ಪೌರಕಾರ್ಮಿಕರು ಸುರಕ್ಷಾ ಪರಿಕರಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು :ಜಿಲ್ಲಾಧಿಕಾರಿ

ದಾವಣಗೆರೆ

    ಪೌರಕಾರ್ಮಿಕರು ಕೆಲಸದ ಅವಧಿಯಲ್ಲಿ ಸಮವಸ್ತ್ರ ಮತ್ತು ಸುರಕ್ಷಾ ಪರಿಕರಗಳನ್ನು ಬಳಸದೇ ಕೆಲಸ ಮಾಡುವುದು ಕಂಡು ಬಂದರೆ ಅಂತಹವರನ್ನು ಸ್ಥಳದಲ್ಲೇ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜ.10 ರಂದು ಏರ್ಪಡಿಸಲಾಗಿದ್ದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-2019ರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಮಹಾನಗರಪಾಲಿಕೆ ವತಿಯಿಂದ ನೀಡಲಾಗಿರುವ ಸುರಕ್ಷತಾ ಪರಿಕರಗಳಾದ ಗಂಬೂಟ್ಸ್, ಹ್ಯಾಂಡ್‍ಗ್ಲೌಸ್‍ಗಳನ್ನು ಕಡ್ಡಾಯವಾಗಿ ಬಳಸಬೇಕು.

    ಅವರ ಆರೋಗ್ಯ ಹಿತದೃಷ್ಟಿಯಿಂದ ಅವುಗಳನ್ನು ಉಪಯೋಗಿಸಬೇಕು. ಪರಿಕರಗಳನ್ನು ಬಳಸದೇ ಸ್ವಚ್ಚತೆ ಕೆಲಸ ಮಾಡುತ್ತಿರುವುದು ಕಂಡು ಬಂದರೆ ಅವರ ವಿರುದ್ದ ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಗೊಳಸಲಾಗವುದು. ಇದಕ್ಕೆ ಯಾರೂ ವಿರೋಧ ಮಾಡುವಂತಿಲ್ಲ ಎಂದು ಸೂಚನೆ ನೀಡಿದರು.

    ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆ ಕೆಲಸ ನಡೆಯುತ್ತಿದ್ದು, ತಾಲ್ಲೂಕುಗಳಲ್ಲಿರುವ ಒಟ್ಟು ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಪಟ್ಟಿಯನ್ನು ಜ.16 ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಬೇಕೆಂದು ತಾಲ್ಲೂಕು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

     ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್ ಮಾತನಾಡಿ, ಇಲ್ಲಿಯವರೆಗೂ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 156 ಕುಟುಂಬಗಳಿಗೆ ಸ್ವಯಂ ಫೋಷಣೆಯೊಂದಿಗೆ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಗುರುತಿನ ಚೀಟಿ ನೀಡಲಾಗಿದೆ. ಹಾಗೂ 2019 ರ ಅಕ್ಟೋಬರ್‍ನ 24 ಮತ್ತು 25 ರಂದು ಪಾಲಿಕೆಯಿಂದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ವಿಶೇಷ ಮರು ಸಮೀಕ್ಷೆ ಕೈಗೊಂಡಿದ್ದು, ಸಮೀಕ್ಷೆ ಕಾರ್ಯವು ಪ್ರಗತಿಯಲ್ಲಿದೆ. ಪಾಲಿಕೆಯಿಂದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಸ್ವ-ಉದ್ಯೋಗದ ಅನುಕೂಲಕ್ಕಾಗಿ ರೂ.25 ಲಕ್ಷ ಮೀಸಲಿಡಲಾಗಿದೆ. ಮಹಾನಗರಪಾಲಿಕೆ ಸಮೀಕ್ಷೆಯಂತೆ ನಗರದಲ್ಲಿ ಯಾವುದೇ ಇನ್‍ಸ್ಯಾನಿಟರಿ ಲೆಟ್ರಿನ್‍ಗಳು (ತೆರೆದ ಮಲ ಗುಂಡಿ) ಇಲ್ಲ ಎಂದು ತಿಳಿಸಿದರು.

