ಗುಬ್ಬಿ
ರೈತರ ಸಂಕಷ್ಟವನ್ನು ಪಾರು ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮುಂದಾಗಬೇಕಿದೆ. ಆದರೆ ಅದನ್ನು ಮಾಡದೆ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬುಧವಾರ ಕೆಲ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುಬ್ಬಿ ಪಟ್ಟಣದಲ್ಲೂ ಕೆಲ ಸಂಘಟನೆಗಳು ಪಟ್ಟಣದ ಎಪಿಎಂಸಿ ಆವರಣದಿಂದ ಸರ್ಕಾರಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ಬಂದು ಮಾನವ ಸರಪಳಿಯನ್ನು ರಚಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರು ಬೆಳೆದ ಬೆಳೆಗೆ ಯಾವುದೇ ರೀತಿಯ ವೈಜ್ಞಾನಿಕ ಬೆಲೆಯನ್ನು ಕೊಡದೆ ಮಲತಾಯಿ ಧೋರಣೆ ತೋರುತ್ತಾ ಇರುವಂತೆ ಕಾಣುತ್ತದೆ. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವಂತೆ ಒತ್ತಾಯ ತರುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಪ್ರವಾಹ ಪೀಡಿತರಾದ ಕುಟುಂಬಗಳಿಗೆ ಸ್ಪಂದಿಸುತ್ತಿಲ್ಲ. ಪ್ರವಾಹದಿಂದ 32ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರಕ್ಕೆ ವರದಿಯನ್ನು ನೀಡಿದ್ದರೂ ಸಹ ಇಲ್ಲಿಯವರೆವಿಗೂ ಸ್ಪಂದನೆಯೇ ಸಿಗುತ್ತಿಲ್ಲ.
ಹಲವು ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡಿದ ರೈತರಿಗೆ ಬಗರ್‍ಹುಕುಂನಲ್ಲಿ ಸಾಗುವಳಿ ಚೀಟಿ ಸಿಗದೆ ಯಾರೋ ಪ್ರಭಾವಿ ನಾಯಕರ ಸ್ವತ್ತಾಗಿ ಮಾರ್ಪಾಡಾಗಿದ್ದು ಇದನ್ನು ಕೂಡಲೇ ರದ್ದುಪಡಿಸಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ನೀಡುವಂತೆ ಒತ್ತಾಯಿಸಿದ ಅವರು, ಭೂಸ್ವಾದೀನ ಕಾಯಿದೆಯಡಿ ತಂದಿರುವ ಹೊಸ ನಿಯಮಗಳನ್ನು ಹಿಂದಕ್ಕೆ ಪಡೆದು ರೈತರ ನೆರವಿಗೆ ಬರಬೇಕು.
ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಹಣವನ್ನು ತಕ್ಷಣವೆ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ನಮ್ಮ ಜಿಲ್ಲೆಯ ಹೇಮೆಯು ಇನ್ನು 8 ಟಿಎಂಸಿ ನೀರು ಬರಬೇಕಿದ್ದು ಆ ನೀರನ್ನು ಸಂಪೂರ್ಣವಾಗಿ ಹರಿಸಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡಲು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅನುಸೂಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರವು ಅಚ್ಛೆ ದಿನ್ ಮಾಡುವ ಉದ್ದೇಶವನ್ನು ಇಟ್ಟಿಕೊಂಡಿರುವುದಾಗಿ ಹೇಳುತ್ತಾ ಬಂದರೂ ಆಗಿದ್ದೇ ಬೇರೆ. ಅದು ಲುಚ್ಛೆ ದಿನ್ ದಿನವಾಗಿ ಪರಿವರ್ತನೆ ಆದಂತೆ ಕಾಣುತ್ತಿದೆ. ಬರೀ ಮಾತುಗಳಿಂದ ಜನರನ್ನು ಮೋಡಿ ಮಾಡುವ ಕಲೆ ಕೇಂದ್ರ ಸರ್ಕಾರಕ್ಕೆ ತಿಳಿದಿದೆ.
ಸ್ವಚ್ಛತಾ ಕಾರ್ಯ ಹೆಸರಿನಲ್ಲಿ ಕಸವನ್ನು ಗುಡಿಸುವುದು ಸೇರಿದಂತೆ ಎಲ್ಲಾ ಕೆಲಸಗಳಿಗೆ ನಮ್ಮನ್ನು ಬಳಸಿಕೊಳ್ಳುತ್ತಾ ಇರುವ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ಕಡೆಗಣಿಸಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಕನಿಷ್ಠ ವೇತನ ನೀಡುತ್ತಿಲ್ಲ. ಜೀವನ ನಿರ್ವಹಣೆಗೆ ತಕ್ಕುದಾಗಿ ವೇತನ ನೀಡಲೇಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಕೆ.ಎನ್.ವೆಂಕಟೆಗೌಡ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಸರೋಜಮ್ಮ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್, ಮುಖಂಡ ಅಜ್ಜಪ್ಪ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