ಎಳನೀರು ಕೊಡಲು ಹಿಂದು ಮುಂದು ನೋಡುತ್ತಿದ್ದಾರೆ. ಹಾಗೆಯೇ ಅಕ್ಕಪಕ್ಕದ ಮನೆಯವರು ಅಡಿಗೆಗೆಂದು ತೆಂಗಿನ ಕಾಯಿ ಕೇಳುತ್ತಿದ್ದರು. ಆದರೆ ಈಗ ಬೆಲೆ ಏರಿಕೆಯಿಂದ ತೆಂಗಿನ ಕಾಯಿ ಕೊಡಲೂ ನಿರಾಕರಿಸುತ್ತಿದ್ದಾರೆ.

ಹೆಚ್ಚು ನೀರು ಕುಡಿಯಿರಿ 

ಬಿಸಿಲಿನ ತಾಪಮಾನ ಏರುತ್ತಿರುವುದರಿಂದ ಚಿಕ್ಕಮಕ್ಕಳು, ಗರ್ಭಿಣಿ, ಬಾಣಂತಿಯರು, ವಯೋವೃದ್ಧರ ಕಾಳಜಿಗಾಗಿ ಕುಟುಂಬದ ಸದಸ್ಯರು ಹೆಚ್ಚಿನ ಆದ್ಯತೆ ನೀಡಬೇಕು. ಇವರುಗಳು ನೆರಳಿನಲ್ಲಿರುವುದಲ್ಲದೆ, ಹೆಚ್ಚು ನೀರು ಕುಡಿಯಬೇಕು ಹಾಗೂ ದ್ರವ ಆಹಾರ ಹೆಚ್ಚು ಸೇವಿಸಬೇಕು. ಹೆರಿಗೆ ನಂತರ ಬಾಣಂತಿಯರು ನವಜಾತ ಶಿಶುವಿಗೆ ಮೇಲಿನಿಂದ ಮೇಲೆ ಎದೆಹಾಲು ಉಣಿಸಬೇಕು. ರೋಗ ನಿರೋಧಕ ಶಕ್ತಿ ವೃದ್ಧಿಸಲು 12 ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು. ಲವಣಾಂಶ ಕಡಿಮೆಯಾಗದಂತೆ ಓಆರ್‌ಎಸ್ ಜೀವ ಜಲ ಪೊಟ್ಟಣ ಸದಾ ಮನೆಯಲ್ಲಿರಬೇಕು.

ಡಾ.ಚಂದ್ರಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ. ತಂಪು ಪಾನೀಯ ಮಾರುವವರಿಗೆ ಸುಗ್ಗಿ  ಬೇಸಿಗೆಯ ಧಗೆ ಹೆಚ್ಚುತ್ತಿರುವುದರಿಂದ ಜನತೆ ತಂಪು ಪಾನೀಯಗಳತ್ತ ಮಾರು ಹೋಗುತ್ತಿದ್ದಾರೆ. ಕೆಲವರು ಅಂಗಡಿಗಳಲ್ಲಿ ಸಿಗುವ ಸಿದ್ಧ ಪಾನೀಯಗಳ ಮೊರೆ ಹೋದರೆ ಮತ್ತೆ ಕೆಲವರು ನೈಸರ್ಗಿಕ ಹಣ್ಣು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅಲ್ಲಲ್ಲಿ ಸಿಗುವ ಕಿತ್ತಳೆ ಜೂಸ್, ಎಳನೀರು, ಕರಬೂಜು ಅನಾನಸ್, ಕಲ್ಲಂಗಡಿ ಇತ್ಯಾದಿಗಳಿಗೆ ಮೊರೆ ಹೋಗುತ್ತಿದ್ದು, ಇದರಿಂದ ಇವುಗಳ ಧಾರಣೆಯೂ ಹೆಚ್ಚಿದೆ.

ಎಳನೀರಿಗೆ ಡಿಮ್ಯಾಂಡ್ : 50 ರೂ.ಗಳಿಗೆ ಸಿಗುತ್ತಿದ್ದ ಎಳನೀರು ಈಗ 60 ರಿಂದ 70 ರೂ.ಗಳವರೆಗೂ ಮಾರಾಟವಾಗುತ್ತಿದೆ. ಆದರೆ ಈ ಧಾರಣೆಯ ಫಲ ತೆಂಗು ಬೆಳೆಗಾರರಿಗೆ ಸಿಗುತ್ತಿಲ್ಲ. ತೆಂಗಿನ ತೋಟಗಳಿಂದ ಕೇವಲ 25 ರೂ.ಗಳಿಗೆ ಚೌಕಾಸಿ ಮಾಡಿ ತರುವ ಮಾರಾಟಗಾರರು ತಾವು ಮಾತ್ರ ದುಪ್ಪಟ್ಟಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಂದು ಸಣ್ಣ ಎಳನೀರಿನ ಬೆಲೆಯೂ 60 ರೂ.ಗಳಷ್ಟಾಗಿದೆ. ಎಳನೀರಿನ ಹಿನ್ನೆಲೆ ಗೊತ್ತಿಲ್ಲದವರಿಗೆ ಮಾರಾಟಗಾರರು ಹಳೆಯ ಎಳನೀರು ಅಥವಾ ಕಾಯಿಯಾಗಿರುವ ಎಳನೀರನ್ನೇ ನೀಡಿ ಮಾಮೂಲಿ ದರ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಎಳನೀರು ಮಾರಾಟ ಮಾಡುವವರು ಬಂಪರ್ ಧಾರಣೆ ಪಡೆಯುತ್ತಿದ್ದಾರೆ.

 

Recent Articles

spot_img

Related Stories

Share via
Copy link