     ಇದಕ್ಕೆ ಜಿಲ್ಲಾ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಸಮಿತಿಯ ಕಾರ್ಯದರ್ಶಿ ಉಚ್ಚಂಗೆಪ್ಪ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಇನ್‍ಸ್ಯಾನಿಟರಿ ಲೆಟ್ರಿನ್ (ತೆರೆದ ಮಲ ಗುಂಡಿ) ಇರುವುದಾಗಿ ಆರೋಪ ಮಾಡಿದರು.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇನ್‍ಸ್ಯಾನಿಟರಿ ಲೆಟ್ರಿನ್‍ಗಳು (ತೆರೆದ ಮಲ ಗುಂಡಿ)ಇರುವುದನ್ನು ಕೇಳುತ್ತಿದ್ದಂತೆ ದಿಗ್ಭ್ರಮೆಗೊಂಡ ಜಿಲ್ಲಾಧಿಕಾರಿಗಳು ತಕ್ಷಣ ತೋರಿಸುವಂತೆ ಸಭೆಯಿಂದ ಅಧಿಕಾರಿಗಳ ತಂಡದೊಂದಿಗೆ ನೇರವಾಗಿ ಪರಿಶೀಲನೆಗೆ ಹೋದಾಗ ಅಲ್ಲಿ ಇನ್‍ಸ್ಯಾನಿಟರಿ ಲೆಟ್ರಿನ್‍ಗಳು (ತೆರೆದ ಮಲ ಗುಂಡಿ) ಇರದೇ ಬದಲಾಗಿ ಸೆಪ್ಟಿಕ್ ಟ್ಯಾಂಕ್ ಇರುವುದನ್ನು ಕಂಡು ಆ ವ್ಯಕ್ತಿಗೆ ಆರೋಪ ಮಾಡುವ ಮೊದಲು ಇನ್‍ಸ್ಯಾನಿಟರಿ ಲೆಟ್ರಿನ್‍ಗಳು ಎಂದರೆ ಏನು ಎಂಬುದನ್ನು ಸಭೆಯಲ್ಲಿ ವಿವರಿಸಿದ್ಧೇನೆ,

     ಆದರೂ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಈ ರೀತಿ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಇನ್ನು ಮುಂದೆ ಈ ರೀತಿಯ ಸುಳ್ಳು ಆರೋಪ ಮಾಡಿದರೆ ಜಿಲ್ಲಾಡಳಿತಕ್ಕೆ ಮಾಡಿದ ಅವಮಾನ ಎಂದು ಭಾವಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಆರೋಪ ಮಾಡಿದ ವ್ಯಕ್ತಿ ತಪ್ಪಿನ ಅರಿವಾಗಿ ನನಗೆ ಸರಿಯಾದ ಅರಿವಿಲ್ಲದೇ ಈ ರೀತಿ ಮಾಡಿದ್ದು, ತನ್ನ ತಪ್ಪನ್ನು ತಿದ್ದಿಕೊಳ್ಳೊತ್ತೇನೆಂದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ ಕುಂಬಾರ್ ಮಾತನಾಡಿ, ಪಾಲಿಕೆ ವತಿಯಿಂದ ಮ್ಯಾನ್‍ಹೋಲ್/ಮಲದ ಗುಂಡಿಗಳ ಸ್ವಚ್ಚಗೊಳಿಸಲು 02 ಸಕ್ಕಿಂಗ್ ಹಾಗೂ 02 ಜೆಟ್ಟಿಂಗ್ ಯಂತ್ರಗಳಿದ್ದು, ಅವಶ್ಯಕತೆಗೆ ಅನುಗುಣವಾಗಿ ಎರಡು ಪಾಳಿಯಲ್ಲಿ ಉಪಯೋಗಿಸಲಾಗುತ್ತಿದೆ. ಸುರಕ್ಷತಾ ಪರಿಕರಗಳಿಗೆ ವಾರ್ಷಿಕವಾಗಿ ಒಂದು ಜೊತೆ ಚಪ್ಪಲಿ, ಎರಡು ಟವೆಲ್, ನಾಲ್ಕು ಮಾಸ್ಕ್ ಮತ್ತು ಗ್ಲೌಸ್, ಒಂದು ರೈನ್ ಕೋಟ್, ಒಂದು ಸೀರೆ, ಒಂದು ಗಮ್ ಬೂಟ್, ಎರಡು ಜೊತೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ.

    ಪಾಲಿಕೆಯ ಖಾಯಂ ಮತ್ತು ನೇರ ಪಾವತಿ ಪೌರಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಮಾಸ್ಟರ್ ಹೆಲ್ತ್ ಚೆಕಪ್ ಮತ್ತು ಹೆಪಟೈಟಿಸ್ ಲಸಿಕಾ ಕಾರ್ಯಕ್ರಮವನ್ನು 0, 30 ಮತ್ತು 180 ದಿನಗಳ ಅಂತರದಲ್ಲಿ ಮೂರು ಡೋಸ್‍ಗಳಲ್ಲಿ ನೀಡಲಾಗುತ್ತಿದೆ. ಒಟ್ಟು 384 ಜಿ+1 ಮಾದರಿಯ ಮನೆಗಳನ್ನು ಗೃಹ ಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದು, ಮನೆಗಳು ನಿರ್ಮಾಣ ಹಂತದಲ್ಲಿದೆ ಎಂದು ಮಾಹಿತಿ ತಿಳಿಸಿದರು.

     ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 290 ಖಾಯಂ ಪೌರಕಾರ್ಮಿಕರು ಮತ್ತು 245 ನೇರಪಾವತಿ ಪೌರಕಾರ್ಮಿಕ, 08 ಖಾಯಂ ಕ್ಲೀನರ್, 11 ಹೊರಗುತ್ತಿಗೆ ಕ್ಲೀನರ್‍ಗಳು, 29 ಲೋಡರ್‍ಗಳು, 42 ಖಾಯಂ ಮತ್ತು 18 ಹೊರಗುತ್ತಿಗೆ ಯುಜಿಡಿ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದಾರೆ. ಖಾಯಂ ನೌಕರರಿಗೆ ಬೆಳಗಿನ ಉಪಹಾರ, ಸಾರ್ವತ್ರಿಕ ರಜಾ ದಿನ ಮತ್ತು ಹಬ್ಬದ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ವಿಶೇಷ ರಜಾ ದಿನಗಳಲ್ಲಿ(21 ದಿನಗಳು) ಭತ್ಯೆ ನೀಡಲಾಗುತ್ತಿದೆ. ಪ್ರತೀ ವರ್ಷ ಸೆಪ್ಟಂಬರ್ 23 ರಂದು ಪೌರಕಾರ್ಮಿಕ ದಿನಾಚರಣೆಯ ಅಂಗವಾಗಿ ರೂ.3500 ವಿಶೇಷ ಭತ್ಯೆ ಕೊಡಲಾಗುತ್ತಿದೆ ಎಂದರು.

    ಮಹಾನಗರಪಾಲಿಕೆ ವತಿಯಿಂದ 290 ಪೌರಕಾರ್ಮಿಕರಿಗೆ ಉಪಹಾರ ಭತ್ಯೆ ನೀಡಲಾಗುತ್ತಿದೆ. ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗಿದೆ ಎಂದು ತಿಳಿಸಿದರು.ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಸಮಿತಿಯ ಸದಸ್ಯ ವಾಸುದೇವ ಮಾತನಾಡಿ, ಪಾಲಿಕೆ ವತಿಯಿಂದ ನೀಡಿರುವ ಗುರುತಿನ ಚೀಡಿಯಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹಾಗೂ ಈಗ ಗುರುತಿಸಿರುವ 150 ಕುಟುಂಬದಲ್ಲಿ ಕನಿಷ್ಟ ಒಬ್ಬರಿಗಾದರೂ ಪಾಲಿಕೆಯಲ್ಲಿ ಟೆಂಡರ್ ಆಧಾರದ ಮೇಲೆ ಕೆಲಸ ಕೊಡಿಸಬೇಕು. ಮತ್ತು ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟೆಂಡರುದಾರರ ಟೆಂಡರ್ ಈಗಾಗಲೇ ಮುಗಿದಿದ್ದು, ಮುಂದಿನ ಟೆಂಡರ್ ಕರೆಯಬೇಕು ಎಂದರು.

      ಜಿಲ್ಲಾಧಿಕಾರಿ ಮಾತನಾಡಿ, ಈಗಾಗಲೇ ಟೆಂಡರ್ ಅವಧಿ ಮುಗಿದಿದ್ದರೆ. ಹೊಸ ಟೆಂಡರ್ ಕರೆಯಬೇಕು ಮತ್ತು ಮಧ್ಯದಲ್ಲಿ ಯಾರಾದರೂ ಟೆಂಡರ್ ವಾಪಸ್ ತೆಗೆದುಕೊಂಡರೆ ಅಂತಹ ಟೆಂಡರ್‍ದಾರರನ್ನು ಬ್ಲಾಕ್ ಲಿಸ್ಟ್ ಮಾಡುವಂತೆ ಸೂಚನೆ ನೀಡಿದರು.ಡಿಸ್ಟಿಕ್ ವಿಜೆಲೆನ್ಸ್ ಕಮಿಟಿ ಸದಸ್ಯ ಬಾಬಣ್ಣ ಮಾತನಾಡಿ, ಈಗಗಾಲೇ ಎನ್‍ಎಸ್‍ಕೆಎಫ್‍ಡಿಸಿ ಅರ್ಜಿಗಳನ್ನು ದೆಹಲಿಗೆ ಕಳುಹಿಸಿಕೊಡುವ ಕೊನೆಯ ದಿನಾಂಕವನ್ನು ತಿಳಿಸಬೇಕು. ಹಾಗೂ ಇಲಾಖೆಯ ಆಯವ್ಯಯ ತಯಾರಿಸುವ ಸಂದರ್ಭದಲ್ಲಿ Sc/St ಯೋಜನೆಯಡಿಯಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಾಗಿ ಸ್ಪಲ್ಪ ಪ್ರಮಾಣದ ಅನುದಾನ ನೀಡಬೇಕು ಹಾಗೂ ನಿಟ್ಟುವಳ್ಳಿಯ ಎ.ಕೆ ಕಾಲೋನಿಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಿರುವುದರಿಂದ ಹೆಲ್ತ್ ಕ್ಯಾಂಪ್ ಆಯೋಜಿಸಬೇಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆಯನ್ನು ನಡೆಸಬೇಕು ಎಂದರು.

        ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಜ.26 ರೊಳಗೆ ನಿಟ್ಟುವಳ್ಳಿಯ ಎ.ಕೆ ಕಾಲೋನಿಯಲ್ಲಿ ಹೆಲ್ತ್ ಕ್ಯಾಂಪ್ ಏರ್ಪಡಿಸಿ, ಜನಪ್ರತಿನಿಧಿಗಳಿಂದ ಚಾಲನೆ ನೀಡಿಸಿ ನಮ್ಮನ್ನು ಕರೆಯಿರಿ ಆ ಭಾಗದ ಜನರ ಆರೊಗ್ಯ ತಪಾಸಣೆ ನಡೆಸುವಂತೆ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿಗೆ ತಿಳಿಸಿದರು.

     ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸಲು ಜಾಥಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದರು ತಿಳಿಸಿದರು.ಜಿಲ್ಲಾಡಳಿತ ಭವನದ ಹಿಂಭಾಗ ಯಾವುದೇ ರೀತಿಯ ಇನ್‍ಸ್ಯಾನಿಟರಿ ಲೆಟ್ರಿನ್ (ತೆರೆದ ಮಲ ಗುಂಡಿ) ಇಲ್ಲವೆಂದು ಸ್ಥಳ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳು ಆರೋಪಿಸಿದ ವ್ಯಕ್ತಿಗೆ ಎಚ್ಚರಿಕೆ ನೀಡುತ್ತಿರುವುದು.

     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ ಮುದಜ್ಜಿ, ಉಪ ಆಯುಕ್ತ ಗದುಗೇಶ್ ಸಿರ್ಸಿ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ರಾಘವೇಂದ್ರ ಸ್ವಾಮಿ, ಸಪಾಯಿ ಕಾರ್ಮಚಾರಿ ಸಂಘದ ರಾಜ್ಯ ಸಮಿತಿಯ ಸಂಚಾಲಕ ಬಾಬುಲಾಲ್, ದಾವಣಗೆರೆ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಾರುಕೇಶ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ದಾವಣಗೆರೆ ಸಫಾಯಿ ಕಾರ್ಮಚಾರಿ ಸಮಿತಿಯ ನೀಲಗಿರಿಯಪ್ಪ, ಮಂಜಮ್ಮ, ಗಂಗಮ್ಮ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link